Advertisement
ದಿಢೀರನೇ ಆಯೋಜಿಸಲಾದ ಈ ಸರಣಿಯಲ್ಲಿ 5 ಏಕದಿನ ಪಂದ್ಯ ಒಳಗೊಂಡಿದೆ. ನೇಪಿಯರ್‌ನಲ್ಲಿ ಬುಧವಾರ ಮೊದಲ ಮುಖಾಮುಖೀ ಸಾಗಲಿದೆ.
Related Articles
Advertisement
ಮಧ್ಯಮ ಕ್ರಮಾಂಕಕ್ಕೆ ಹೆಚ್ಚಿನ ಪ್ರಾಧಾನ್ಯಭಾರತದ ತಂಡವನ್ನು ಗಮನಿಸಿದರೆ ಅಗ್ರ ಕ್ರಮಾಂಕ ಬಲಿಷ್ಠವಾಗಿದೆ. ಎಡಗೈ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರ ಫಾರ್ಮ್ ಬಗ್ಗೆ ಹೆದರುವ ಅಗತ್ಯವಿಲ್ಲ. ಆದರೆ ಕಳೆದ 9 ಪಂದ್ಯಗಳಲ್ಲಿ ಅವರದು ನೀರಸ ಬ್ಯಾಟಿಂಗ್. ಈ ವೇಳೆ 35 ರನ್ ಗಳಿಸಿದ್ದು ಗರಿಷ್ಠ ಮೊತ್ತವಾಗಿತ್ತು. ಇಂಗ್ಲೆಂಡ್ ಲಯನ್ಸ್ ತಂಡದ ವಿರುದ್ಧದ ಪಂದ್ಯಕ್ಕಾಗಿ ರಿಷಬ್ ಪಂತ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಪ್ರತಿಭಾನ್ವಿತ ಶುಭ್‌ಮನ್ ಗಿಲ್ ಅವರನ್ನು ಮೀಸಲು ಆರಂಭಿಕರಾಗಿ ಆಯ್ಕೆ ಮಾಡಲಾಗಿದೆ. ಅವರು ಧವನ್ ಬದಲಿಗೆ ತಂಡಕ್ಕೆ ಆಯ್ಕೆಯಾಗುವ ಸಂಭವವಿದೆ. ಭಾರತ ಗಮನ ಹರಿಸಬೇಕಾದ ಮತ್ತೂಂದು ಸ್ಥಾನ ನಂ. 4. ಈ ಸ್ಥಾನವನ್ನು ಸದ್ಯ ಅಂಬಟಿ ರಾಯುಡು ಭದ್ರಪಡಿಸಿಕೊಳ್ಳುವ ಉತ್ಸಾಹ ದಲ್ಲಿದ್ದಾರೆ. ಆಸ್ಟ್ರೇಲಿಯ ವಿರುದ್ಧದ ಸರಣಿಯಲ್ಲಿ ಧೋನಿ 4ನೇ ಸ್ಥಾನದಲ್ಲಿ ಆಡಿದ್ದು, ನಾಯಕ ಕೊಹ್ಲಿ ಪಂದ್ಯದ ಸನ್ನಿವೇಶಕ್ಕೆ ಅನುಗುಣವಾಗಿ ಅವರನ್ನು ಬಳಸಿಕೊಳ್ಳುವ ಸಾಧ್ಯತೆಯಿದೆ. ನೇಪಿಯರ್ ಮೈದಾನ ರನ್ ಹೊಳೆಗೆ ಉತ್ತಮವಾಗಿರುವುದರಿಂದ ದಿನೇಶ್ ಕಾರ್ತಿಕ್ ಅಥವಾ ಕೇದಾರ್ ಜಾಧವ್ ಅಗ್ರ ಕ್ರಮಾಂಕದಲ್ಲಿ ಆಡುವ ಸಾಧ್ಯತೆಯಿದೆ. ಬೌಲಿಂಗ್ ವಿಭಾಗದಲ್ಲಿ ಭಾರತ ಸಾಕಷ್ಟು ಬಲಿಷ್ಠವಾಗಿದ್ದು, ಭುವನೇಶ್ವರ್ ಕುಮಾರ್, ಮೊಹ್ಮಮದ್ ಶಮಿ ಅವರ ಕೈಚಳಕ ನಡೆಯುವ ಭರವಸೆಯಿದೆ. ಮೂರನೇ ವೇಗಿಯಾಗಿ ಮೊಹಮ್ಮದ್ ಸಿರಾಜ್ ಅಥವಾ ಖಲೀಲ್ ಅಹ್ಮದ್ ಇವರಿಬ್ಬರಲ್ಲಿ ಓರ್ವನನ್ನು ಆಯ್ಕೆ ಮಾಡಲೂಬಹುದು. ತವರಿನಲ್ಲಿ ನ್ಯೂಜಿಲ್ಯಾಂಡ್ ತಂಡ ಉತ್ಕೃಷ್ಟ ನಿರ್ವಹಣೆ ನೀಡುತ್ತಿದೆ. ತಂಡದ ಅಗ್ರಕ್ರಮಾಂಕದ ಆಟಗಾರರ ಶ್ರೇಷ್ಠ ನಿರ್ವಹಣೆಯಿಂದ ತಂಡ ಬಲಿಷ್ಠವಾಗಿದೆ. ನಾಯಕ ಕೇನ್ ವಿಲಿಯಮ್ಸನ್, ಮಾರ್ಟಿನ್ ಗಪ್ಟಿಲ್ ಮತ್ತು ರಾಸ್ ಟೇಲರ್ ಅಪಾಯಕಾರಿ ಆಟಗಾರರಾಗಿದ್ದಾರೆ. ಟಾಮ್ ಲಾಥಂ ಅವರ ಆಗಮನದಿಂದ ಮಧ್ಯಮ ಕ್ರಮಾಂಕ ಮತ್ತಷ್ಟು ಬಲಗೊಂಡಿದೆ. ನೇಪಿಯರ್: ಬ್ಯಾಟಿಂಗ್ ಸ್ವರ್ಗ
ಇಲ್ಲಿನ “ಮೆಕ್‌ಲೀನ್ ಪಾರ್ಕ್’ ಬ್ಯಾಟ್ಸ್‌ಮನ್‌ಗಳ ಪಾಲಿನ ಸ್ವರ್ಗವಾಗಿದ್ದು, ಧಾರಾಳ ರನ್ ಹರಿದು ಬರುವ ನಿರೀಕ್ಷೆ ಇದೆ. ಇದಕ್ಕೆ 2018-19ನೇ ಸಾಲಿನ ಸೆಂಟ್ರಲ್ ಡಿಸ್ಟ್ರಿಕ್ಟ್-ಕ್ಯಾಂಟರ್‌ಬರಿ ತಂಡಗಳ ನಡುವಿನ “ಸೂಪರ್ ಸ್ಮ್ಯಾಶ್’ ಟಿ20 ಪಂದ್ಯವೇ ಸಾಕ್ಷಿ. ಮೊದಲು ಬ್ಯಾಟಿಂಗ್ ನಡೆಸಿದ ಟಾಮ್ ಬ್ರೂಸ್ ನಾಯಕತ್ವದ ಸಿ.ಡಿ. ತಂಡ 3 ವಿಕೆಟಿಗೆ 225 ರನ್ ರಾಶಿ ಹಾಕಿತ್ತು. ಚೇಸಿಂಗ್ ವೇಳೆ ಟಾಮ್ ಲ್ಯಾಥಂ 60 ಎಸೆತಗಳಿಂದ 110 ರನ್ ಸಿಡಿಸಿದ್ದರು. ಫಲಿತಾಂಶ ಏನೇ ಆಗಿರಲಿ, ಭಾರತ-ನ್ಯೂಜಿಲ್ಯಾಂಡ್ ನಡುವಿನ ಪಂದ್ಯದ ವೇಳೆ ನೇಪಿಯರ್ ಟ್ರ್ಯಾಕ್‌ನಲ್ಲಿ ಹೆಚ್ಚಿನ ಬದಲಾವಣೆಯಾಗುವ ಸಂಭವ ಇಲ್ಲ. ಮೊದಲು ಬ್ಯಾಟಿಂಗ್ ನಡೆಸುವ ತಂಡ 300 ರನ್ ಗಡಿ ದಾಟುವುದರಲ್ಲಿ ಅನುಮಾನವಿಲ್ಲ. ಹಾಗೆಯೇ ಇಂಥ ದೊಡ್ಡ ಮೊತ್ತವನ್ನು ಬೆನ್ನಟ್ಟುವುದೂ ಇಲ್ಲಿ ಸಮಸ್ಯೆಯಾಗಿ ಕಾಡದು. ಮೊದಲ 10 ಓವರ್‌ಗಳ ಪವರ್-ಪ್ಲೇ ವೇಳೆ ವಿಕೆಟ್ ಉರುಳುವ ಸಾಧ್ಯತೆಯೂ ಕಡಿಮೆ ಎಂಬುದು ಸದ್ಯದ ಲೆಕ್ಕಾಚಾರ. ಹೀಗಾಗಿ ನೇಪಿಯರ್ ಟ್ರ್ಯಾಕ್ ಬೌಲರ್‌ಗಳ ಜಾಣ್ಮೆಗೆ ಸವಾಲಾಗುವುದರಲ್ಲಿ ಅನುಮಾನವಿಲ್ಲ.