Advertisement
ಈ ವರ್ಷಾರಂಭದಲ್ಲಿ ಹಲವಾರು ಬುಕ್ಕಿಗಳನ್ನು ರಹಸ್ಯ ಕಾರ್ಯಾಚರಣೆಯಲ್ಲಿ ಮಾತನಾಡಿಸಿ ಆರೋಪ ಮಾಡಿದ್ದ ಅಲ್‌ಜಜೀರಾ, ಭಾರತ ಮತ್ತು ಶ್ರೀಲಂಕಾದಲ್ಲಿ ನಡೆದ ಪಂದ್ಯಗಳಲ್ಲಿ ಫಿಕ್ಸಿಂಗ್ ನಡೆದಿದೆ. ಆ ಪಂದ್ಯಗಳಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಗಳು ಭಾಗವಹಿಸಿದ್ದವು ಎಂದು ಹೇಳಿತ್ತು. ಇದಕ್ಕೆ ಸಂಬಂಧಪಟ್ಟಂತೆ ಹಲವು ವೀಡಿಯೋಗಳನ್ನು ಬಿಡುಗಡೆ ಮಾಡಿತ್ತು. ಈ ಸಂಬಂಧ ಈಗಾಗಲೇ ಐಸಿಸಿ ವಿಚಾರಣೆ ನಡೆಸುತ್ತಿದ್ದು, ಕೆಲವು ಆರೋಪಗಳಲ್ಲಿ ಸತ್ಯವಿಲ್ಲ ಎಂದೂ ಹೇಳಿದೆ. ಅಷ್ಟರಲ್ಲೇ ಜಜೀರಾ ಇನ್ನೊಂದು ಆರೋಪ ಮಾಡಿದೆ. ಕೆಲವು ಪ್ರಕರಣಗಳಲ್ಲಿ ಎರಡೂ ತಂಡಗಳು ಕೂಡಿಕೊಂಡೇ ಫಿಕ್ಸ್ ಮಾಡಿದ್ದು ಗಮನಕ್ಕೆ ಬಂದಿದೆ ಎಂದಿರುವ ವಾಹಿನಿ, ಇದಕ್ಕೆ ಸಂಬಂಧಪಟ್ಟಂತೆ ಕೆಲವು ದಾಖಲೆ ಬಿಡುಗಡೆ ಮಾಡಿದೆ. ಅದರಲ್ಲಿ ಪಂದ್ಯ ಫಿಕ್ಸ್ ಮಾಡಿದ್ದ ವ್ಯಕ್ತಿ ಭಾರತದ ಕುಖ್ಯಾತ ಬುಕ್‌ವೆುಕರ್‌ರೊಂದಿಗೆ ಮಾತನಾಡಿರುವ ಧ್ವನಿಮುದ್ರಣವಿದೆ.
ಲಾರ್ಡ್ಸ್‌ನಲ್ಲಿ ಭಾರತ-ಇಂಗ್ಲೆಂಡ್ ನಡುವೆ ನಡೆದ ಪಂದ್ಯ, ಕೇಪ್‌ಟೌನ್‌ನಲ್ಲಿ ಆಸ್ಟ್ರೇಲಿಯ-ದಕ್ಷಿಣ ಆಫ್ರಿಕಾ ನಡುವೆ ನಡೆದ ಪಂದ್ಯ ಹಾಗೂ ಯುಎಇಯಲ್ಲಿ ಪಾಕಿಸ್ಥಾನ-ಇಂಗ್ಲೆಂಡ್ ನಡುವೆ ನಡೆದ ಹಲವು ಪಂದ್ಯಗಳಲ್ಲಿ ಫಿಕ್ಸಿಂಗ್ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಐಸಿಸಿ ನಾವು ತನಿಖೆ ನಡೆಸುತ್ತೇವೆ, ಯಾವುದೇ ಆರೋಪಗಳನ್ನು ಸುಮ್ಮನೆ ಬಿಡುವುದಿಲ್ಲ ಎಂದಿದೆ. ಆದರೆ ಕ್ರಿಕೆಟ್ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗಳು ಸಂಪೂರ್ಣವಾಗಿ ಆರೋಪವನ್ನು ನಿರಾಕರಿಸಿವೆ. ಅಲ್‌ಜಜೀರಾ ವಾಹಿನಿ ಪೂರ್ಣಪ್ರಮಾಣದ ಸಾಕ್ಷಿ ನೀಡಿಲ್ಲ. ಆರೋಪಗಳಿಗೆ ಸರಿಯಾದ ಸಾಕ್ಷ್ಯವಿಲ್ಲ. ದಾಖಲೆಗಳನ್ನು ಸರಿಯಾಗಿ ಸಿದ್ಧಪಡಿಸಿಲ್ಲ, ಸ್ಪಷ್ಟತೆಯೂ ಇಲ್ಲ ಎಂದು ಹೇಳಿವೆ. ತಮ್ಮ ಆಟಗಾರರ ಬಗ್ಗೆ ಪೂರ್ಣ ನಿಗಾ ಇಟ್ಟಿದ್ದೇವೆ. ಅಂತಹ ಯಾವುದೇ ಬೆಳವಣಿಗೆಗಳು ಕಾಣಿಸಿಲ್ಲ ಎಂದು ಎರಡೂ ಮಂಡಳಿಗಳು ಸಮರ್ಥಿಸಿಕೊಂಡಿವೆ.