ಬ್ರಿಸ್ಬೇನ್: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಆ್ಯಶಸ್ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯ ಗೆಲುವಿನ ಸನಿಹದಲ್ಲಿದೆ. ಈ ಮೂಲಕ ಗಾಬಾದಲ್ಲಿ ಆಸ್ಟ್ರೇಲಿಯದ ಗೆಲುವಿನ ಓಟ ಮುಂದುವರಿಯಲಿದೆ. ಆಸ್ಟ್ರೇಲಿಯ ಇಲ್ಲಿ ಕಳೆದ ಹಲವು ವರ್ಷಗಳಿಂದ ಸೋಲನ್ನು ಕಂಡಿಲ್ಲ.
2 ವಿಕೆಟಿಗೆ 33 ರನ್ನುಗಳಿಂದ ತನ್ನ ದ್ವಿತೀಯ ಇನ್ನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್ ತಂಡವು ಆಸ್ಟ್ರೇಲಿಯದ ದಾಳಿಯನ್ನು ಎದುರಿಸಲಾಗದೆ 195 ರನ್ನಿಗೆ ಆಲೌಟಾಯಿತು. ಜೊ ರೂಟ್, ಮೊಯಿನ್ ಅಲಿ ಮತ್ತು ಜಾನಿ ಬೇರ್‌ಸ್ಟೋ ಮಾತ್ರ ಆಸೀಸ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು.
ಗೆಲ್ಲಲು 170 ರನ್ ತೆಗೆಯುವ ಸುಲಭ ಸವಾಲು ಪಡೆದ ಆಸ್ಟ್ರೇಲಿಯ ತಂಡಕ್ಕೆ ಆರಂಭಿಕರಾದ ಡೇವಿಡ್ ವಾರ್ನರ್ ಮತ್ತು ಬ್ಯಾನ್‌ಕ್ರಾಫ್ಟ್ ಭರ್ಜರಿ ಆಟವಾಡಿದರು. ಈಗಾಗಲೇ ಶತಕದ ಜತೆಯಾಟದಲ್ಲಿ ಪಾಲ್ಗೊಂಡ ಅವರು ತಂಡದ ಗೆಲುವು ಬಹುತೇಕ ಖಚಿತಗೊಳಿಸಿದರು. ಇಬ್ಬರೂ ಅರ್ಧಶತಕ ದಾಖಲಿಸಿದರು. ಅಂತಿಮ ದಿನದ ಆಟ ಬಾಕಿ ಉಳಿದಿದ್ದು ಆಸ್ಟ್ರೇಲಿಯ ಗೆಲುವು ದಾಖಲಿಸಲು ಇನ್ನು 56 ರನ್ ಗಳಿಸಬೇಕಾಗಿದೆ.
ಇಂಗ್ಲೆಂಡ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ವಾರ್ನರ್ 86 ಎಸೆತಗಳಿಂದ 8 ಬೌಂಡರಿ ನೆರವಿನಿಂದ 60 ರನ್ ಗಳಿಸಿದ್ದರೆ ಬ್ಯಾನ್‌ಕ್ರಾಫ್ಟ್ 119 ಎಸೆತ ಎದುರಿಸಿ 51 ರನ್ ಗಳಿಸಿ ಆಡುತ್ತಿದ್ದಾರೆ. 5 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದ್ದಾರೆ.
ಈ ಮೊದಲು ರೂಟ್, ಮೊಯಿನ್ ಮತ್ತು ಬೇರ್‌ಸ್ಟೋ ಅವರ ಉತ್ತಮ ಆಟದಿಂದಾಗಿ ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಸಾಧಾರಣ ಮೊತ್ತ ಪೇರಿಸಿಸುವಂತಾಯಿತು. ರೂಟ್ 104 ಎಸೆತಗಳಿಂದ 51 ರನ್ ಹೊಡೆದರೆ ಮೊಯಿನ್ ಮತ್ತು ಬೇರ್‌ಸ್ಟೋ 40 ಪ್ಲಸ್ ರನ್ ಗಳಿಸಿದರು.
ಸಂಕ್ಷಿಪ್ತ ಸ್ಕೋರು: 302 ಮತ್ತು 195 (ಸ್ಟೋನ್‌ಮ್ಯಾನ್ 27, ರೂಟ್ 51, ಮೊಯಿನ್ ಅಲಿ 40, ಬೇರ್‌ಸ್ಟೋ 42, ಮಿಚೆಲ್ ಸ್ಟಾರ್ಕ್ 51ಕ್ಕೆ 3, ಹ್ಯಾಝೆಲ್‌ವುಡ್ 46ಕ್ಕೆ 3, ನಥನ್ ಲಿಯೋನ್ 67ಕ್ಕೆ 3); ಆಸ್ಟ್ರೇಲಿಯ 328 ಮತ್ತು ವಿಕೆಟ್ ನಷ್ಟವಿಲ್ಲದೇ 114 (ವಾರ್ನರ್ 60 ಬ್ಯಾಟಿಂಗ್, ಬ್ಯಾನ್‌ಕ್ರಾಫ್ಟ್ 51 ಬ್ಯಾಟಿಂಗ್).