Advertisement

ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌: ವಾವ್ರಿಂಕ ಔಟ್‌ ಒಸಾಕಾ ಓಟ

12:30 AM Jan 18, 2019 | Team Udayavani |

ಮೆಲ್ಬರ್ನ್: 2014ರ ಚಾಂಪಿಯನ್‌ ಸ್ಟಾನಿಸ್ಲಾಸ್‌ ವಾವ್ರಿಂಕ ಆಸ್ಟ್ರೇಲಿಯನ್‌ ಓಪನ್‌ ಪಂದ್ಯಾವಳಿಯಿಂದ ನಿರ್ಗಮಿಸಿದ್ದಾರೆ. ಇದು ಗುರುವಾರದ ಅಚ್ಚರಿಯ ಫ‌ಲಿತಾಂಶವಾಗಿ ದಾಖಲಾಗಿದೆ. ಕೆನಡಾದ ಮಿಲೋಸ್‌ ರಾನಿಕ್‌ ಭಾರೀ ಹೋರಾಟದ ಬಳಿಕ 6-7 (4), 7-6 (6), 7-6 (11), 7-6 (5) ಅಂತರದಿಂದ ವಾವ್ರಿಂಕ ಆಟಕ್ಕೆ ತೆರೆ ಎಳೆದರು.

Advertisement

16ನೇ ಶ್ರೇಯಾಂಕದ ಮಿಲೋಸ್‌ ರಾನಿಕ್‌ 3ನೇ ಸುತ್ತಿನಲ್ಲಿ ಫ್ರಾನ್ಸ್‌ನ ಪಿಯರೆ ಹ್ಯೂಸ್‌ ಹರ್ಬರ್ಟ್‌ ಅವರನ್ನು ಎದುರಿಸಲಿದ್ದಾರೆ. ಅವರು ಕಳೆದ ವರ್ಷದ ಸೆಮಿಫೈನಲಿಸ್ಟ್‌ ಚುಂಗ್‌ ಹಿಯೋನ್‌ ವಿರುದ್ಧ ಗೆದ್ದು ಬಂದರು.

ನಂ.1 ಆಟಗಾರ ನೊವಾಕ್‌ ಜೊಕೋವಿಕ್‌ ಫ್ರಾನ್ಸ್‌ನ ಬಲಿಷ್ಠ ಆಟಗಾರ ಜೋ ವಿಲ್‌ಫ್ರೆಂಡ್‌ ಸೋಂಗ ವಿರುದ್ಧ 6-3, 7-5,  —- ಅಂತರದಿಂದ ಗೆದ್ದು 3ನೇ ಸುತ್ತಿಗೆ ಮುನ್ನಡೆದಿದ್ದಾರೆ.

ಉಳಿದಂತೆ ವಿಲಿಯಮ್ಸ್‌ ಸೋದರಿಯರು, ನವೋಮಿ ಒಸಾಕಾ, ಕ್ಯಾರೋಲಿನಾ ಪ್ಲಿಸ್ಕೋವಾ ಅವರೆಲ್ಲ ವನಿತಾ ಸಿಂಗಲ್ಸ್‌ ವಿಭಾಗದಿಂದ ಮೂರನೇ ಸುತ್ತು ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸೆರೆನಾಗೆ ಸುಲಭ ಜಯ
ಗ್ರ್ಯಾನ್‌ಸ್ಲಾಮ್‌ ದಾಖಲೆ ಮೇಲೆ ಕಣ್ಣಿಟ್ಟಿರುವ ಸೆರೆನಾ ವಿಲಿಯಮ್ಸ್‌ ಕೆನಡಾದ ಯುಗೇನಿ ಬೌಶಾರ್ಡ್‌ ವಿರುದ್ಧ 6-2, 6-2 ಅಂತರದ ಸುಲಭ ಜಯ ದಾಖಲಿಸಿದರು. ಮುಂದಿನ ಎದುರಾಳಿ ಉಕ್ರೇನಿನ ಡಯಾನಾ ಯಾಸ್ಟ್ರೆಮ್‌ಸ್ಕಾ. ಈಗಾಗಲೇ ಸಮಂತಾ ಸ್ಟೋಸರ್‌, ಕಾರ್ಲಾ ಸೂರೆಜ್‌ ನವಾರೊ ಅವರನ್ನು ಸೋಲಿಸಿ ಸುದ್ದಿಯಾಗಿರುವ ಯಾಸ್ಟ್ರೆಮ್‌ಸ್ಕಾ ವಿರುದ್ಧ ಸೆರೆನಾ ಎಚ್ಚರಿಕೆಯ ಹೆಜ್ಜೆಗಳನ್ನಿಡಬೇಕಿದೆ.

Advertisement

ವೀನಸ್‌-ಹಾಲೆಪ್‌ ಮುಖಾಮುಖೀ
ಅಕ್ಕ ವೀನಸ್‌ ವಿಲಿಯಮ್ಸ್‌ 3 ಸೆಟ್‌ಗಳ ಹೋರಾಟದ ಬಳಿಕ ಫ್ರಾನ್ಸ್‌ನ ಅಲೈಜ್‌ ಕಾರ್ನೆಟ್‌ ಅವರನಜು° 6-3, 4-6, 6-0 ಅಂತರದಿಂದ ಮಣಿಸಿದರು. 3ನೇ ಸುತ್ತಿನಲ್ಲಿ ನಂಬರ್‌ ವನ್‌ ಹಾಗೂ ಕೂಟದ ನೆಚ್ಚಿನ ಆಟಗಾರ್ತಿಯರಲ್ಲಿ ಒಬ್ಬರಾದ ಸಿಮೋನಾ ಹಾಲೆಪ್‌ ವಿರುದ್ಧ ವೀನಸ್‌ ಸೆಣಸಲಿದ್ದಾರೆ.

