Advertisement

ಆಸೀಸ್‌ ಕ್ರಿಕೆಟಿಗರ ಅಭ್ಯಾಸ ಆರಂಭ

09:30 AM Sep 15, 2017 | Team Udayavani |

ಚೆನ್ನೈ: ಪ್ರವಾಸಿ ಆಸ್ಟ್ರೇಲಿಯ ತಂಡದ ಆಟಗಾರರು ಏಕದಿನ ಸರಣಿಗಾಗಿ ಗುರುವಾರ ಅಭ್ಯಾಸ ಆರಂಭಿಸಿದರು. ಗಾಯಾಳು ಆರಂಭಕಾರ ಆರನ್‌ ಫಿಂಚ್‌ ಹೊರತುಪಡಿಸಿ, ತಂಡದ ಉಳಿದ ಸದಸ್ಯರೆಲ್ಲರೂ ಇಲ್ಲಿನ “ಎಂಎಸಿ ಸ್ಟೇಡಿಯಂ’ನಲ್ಲಿ ಪ್ರ್ಯಾಕ್ಟೀಸ್‌ ನಡೆಸಿದರು. 

Advertisement

ಮುಖ್ಯ ಕೋಚ್‌ ಡ್ಯಾರನ್‌ ಲೇಹ್ಮನ್‌ ಅನುಪ ಸ್ಥಿತಿಯಲ್ಲಿ ಡೇವಿಡ್‌ ಸ್ಯಾಕರ್‌ ತರಬೇತಿಯ ಉಸ್ತುವಾರಿ ವಹಿಸಿದ್ದರು. ನಾಯಕ ಸ್ಟೀವನ್‌ ಸ್ಮಿತ್‌ ಸತತ ಬ್ಯಾಟಿಂಗ್‌ ಅಭ್ಯಾಸದಲ್ಲಿ ತೊಡಗಿ ದರೆ, ಐದೂ ಪಂದ್ಯಗಳಲ್ಲಿ ಆಡುವ ಸಾಧ್ಯತೆ ಹೊಂದಿರುವ ವೇಗಿ ಪ್ಯಾಟ್‌ ಕಮಿನ್ಸ್‌ ಬೌಲಿಂಗ್‌ ಅಭ್ಯಾಸದಲ್ಲಿ ನಿರತರಾದರು. ಉಳಿದ ಕ್ರಿಕೆಟಿಗರನೇಕರು ವ್ಯಾಯಾಮದ ಜತೆಗೆ ಫೀಲ್ಡಿಂಗ್‌ನತ್ತ ಹೆಚ್ಚಿನ ಗಮನ ನೀಡಿದ್ದು ಕಂಡುಬಂತು.

ಭಾರತದಿಂದ ಧೋನಿ ಮಾತ್ರ
ಭಾರತದ ಕ್ರಿಕೆಟಿಗರು ಶುಕ್ರವಾರ ಮಧ್ಯಾಹ್ನದ ಒಳಗೆ ಚೆನ್ನೈ ತಲುಪುವ ನಿರೀಕ್ಷೆ ಇದ್ದು, ಬಳಿಕ ಅಭ್ಯಾಸ ಆರಂಭಿಸಲಿದ್ದಾರೆ. ಚೆನ್ನೈಗೆ ಮೊದಲಿಗನಾಗಿ ಆಗಮಿಸಿದ ಆತಿಥೇಯ ತಂಡದ ಸದಸ್ಯನೆಂದರೆ ಮಹೇಂದ್ರ ಸಿಂಗ್‌ ಧೋನಿ. ಆವರು ಬುಧವಾರ ರಾತ್ರಿಯೇ ಬಂದಿಳಿದಿದ್ದರು. ಗುರುವಾರ ಸಂಜೆ ಮತ್ತೆ ಕೆಲವರು ಚೆನ್ನೈ ತಲುಪಿದರು. 

ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕನಾಗಿದ್ದ ಧೋನಿಗೆ ಇದು “ಎರಡನೇ ತವರು’. 8 ಐಪಿಎಲ್‌ ಋತುಗಳಲ್ಲಿ ಚೆನ್ನೈಯನ್ನು ಮುನ್ನಡೆಸಿದ ಧೋನಿ 4 ಸಲ ತಂಡವನ್ನು ಚಾಂಪಿಯನ್‌ ಪಟ್ಟಕ್ಕೆ ಏರಿಸಿದ್ದರು. ಮುಂದಿನ ಋತುವಿನಿಂದ ಮತ್ತೆ ಚೆನ್ನೈ ಫ್ರಾಂಚೈಸಿಯ ತಂಡ ಕಣಕ್ಕಿಳಿಯುವ ಸಾಧ್ಯತೆ ಇದ್ದು, ಧೋನಿ ಇದೇ ತಂಡದಲ್ಲಿ ಮುಂದುವರಿಯುವರೇ ಎಂಬ ನಿರೀಕ್ಷೆ ಇಲ್ಲಿನ ಕ್ರಿಕೆಟ್‌ ಅಭಿಮಾನಿಗಳದ್ದು. ಹೀಗಾಗಿ ಧೋನಿ ಸದ್ಯದ ಚೆನ್ನೈನ ಸ್ಟಾರ್‌ ಆಕರ್ಷಣೆ.

ಮೊದಲ ಏಕದಿನಕ್ಕೆ ಫಿಂಚ್‌ ಅನುಮಾನ
ಚೆನ್ನೈ: ಆಸ್ಟ್ರೇಲಿಯದ ಆರಂಭಕಾರ ಆರನ್‌ ಫಿಂಚ್‌ ಚೆನ್ನೈ ಯಲ್ಲಿ ನಡೆಯುವ ಮೊದಲ ಏಕದಿನ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ಬಲಗಾಲಿನ ಮೀನ ಖಂಡದ ಸೆಳೆತ ದಿಂದ ಅವರಿನ್ನೂ ಗುಣಮುಖರಾಗದಿರುವುದೇ ಇದಕ್ಕೆ ಕಾರಣ. 

Advertisement

6 ವಾರಗಳ ಹಿಂದೆ ಸರ್ರೆ ಕೌಂಟಿ ಪರ ಆಡುತ್ತಿದ್ದಾಗ ಫಿಂಚ್‌ ಈ ಸಮಸ್ಯೆಗೆ ಸಿಲುಕಿದ್ದರು. ಇದರಿಂದ ಚೇತರಿಸಿಕೊಂಡರೂ ಚೆನ್ನೈಯಲ್ಲಿ ಅಭ್ಯಾಸ ನಡೆಸುತ್ತಿದ್ದಾಗ ಮತ್ತೆ ಇದೇ ಕಾಲಿಗೆ ಪೆಟ್ಟು ಮಾಡಿಕೊಂಡರು. ಹೀಗಾಗಿ ಅವರನ್ನು ಮಂಗಳ ವಾರದ ಅಭ್ಯಾಸ ಪಂದ್ಯದಿಂದ ಹೊರಗಿರಿಸಲಾಗಿತ್ತು. ಗುರುವಾರದ ಅಭ್ಯಾಸದ ವೇಳೆಯೂ ಫಿಂಚ್‌  ಕಾಣಿಸಿಕೊಳ್ಳಲಿಲ್ಲ. 

ಅಕಸ್ಮಾತ್‌ ಫಿಂಚ್‌ ಚೆನ್ನೈ ಪಂದ್ಯದಿಂದ ದೂರ ಉಳಿದರೆ ಆಗ ಹಿಲ್ಟನ್‌ ಕಾರ್ಟ್‌ರೈಟ್‌ ಏಕದಿನಕ್ಕೆ ಪಾದಾರ್ಪಣೆ ಮಾಡುವ ಸಾಧ್ಯತೆ ಇದೆ. ಫಿಂಚ್‌ ಗೈರಲ್ಲಿ ಕಾರ್ಟ್‌ರೈಟ್‌ ಅಭ್ಯಾಸ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next