ಬ್ರಿಸ್ಬೇನ್: ಪ್ರವಾಸಿ ವೆಸ್ಟ್ ಇಂಡೀಸ್ ಎದುರಿನ ಎರಡು ಪಂದ್ಯಗಳ ಕಿರು ಟಿ20 ಸರಣಿ ಆಸ್ಟ್ರೇಲಿಯ ಪಾಲಾಗಿದೆ.
ಶುಕ್ರವಾರ ಬ್ರಿಸ್ಬೇನ್‌ನಲ್ಲಿ ನಡೆದ ದ್ವಿತೀಯ ಮುಖಾಮುಖಿಯನ್ನು ಕಾಂಗರೂ ಪಡೆ 31 ರನ್ನುಗಳಿಂದ ಗೆದ್ದು ಈ ಸಾಧನೆಗೈದಿತು.
ಓಪನರ್ ಡೇವಿಡ್ ವಾರ್ನರ್ ಅವರ “ಮುಕ್ಕಾಲು ಶತಕ’ದ ನೆರವಿನಿಂದ ಆಸ್ಟ್ರೇಲಿಯ 7 ವಿಕೆಟಿಗೆ 178 ರನ್ ಬಾರಿಸಿತು. ಜವಾಬಿತ್ತ ವೆಸ್ಟ್ ಇಂಡೀಸ್ 8 ವಿಕೆಟ್ ನಷ್ಟಕ್ಕೆ 147 ರನ್ ಮಾಡಿ ಶರಣಾಯಿತು. ಕ್ವೀನ್ಸ್‌ಲ್ಯಾಂಡ್‌ನಲ್ಲಿ ನಡೆದ ಮೊದಲ ಪಂದ್ಯವನ್ನು ಆಸ್ಟ್ರೇಲಿಯ 3 ವಿಕೆಟ್‌ಗಳಿಂದ ಜಯಿಸಿತ್ತು.
ಕ್ಯಾಮರಾನ್ ಗ್ರೀನ್ (1) ಅವರನ್ನು 10 ರನ್ ಆಗಿದ್ದಾಗ ಕಳೆದುಕೊಂಡ ಆಸ್ಟ್ರೇಲಿಯಕ್ಕೆ ಡೇವಿಡ್ ವಾರ್ನರ್ ಆಸರೆಯಾದರು. ನಾಯಕ ಫಿಂಚ್ ಜತೆಗೂಡಿ ದ್ವಿತೀಯ ವಿಕೆಟಿಗೆ 85 ರನ್ ಪೇರಿಸಿದರು.
75 ರನ್ನಿಗೆ ವಾರ್ನರ್ ಎದುರಿಸಿದ್ದು ಕೇವಲ 41 ಎಸೆತ. ಸಿಡಿಸಿದ್ದು 10 ಬೌಂಡರಿ ಮತ್ತು 3 ಸಿಕ್ಸರ್. ಅವರ ಈ ಸಾಧನೆಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದು ಬಂತು.
ಕೆಳ ಕ್ರಮಾಂಕದಲ್ಲಿ ಟಿಮ್ ಡೇವಿಡ್ ಬಿರುಸಿನ ಆಟಕ್ಕಿಳಿದು ತಂಡದ ಮೊತ್ತವನ್ನು ನೂರೈವತ್ತರ ಗಡಿ ದಾಟಿಸಿದರು. ಡೇವಿಡ್ ಗಳಿಕೆ 20 ಎಸೆತಗಳಿಂದ 42 ರನ್ (4 ಬೌಂಡರಿ, 3 ಸಿಕ್ಸರ್). ಅಲ್ಜಾರಿ ಜೋಸೆಫ್ 3 ವಿಕೆಟ್ ಉರುಳಿಸಿದರು.
ಸ್ಟಾರ್ಕ್ ಘಾತಕ ದಾಳಿ
ಕೆರಿಬಿಯನ್ನರ ಚೇಸಿಂಗ್ ವೇಳೆ ಮಿಚೆಲ್ ಸ್ಟಾರ್ಕ್ ಘಾತಕವಾಗಿ ಎರಗಿದರು. 4 ವಿಕೆಟ್ ಉಡಾಯಿಸಿ ಆಸ್ಟ್ರೇಲಿಯಕ್ಕೆ ಮೇಲುಗೈ ಒದಗಿಸಿದರು.