ಕೊಲಂಬೊ: ಆಸ್ಟ್ರೇಲಿಯ ವಿರುದ್ಧದ ಅಂತಿಮ ಏಕದಿನ ಪಂದ್ಯವನ್ನು 4 ವಿಕೆಟ್‌ಗಳಿಂದ ಕಳೆದುಕೊಂಡರೂ ಸರಣಿಯನ್ನು 3-2 ಅಂತರದಿಂದ ಗೆಲ್ಲುವ ಮೂಲಕ ಶ್ರೀಲಂಕಾ ಸಂಭ್ರಮ ಆಚರಿಸಿದೆ. ಇದು ಆಸ್ಟ್ರೇಲಿಯ ವಿರುದ್ಧ ತವರಲ್ಲಿ ಶ್ರೀಲಂಕಾ ಗೆದ್ದ ಮೊದಲ ಏಕದಿನ ಸರಣಿ.
5ನೇ ಮುಖಾಮುಖಿ ಸಣ್ಣ ಮೊತ್ತದ ಹೋರಾಟಕ್ಕೆ ಸಾಕ್ಷಿಯಾಯಿತು. ಶ್ರೀಲಂಕಾ 43.1 ಓವರ್‌ಗಳಲ್ಲಿ 160 ರನ್ನಿಗೆ ಕುಸಿದರೆ, ಆಸ್ಟ್ರೇಲಿಯ 39.3 ಓವರ್‌ಗಳಲ್ಲಿ 6 ವಿಕೆಟಿಗೆ 164 ರನ್ ಬಾರಿಸಿ ತನ್ನ ಸರಣಿ ಸೋಲಿನ ಅಂತರವನ್ನು ತಗ್ಗಿಸಿಕೊಂಡಿತು.
ಶ್ರೀಲಂಕಾ ಒಂದು ಹಂತದಲ್ಲಿ ನೂರರ ಗಡಿಯನ್ನು ದಾಟುವುದೂ ಅನುಮಾನವಿತ್ತು. 25ನೇ ಓವರ್ ವೇಳೆ 85 ರನ್ನಿಗೆ 8 ವಿಕೆಟ್ ಉರುಳಿತ್ತು. ಆದರೆ 8ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬಂದ ಚಮಿಕ ಕರುಣಾರತ್ನೆ ಮುನ್ನುಗ್ಗಿ ಬಾರಿಸಿ ಮೊತ್ತವನ್ನು 160ಕ್ಕೆ ಏರಿಸುವಲ್ಲಿ ಯಶಸ್ವಿಯಾದರು. ಕರುಣಾರತ್ನೆ ಎಸೆತಕ್ಕೊಂದರಂತೆ 75 ರನ್ ಹೊಡೆದರು. ಸಿಡಿಸಿದ್ದು 8 ಬೌಂಡರಿ ಹಾಗೂ 2 ಸಿಕ್ಸರ್. ಲಂಕಾ ಸೋತರೂ ಈ ಬ್ಯಾಟಿಂಗ್ ಸಾಹಸಕ್ಕಾಗಿ ಕರುಣಾರತ್ನೆ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು.
ಕಾಂಗರೂ ಪಡೆ ಕೂಡ ಬ್ಯಾಟಿಂಗ್ ಕುಸಿತಕ್ಕೆ ಸಿಲುಕಿತು. 19ಕ್ಕೆ 3, 121ಕ್ಕೆ 6 ವಿಕೆಟ್ ಬಿದ್ದಾಗ ಸೋಲಿನ ಭೀತಿಯಲ್ಲಿತ್ತು. ಆದರೆ ಅಲೆಕ್ಸ್ ಕ್ಯಾರಿ (ಔಟಾಗದೆ 45) ಮತ್ತು ಕ್ಯಾಮರಾನ್ ಗ್ರೀನ್ (ಅಜೇಯ 25) ಸೇರಿಕೊಂಡು ತಂಡವನ್ನು ದಡ ಮುಟ್ಟಿಸಿದರು.
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ-43.1 ಓವರ್‌ಗಳಲ್ಲಿ 160 (ಕರುಣಾರತ್ನೆ 75, ಮೆಂಡಿಸ್ 26, ಹೇಝಲ್‌ವುಡ್ 22ಕ್ಕೆ 2, ಕಮಿನ್ಸ್ 22ಕ್ಕೆ 2, ಕನೆಮನ್ 26ಕ್ಕೆ 2). ಆಸ್ಟ್ರೇಲಿಯ-39.3 ಓವರ್‌ಗಳಲ್ಲಿ 6 ವಿಕೆಟಿಗೆ 164 (ಕ್ಯಾರಿ ಅಜೇಯ 45, ಲಬುಶೇನ್ 31, ಗ್ರೀನ್ ಅಜೇಯ 25, ಮಾರ್ಷ್ 24, ವೆಲ್ಲಲಗೆ 42ಕ್ಕೆ 3, ತೀಕ್ಷಣ 26ಕ್ಕೆ 2).
ಪಂದ್ಯಶ್ರೇಷ್ಠ: ಚಮಿಕ ಕರುಣಾರತ್ನೆ. ಸರಣಿಶ್ರೇಷ್ಠ: ಕುಸಲ್ ಮೆಂಡಿಸ್.