ಮೆಲ್ಬರ್ನ್: ಆ್ಯಷಸ್ ಸರಣಿಯಲ್ಲಿ ಈಗಾಗಲೇ 2-0 ಮುನ್ನಡೆ ಹೊಂದಿರುವ ಆಸ್ಟ್ರೇಲಿಯ, ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲೂ ಗೆಲುವು ಸಾಧಿಸುವ ಸೂಚನೆ ನೀಡಿದೆ. ಮೊದಲ ದಿನವೇ ತನ್ನ ಹಿಡಿತವನ್ನು ಬಿಗಿಗೊಳಿಸಿದೆ. ಆತಿಥೇಯರ ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ 65.1 ಓವರ್‌ಗಳಲ್ಲಿ 185 ರನ್ನಿಗೆ ಕುಸಿದಿದ್ದು, ಜವಾಬಿತ್ತ ಆಸ್ಟ್ರೇಲಿಯ ಒಂದು ವಿಕೆಟಿಗೆ 61 ರನ್ ಗಳಿಸಿ ದಿನದಾಟ ಮುಗಿಸಿದೆ.
ಒಂದು ಟೆಸ್ಟ್ ಪಂದ್ಯದ ಕ್ವಾರಂಟೈನ್ ಬಳಿಕ ಮರಳಿದ ಪ್ಯಾಟ್ ಕಮಿನ್ಸ್ ಟಾಸ್ ಗೆದ್ದು ಇಂಗ್ಲೆಂಡನ್ನು ಮೊದಲು ಬ್ಯಾಟಿಂಗಿಗೆ ಇಳಿಸಿದರು. ಆಸೀಸ್ ಬೌಲರ್ ವಿಕೆಟ್ ಬೇಟೆಯಾಡುತ್ತಲೇ ಹೋದರು. ಸ್ವತಃ ಕಪ್ತಾನ ಕಮಿನ್ಸ್ ಮುಂಚೂಣಿಯಲ್ಲಿ ನಿಂತು 36ಕ್ಕೆ 3 ವಿಕೆಟ್ ಉಡಾಯಿಸಿದರು. ಸ್ಪಿನ್ನರ್ ನಥನ್ ಲಿಯೋನ್ ಸಾಧನೆಯೂ 36ಕ್ಕೆ 3. ವುಡ್ ಅವರನ್ನು ಔಟ್ ಮಾಡಿದ ಸ್ಕಾಟ್ ಬೋಲ್ಯಾಂಡ್ ವಿಕೆಟ್ ಖಾತೆ ತೆರೆದರು. ಇದು ಅವರ ಪದಾರ್ಪಣೆ ಟೆಸ್ಟ್ ಆಗಿದೆ.
ವರ್ಷದಲ್ಲಿ 50 ಸೊನ್ನೆ: ಪಂದ್ಯದ ದ್ವಿತೀಯ ಓವರ್‌ನಲ್ಲೇ ಹಸೀಬ್ ಹಮೀದ್ ಅವರನ್ನು ಶೂನ್ಯಕ್ಕೆ ಕೆಡವಿದ ಕಮಿನ್ಸ್ ಇಂಗ್ಲೆಂಡ್ ಕುಸಿತಕ್ಕೆ ಚಾಲನೆಯಿತ್ತರು. ಇದು ಈ ವರ್ಷದ ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಕಡೆಯಿಂದ ದಾಖಲಾದ 50ನೇ ಶೂನ್ಯವಾಗಿದೆ. ಭೋಜನದ ವೇಳೆ ಇಂಗ್ಲೆಂಡ್ 61ಕ್ಕೆ 3 ವಿಕೆಟ್ ಕಳೆದುಕೊಂಡಿತ್ತು. ಟೀ ವೇಳೆ 128ಕ್ಕೆ 6 ವಿಕೆಟ್ ಉದುರಿ ಹೋಯಿತು. ಇದರಲ್ಲಿ ಇಂಗ್ಲೆಂಡ್ ಸರದಿಯ ಏಕೈಕ ಅರ್ಧಶತಕ ಬಾರಿಸಿದ ನಾಯಕ ಜೋ ರೂಟ್ ವಿಕೆಟ್ ಕೂಡ ಸೇರಿತ್ತು. ರೂಟ್ ಹೊರತುಪಡಿಸಿದರೆ 35 ರನ್ ಮಾಡಿದ ಬೇರ್‌ಸ್ಟೊ ಅವರದೇ ಹೆಚ್ಚಿನ ಗಳಿಕೆ.
ಆಸ್ಟ್ರೇಲಿಯಕ್ಕೆ ವಾರ್ನರ್-ಹ್ಯಾರಿಸ್ ಜೋಡಿಯಿಂದ ಉತ್ತಮ ಆರಂಭ ಸಿಕ್ಕಿತು. ಇವರು 57 ರನ್ ಜತೆಯಾಟ ನಡೆಸಿದರು. ದಿನದ ಅಂತಿಮ ಓವರ್‌ನಲ್ಲಿ ವಾರ್ನರ್ (38) ವಿಕೆಟ್ ಕಿತ್ತ ಆ್ಯಂಡರ್ಸನ್ ಇಂಗ್ಲೆಂಡ್ ಪಾಳೆಯದಲ್ಲಿ ಅಷ್ಟರಮಟ್ಟಿಗೆ ಸಮಾಧಾನ ಮೂಡಿಸಿದ್ದಾರೆ. 20 ರನ್ ಮಾಡಿದ ಹ್ಯಾರಿಸ್ ಜತೆಗೆ ಖಾತೆ ತೆರೆಯದ ನೈಟ್ ವಾಚ್‌ಮನ್ ನಥನ್ ಲಿಯೋನ್ ಕ್ರೀಸಿನಲ್ಲಿದ್ದಾರೆ.
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್ 1ನೇ ಇನಿಂಗ್ಸ್ 185 (ರೂಟ್ 50, ಬೇರ್‌ಸ್ಟೊ 35, ಕಮಿನ್ಸ್ 36ಕ್ಕೆ 3, ಲಿಯೋನ್ 36ಕ್ಕೆ 3). ಆಸ್ಟ್ರೇಲಿಯ 1 ವಿಕೆಟಿಗೆ 61 (ವಾರ್ನರ್ 38, ಹ್ಯಾರಿಸ್ ಬ್ಯಾಟಿಂಗ್ 28, ಆ್ಯಂಡರ್ಸನ್ 14ಕ್ಕೆ 1).