ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್ ನಲ್ಲಿ ನಡೆಯುತ್ತಿರುವ ವನಿತಾ ಏಕದಿನ ವಿಶ್ವಕಪ್ ನ ಫೈನಲ್ ಗೆ ಮೊದಲ ತಂಡವಾಗಿ ಆಸ್ಟ್ರೇಲಿಯಾ ಪ್ರವೇಶ ಪಡೆದಿದೆ. ಇಂದು ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಸೆಮಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 157 ರನ್ ಅಂತರದ ಭರ್ಜರಿ ಜಯ ಸಾಧಿಸಿದೆ.
ಮಳೆಯಿಂದ 45 ಓವರ್ ಗೆ ಇಳಿಸಿಲ್ಪಟ್ಟ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆಸೀಸ್ ತಂಡ ಮೂರು ವಿಕೆಟ್ ನಷ್ಟಕ್ಕೆ 305 ರನ್ ಗಳಿಸಿದರೆ, ವೆಸ್ಟ್ ಇಂಡೀಸ್ ತಂಡ 37 ಓವರ್ ಗಳಲ್ಲಿ ಕೇವಲ 148 ರನ್ ಗೆ ಆಲೌಟಾಯಿತು.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಗೆ ಇಳಿದ ಆಸೀಸ್ ಭರ್ಜರಿ ಬ್ಯಾಟಿಂಗ್ ನಡೆಸಿತು. ರಾಶಲ್ ಹೇನ್ಸ್ ಮತ್ತು ಅಲಿಸಾ ಹೀಲಿ ಮೊದಲ ವಿಕೆಟ್ ಗೆ 216 ರನ್ ಗಳ ಜೊತೆಯಾಟವಾಡಿದರು. ಹೀಲಿ 129 ರನ್ ಗಳಿಸಿದರೆ, ಹೇನ್ಸ್ 85 ರನ್ ಗೆ ಔಟಾದರು. ನಂತರ ನಾಯಕಿ ಮೆಗ್ ಲ್ಯಾನಿಂಗ್ ಅಜೇಯ 26 ರನ್ ಮತ್ತು ಬೆತ್ ಮೂನಿ ಅಜೇಯ 43 ರನ್ ಗಳಿಸಿದರು.
ಇದನ್ನೂ ಓದಿ:ಪಿಂಕಿ ನವಾಜ್, ಆಕಾಶ ಭವನ ಶರಣ್‌ಗೆ ಗೂಂಡಾ ಕಾಯ್ದೆ ದೃಢಗೊಳಿಸಿದ ಹೈಕೋರ್ಟ್
ಗುರಿ ಬೆನ್ನತ್ತಿದ ವಿಂಡೀಸ್ ಆರಂಭಿಕ ಆಘಾತ ಎದುರಿಸಿತು, ರಶಾಡ ವಿಲಿಯಮ್ಸ್ ಖಾತೆ ತೆರೆಯದೆ ನಿರ್ಗಮಿಸಿದರು. ನಂತರ ಡಾಟಿನ್ ಮತ್ತು ಹೀಲಿ ಮ್ಯಾಥ್ಯೂಸ್ ತಲಾ 34 ರನ್, ನಾಯಕಿ ಟೇಲರ್ 48 ರನ್ ಗಳಿಸಿದರು. ಉಳದಯಾರೂ ಎರಡಂಕಿ ಮೊತ್ತವನ್ನೂ ಗಳಿಸಲಿಲ್ಲ.
ಭರ್ಜರಿ ಜಯ ಸಾಧಿಸಿದ ಆಸ್ಟ್ರೇಲಿಯಾ ಕೂಟದ ಫೈನಲ್ ಗೇರಿತು. ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಸೆಮಿ ಫೈನಲ್ ಗುರುವಾರ ನಡೆಯಲಿದೆ.