Advertisement

ವೆಸ್ಟ್‌ ಇಂಡೀಸ್‌ ವಿರುದ್ಧ ಆಸ್ಟ್ರೇಲಿಯ ವಿಜಯ

10:08 PM Nov 06, 2021 | Team Udayavani |

ಅಬುಧಾಬಿ: ಹಾಲಿ ಚಾಂಪಿಯನ್‌ ವೆಸ್ಟ್‌ ಇಂಡೀಸ್‌ ಮತ್ತೊಂದು ಹೀನಾಯ ಸೋಲಿನೊಂದಿಗೆ ಟಿ20 ವಿಶ್ವಕಪ್‌ ಪಂದ್ಯಾವಳಿ ಅಭಿಯಾನವನ್ನು ಪೂರ್ತಿಗಳಿಸಿತು. ಶನಿವಾರದ ತನ್ನ ಅಂತಿಮ ಸೂಪರ್‌-12 ಪಂದ್ಯದಲ್ಲಿ ಅದು ಆಸ್ಟ್ರೇಲಿಯ ಕೈಯಲ್ಲಿ 8 ವಿಕೆಟ್‌ಗಳಿಂದ ಪರಾಭವಗೊಂಡಿತು. ಇದರಿಂದ ಕಾಂಗರೂ ಪಡೆ ತನ್ನ ಅಂಕವನ್ನು 8ಕ್ಕೆ, ರನ್‌ರೇಟನ್ನು +1.216ಕ್ಕೆ ಏರಿಸಿಕೊಂಡಿತು.

Advertisement

ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ವೆಸ್ಟ್‌ ಇಂಡೀಸ್‌ 20 ಓವರ್‌ಗಳಲ್ಲಿ 7 ವಿಕೆಟಿಗೆ 157 ರನ್‌ ಗಳಿಸಿದರೆ, ಡೇವಿಡ್‌ ವಾರ್ನರ್‌-ಮಿಚೆಲ್‌ ಮಾರ್ಷ್‌ ಜೋಡಿಯ ಶತಕದ ಜತೆಯಾಟದಿಂದ ಆಸ್ಟ್ರೇಲಿಯ ಬಹಳ ಸುಲಭದಲ್ಲಿ ಗುರಿ ಬೆನ್ನಟ್ಟಿತು. 16.2 ಓವರ್‌ಗಳಲ್ಲಿ 2 ವಿಕೆಟಿಗೆ 161 ರನ್‌ ರಾಶಿ ಹಾಕಿತು.

ವಾರ್ನರ್‌ 20ನೇ ಅರ್ಧಶತಕ: ಎಡಗೈ ಓಪನರ್‌ ಡೇವಿಡ್‌ ವಾರ್ನರ್‌ ಅವರ 20ನೇ ಅರ್ಧಶತಕ ಆಸೀಸ್‌ ಸರದಿಯ ಆಕರ್ಷಣೆ ಆಗಿತ್ತು. ತೀವ್ರ ಬ್ಯಾಟಿಂಗ್‌ ಬರಗಾಲದಲ್ಲಿದ್ದ ವಾರ್ನರ್‌ ಅಜೇಯ 89 ರನ್‌ ಬಾರಿಸಿ ಮೆರೆದರು. 56 ಎಸೆತಗಳ ಈ ರಂಜನೀಯ ಇನಿಂಗ್ಸ್‌ನಲ್ಲಿ 9 ಫೋರ್‌, 4 ಸಿಕ್ಸರ್‌ ಒಳಗೊಂಡಿತ್ತು.

ಸ್ಕೋರ್‌ ಸಮನಾದಾಗ ಮಿಚೆಲ್‌ ಮಾರ್ಷ್‌ ಅವರನ್ನು ಕ್ರಿಸ್‌ ಗೇಲ್‌ ಬಲೆಗೆ ಬೀಳಿಸಿದರು. ಇದು ಗೇಲ್‌ ಅವರ ಕೊನೆಯ ವಿಕೆಟ್‌ ಆಗಿ ದಾಖಲಾಯಿತು. ಮಾರ್ಷ್‌ ಗಳಿಕೆ 32 ಎಸೆತಗಳಿಂದ 53 ರನ್‌. 5 ಬೌಂಡರಿ, 2 ಸಿಕ್ಸರ್‌ ಇದರಲ್ಲಿ ಒಳಗೊಂಡಿತ್ತು. ವಾರ್ನರ್‌-ಮಾರ್ಷ್‌ ದ್ವಿತೀಯ ವಿಕೆಟಿಗೆ 75 ಎಸೆತಗಳಿಂದ 124 ರನ್‌ ಪೇರಿಸಿದರು.

