ಕೇರ್ನ್ಸ್: ಸ್ಪಿನ್ನರ್ ಆ್ಯಡಂ ಝಂಪ ಬೌಲಿಂಗ್ ಸಾಹಸದಿಂದ ದ್ವಿತೀಯ ಏಕದಿನ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲ್ಯಾಂಡನ್ನು 113 ರನ್ನುಗಳಿಂದ ಕೆಡವಿದ ಆಸ್ಟ್ರೇಲಿಯ “ಚಾಪೆಲ್-ಹ್ಯಾಡ್ಲಿ ಟ್ರೋಫಿ’ಯನ್ನು ತನ್ನದಾಗಿಸಿಕೊಂಡಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯ 9ಕ್ಕೆ 195 ರನ್ನುಗಳ ಸಾಮಾನ್ಯ ಮೊತ್ತ ದಾಖಲಿಸಿದಾಗ ನ್ಯೂಜಿಲ್ಯಾಂಡ್ ಸರಣಿಯನ್ನು ಸಮಬಲಕ್ಕೆ ತಂದೀತು ಎಂಬ ನಿರೀಕ್ಷೆ ಬಲವಾಗಿತ್ತು. ಆದರೆ ಕೇನ್ ವಿಲಿಯಮ್ಸನ್ ಪಡೆ ಶೋಚನೀಯ ಬ್ಯಾಟಿಂಗ್ ಪ್ರದರ್ಶಿಸಿ 33 ಓವರ್‌ಗಳಲ್ಲಿ 82 ರನ್ನಿಗೆ ಆಲೌಟ್ ಆಯಿತು. ಆ್ಯಡಂ ಝಂಪ 35ಕ್ಕೆ 5 ವಿಕೆಟ್ ಕಿತ್ತು ಆಸೀಸ್ ಗೆಲುವಿನ ರೂವಾರಿ ಎನಿಸಿದರು. ಇದು ಅವರ ಜೀವನಶ್ರೇಷ್ಠ ಬೌಲಿಂಗ್ ಸಾಧನೆ. ಸೀನ್ ಅಬೋಟ್ ಒಂದು ರನ್ನಿಗೆ 2 ವಿಕೆಟ್, ಮಿಚೆಲ್ ಸ್ಟಾರ್ಕ್ 12ಕ್ಕೆ 2 ವಿಕೆಟ್ ಉರುಳಿಸಿದರು.
ನ್ಯೂಜಿಲ್ಯಾಂಡ್ ಸರದಿಯಲ್ಲಿ 17 ರನ್ ಮಾಡಿದ ನಾಯಕ ಕೇನ್ ವಿಲಿಯಮ್ಸನ್ ಅವರದೇ ಹೆಚ್ಚಿನ ಗಳಿಕೆ. ಆಸ್ಟ್ರೇಲಿಯದ ಸ್ಟೀವನ್ ಸ್ಮಿತ್ ಪಂದ್ಯದ ಏಕೈಕ ಅರ್ಧ ಶತಕಕ್ಕೆ ಸಾಕ್ಷಿಯಾದರು. ಒಂದೆಡೆ ವಿಕೆಟ್ ಬೀಳುತ್ತ ಹೋದರೂ 94 ಎಸೆತ ಎದುರಿಸಿ ನಿಂತ ಅವರು 61 ರನ್ ಬಾರಿಸಿದರು (5 ಫೋರ್, 1 ಸಿಕ್ಸರ್). ಮಿಚೆಲ್ ಸ್ಟಾರ್ಕ್ (ಅಜೇಯ 38) ಮತ್ತು ಜೋಶ್ ಹೇಝಲ್‌ವುಡ್ (ಅಜೇಯ 23) ಅಂತಿಮ ವಿಕೆಟಿಗೆ 47 ರನ್ ಪೇರಿಸಿದ್ದು ಕಾಂಗರೂ ಇನ್ನಿಂಗ್ಸ್‌ನ ವಿಶೇಷವಾಗಿತ್ತು.
ಮೊದಲ ಪಂದ್ಯವನ್ನು ಆಸ್ಟ್ರೇಲಿಯ 2 ವಿಕೆಟ್‌ಗಳಿಂದ ಗೆದ್ದಿತ್ತು. ಅಂತಿಮ ಮುಖಾಮುಖಿ ರವಿವಾರ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ-9 ವಿಕೆಟಿಗೆ 195 (ಸ್ಮಿತ್ 61, ಸ್ಟಾರ್ಕ್ ಅಜೇಯ 38, ಹೇಝಲ್‌ವುಡ್ ಅಜೇಯ 23, ಬೌಲ್ಟ್ 38ಕ್ಕೆ 4, ಹೆನ್ರಿ 33ಕ್ಕೆ 3). ನ್ಯೂಜಿಲ್ಯಾಂಡ್-33 ಓವರ್‌ಗಳಲ್ಲಿ 82 (ವಿಲಿಯಮ್ಸನ್ 17, ಸ್ಯಾಂಟ್ನರ್ ಔಟಾಗದೆ 16, ಝಂಪ 35ಕ್ಕೆ 5, ಅಬೋಟ್ 1ಕ್ಕೆ 2, ಸ್ಟಾರ್ಕ್ 12ಕ್ಕೆ 2). ಪಂದ್ಯಶ್ರೇಷ್ಠ: ಮಿಚೆಲ್ ಸ್ಟಾರ್ಕ್.