ದಿನದ ಇನ್ನೊಂದು ಪಂದ್ಯದಲ್ಲಿ ರೊಮೇನಿಯಾದ ಸಿಮೋನಾ ಹಾಲೆಪ್‌ ಅಮೆರಿಕದ ಶ್ರೇಯಾಂಕ ರಹಿತ ಆಟಗಾರ್ತಿ ಸೋಫಿಯಾ ಕೆನಿನ್‌ ವಿರುದ್ಧ 6-3, 6-7 (5-7), 6-4 ಅಂತರದಿಂದ ಗೆದ್ದು ಬಂದರು. 20ರ ಹರೆಯದ ಕೆನಿನ್‌ ಸೋತರೂ ನಿರೀಕ್ಷೆಗೂ ಮೀರಿದ ಪ್ರದರ್ಶನದೊಂದಿಗೆ ಕ್ರೀಡಾಭಿಮಾನಿಗಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾದರು.

ಜಪಾನಿನ ಭರವಸೆಯ ಆಟಗಾರ್ತಿ ನವೋಮಿ ಒಸಾಕಾ ಸ್ಲೊವೇನಿಯಾದ ಶ್ರೇಯಾಂಕ ರಹಿತ ಆಟಗಾರ್ತಿ ಟಮಾರ ಜಿದಾನ್ಸೆಕ್‌ ವಿರುದ್ಧ 6-2, 6-4 ಅಂತರದ ಜಯ ಒಲಿಸಿಕೊಂಡರು. ಈ ಪಂದ್ಯಕ್ಕೆ ಮಳೆಯಿಂದ ಅಡ್ಡಿಯಾದ್ದರಿಂದ ಛಾವಣಿಯನ್ನು ಮುಚ್ಚಿ ಆಟ ಮುಂದುವರಿಸಲಾಯಿತು. ಒಸಾಕಾ ಅವರ ಮುಂದಿನ ಎದುರಾಳಿ ತೈವಾನ್‌ನ ಸೀ ಸು ವೀ.

7ನೇ ಶ್ರೇಯಾಂಕದ ಜೆಕ್‌ ಆಟಗಾರ್ತಿ ಕ್ಯಾರೋಲಿನಾ ಪ್ಲಿಸ್ಕೋವಾ ಅಮೆರಿಕದ ಮ್ಯಾಡಿಸನ್‌ ಬ್ರೆಂಗಲ್‌ ವಿರುದ್ಧ ಮೊದಲ ಸೆಟ್‌ ಕಳೆದುಕೊಂಡ ಬಳಿಕ ದಿಟ್ಟ ಹೋರಾಟ ಸಂಘಟಿಸಿ ಗೆದ್ದು ಬಂದರು. ಅಂತರ  4-6, 6-1, 6-0. ಈ ಪಂದ್ಯಕ್ಕೂ ಮಳೆ ಅಡಚಣೆಯೊಡ್ಡಿತ್ತು.

ಬೋಲ್ಟ್, ನಿಶಿಕೊರಿ ಭರ್ಜರಿ ಆಟ
ವೈಲ್ಡ್‌ಕಾರ್ಡ್‌ ಮೂಲಕ ಪ್ರವೇಶ ಪಡೆದ ಆಸ್ಟ್ರೇಲಿಯದ ಅಲೆಕ್ಸ್‌ ಬೋಲ್ಟ್ ಭರ್ಜರಿ ಪ್ರದರ್ಶನವೊಂದನ್ನು ನೀಡಿ ತವರಿನ ಅಭಿಮಾನಿಗಳನ್ನು ರಂಜಿಸಿದ್ದಾರೆ. ಅವರು 29ನೇ ಶ್ರೇಯಾಂಕದ ಗಿಲ್ಲೆಸ್‌ ಸಿಮೋನ್‌ಗೆ 2-6, 6-4, 4-6, 7-6 (10-8), 6-4 ಅಂತರದ ಸೋಲುಣಿಸಿ ಮೆರೆದರು.ಜಪಾನಿನ ಕೀ ನಿಶಿಕೊರಿ ಕ್ರೊವೇಶಿಯಾದ ಐವೋ ಕಾರ್ಲೋವಿಕ್‌ ವಿರುದ್ಧ ಭಾರೀ ಹೋರಾಟ ನಡೆಸಿ 6-3, 7-6 (8-6), 5-7, 5-7, 7-6 (10-7) ಅಂತರದಿಂದ ಗೆದ್ದು ನಿಟ್ಟುಸಿರೆಳೆದರು.

ಫ್ರೆಂಚ್‌ ಓಪನ್‌ ಫೈನಲಿಸ್ಟ್‌ ಡೊಮಿನಿಕ್‌ ಥೀಮ್‌ ಪಂದ್ಯದ ನಡುವೆ ಅನಾರೋಗ್ಯಕ್ಕೊಳಗಾಗಿ ಹೊರನಡೆದರು. ಆಸ್ಟ್ರೇಲಿಯದ ಅಲೆಕ್ಸಿ ಪೊಪಿರಿನ್‌ ವಿರುದ್ಧ ಸೆಣಸುತ್ತಿದ್ದ ಅವರು 7-5, 6-4, 2-0 ಹಿನ್ನಡೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next