ಇದನ್ನೂ ಓದಿ:ಬಾಂಬ್ ಸ್ಫೋಟ ನಡೆಯಲಿದೆ…ಟಿವಿ ಚಾನೆಲ್ ಗೆ ಇ-ಮೇಲ್ ಕಳುಹಿಸಿದ್ದ ವ್ಯಕ್ತಿಯ ಬಂಧನ

Advertisement

ಆಧರಿಸಿ ನಿಂತ ಪೊಲಾರ್ಡ್‌: ನಾಯಕ ಕೈರನ್‌ ಪೊಲಾರ್ಡ್‌ ಕೊನೆಯ ಹಂತದಲ್ಲಿ ಬಿರುಸಿನ ಆಟವಾಡಿದ್ದರಿಂದ ವೆಸ್ಟ್‌ ಇಂಡೀಸ್‌ ನೂರೈವತ್ತರ ಗಡಿ ದಾಟಿತು. ಪೊಲಾರ್ಡ್‌ 31 ಎಸೆತಗಳಿಂದ 44 ರನ್‌ ಬಾರಿಸಿದರು (4 ಬೌಂಡರಿ, 1 ಸಿಕ್ಸರ್‌).

ಆರಂಭಕಾರ ಎವಿನ್‌ ಲೆವಿಸ್‌ (29) ಮತ್ತು ಕ್ರಿಸ್‌ ಗೇಲ್‌ (15) ಬಿರುಸಿನ ಆರಂಭ ಒದಗಿಸಿದರೂ 35 ರನ್‌ ಅಂತರದಲ್ಲಿ ಪೂರನ್‌ (4) ಸೇರಿದಂತೆ 3 ವಿಕೆಟ್‌ ಉರುಳಿದ್ದರಿಂದ ವಿಂಡೀಸ್‌ ಒತ್ತಡಕ್ಕೆ ಸಿಲುಕಿತು. ಅಂತಿಮ ಟಿ20 ಇನಿಂಗ್ಸ್‌ನಲ್ಲಿ ಗೇಲ್‌ ಹೊಡೆದದ್ದು 15 ರನ್‌. 9 ಎಸೆತ ಎದುರಿಸಿದ ಅವರು 2 ಸಿಕ್ಸರ್‌ ಎತ್ತಿ ರಂಜಿಸಿದರು. ಹೆಟ್‌ಮೈರ್‌ 27, ರಸೆಲ್‌ 7 ಎಸೆತಗಳಿಂದ ಅಜೇಯ 18 ರನ್‌ ಮಾಡಿದರು. ವಿದಾಯದ ಇನಿಂಗ್ಸ್‌ನಲ್ಲಿ ಡ್ವೇನ್‌ ಬ್ರಾವೊ 10 ರನ್‌ ಹೊಡೆದರು. ಆದರೆ ವಿಕೆಟ್‌ ಉರುಳಿಸುವಲ್ಲಿ ವಿಫ‌ಲರಾದರು.

ಸಂಕ್ಷಿಪ್ತ ಸ್ಕೋರ್‌: ವೆಸ್ಟ್‌ ಇಂಡೀಸ್‌ 20 ಓವರ್‌, 157/7 (ಪೊಲಾರ್ಡ್‌ 44, ಲೆವಿಸ್‌ 29, ಹೆಟ್‌ಮೈರ್‌ 27, ಹೇಝಲ್‌ವುಡ್‌ 39ಕ್ಕೆ 4). ಆಸ್ಟ್ರೇಲಿಯ 20 ಓವರ್‌, 16.2 ಓವರ್‌ಗಳಲ್ಲಿ 161/2 (ವಾರ್ನರ್‌ 89, ಮಾರ್ಷ್‌ 53, ಗೇಲ್‌ 7ಕ್ಕೆ 1).

Advertisement

Udayavani is now on Telegram. Click here to join our channel and stay updated with the latest news.

Next