Advertisement
ಈಗ ನಮ್ಮ ಭೂಮಿಯ ಧ್ರುವ ಪ್ರದೇಶಗಳಲ್ಲಿ ಆಕಾಶ ಅತೀ ಸುಂದರ, ಧ್ರುವ ಪ್ರಭೆಗಳ ತಾಂಡವ ನರ್ತನ. ಪ್ರವಾಸಿಗರಿಗಂತೂ ಸುಗ್ಗಿ. ಉತ್ತರ ಅಮೆರಿಕ, ಕೆನಡಾ, ಇಂಗ್ಲೆಂಡ್, ಯುರೋಪಿನ ಎಲ್ಲ ರಸಿಕರೂ ಗ್ರೀನ್ ಲ್ಯಾಂಡ್, ನಾರ್ವೆ, ಸ್ವೀಡನ್ ಕಡೆಗೆ ನುಗ್ಗುತ್ತಿದ್ದಾರೆ. ಉತ್ತರ ಧ್ರುವ ಪ್ರದೇಶದ ಸಮೀಪದ ಆರ್ಕಟಿಕ್ ಸರ್ಕಲ್‌ನ ಪ್ರದೇಶಗಳಲ್ಲಿ ಆಕಾಶದಲ್ಲಿ ಬಣ್ಣದೋಕುಳಿ. ಸುಮಾರು 15 ರಿಂದ 20 ನಿಮಿಷಗಳ ಕಾಲ ಇಡೀ ಆಕಾಶದ ಸುತ್ತಲೂ ಬಣದೋಕುಳಿಯ ಪ್ರಭೆ. ಹಸುರು, ಕೆಂಪು , ನೀಲಿ, ಹಳದಿ ಹಾಗೂ ಸಂಮಿಶ್ರ ಬಣ್ಣಗಳ ಹೊಗೆಯೋ ಎನ್ನುವಂತಹ ಬೆಳಕಿನ ನರ್ತನ. ಇದಕ್ಕೆ ಧ್ರುವ ಪ್ರಭೆ ಅರೋರೆ ಎನ್ನುತ್ತಾರೆ. ದಕ್ಷಿಣ ಧ್ರುವ ಅಂಟಾರ್ಟಿಕಾದಲ್ಲೂ ಇದು ಕಾಣುತ್ತದೆ.
Related Articles
Advertisement
ಸೂರ್ಯನ ಕಲೆಗಳುಸೂರ್ಯನಲ್ಲಿ 11 ವರ್ಷಗಳಿಗೊಮ್ಮೆ ಅತೀ ಹೆಚ್ಚು ಕಲೆಗಳನ್ನು ಗುರುತಿಸಬಹುದು. ಇದಕ್ಕೆ ಸೂರ್ಯನ ಸನ್ ಸ್ಪಾಟ್ ಸೈಕಲ್ ಎನ್ನುವರು. 1610ರಲ್ಲಿ ಗೆಲಿಲಿಯೋ ದೂರದರ್ಶಕ ದಿಂದ ಪ್ರಥಮವಾಗಿ ಗುರುತಿಸಿದ ಅನಂತರ ಇದನ್ನು ಖಗೋಳಾಸಕ್ತರು ನೋಡುತ್ತಲೇ ಬಂದಿದ್ದಾರೆ.
ಈ ಪ್ರಕ್ರಿಯೆಯನ್ನು ಇನ್ನೊಂದು ರೀತಿಯಲ್ಲಿ ಗಮನಿಸಬಹುದು. ಈ ಸೂರ್ಯನ ಕಲೆಗಳು ಹೆಚ್ಚಿರುವ ಸಮಯದಲ್ಲೇ ಭೂಮಿಯ ಧ್ರುವ ಪ್ರದೇಶಗಳಲ್ಲಿ ಬಣ್ಣದೋಕುಳಿ ಧ್ರುವ ಪ್ರಭೆ. ಬಹಳ ಹಿಂದಿನಿಂದ ಇದನ್ನು ಗುರುತಿಸಿದ್ದಾರೆ. ಹಾಗಾಗಿ ಸೂರ್ಯನ ಕಾಂತೀಯ ವ್ಯತ್ಯಾಸ ಹಾಗೂ ವಿಶೇಷ ಶಕ್ತಿ ಉತ್ಸರ್ಜನದ ಕಾಲದಲ್ಲೇ ಸೂರ್ಯನ ಕಲೆಗಳು ಹಾಗೂ ಧ್ರುವ ಪ್ರಭೆ ಹೆಚ್ಚು. ಈ ಕಾಲದಲ್ಲಿ ಧ್ರುವ ಪ್ರದೇಶದಲ್ಲಿ ಮಾತ್ರ ವಿಶೇಷ ಪ್ರಭೆ ಏಕೆ ಎಂಬ ಪ್ರಶ್ನೆ ಮೂಡುವುದು ಸಹಜ. ಇದಕ್ಕೆ ಕಾರಣ ನಮ್ಮ ಭೂಮಿಯ ಸುತ್ತ ಇರುವ ಭೂ ಕಾಂತೀಯ ವಲಯಗಳು. ಇವು ಸೂರ್ಯನಿಂದ ಬರುವ ವಿಶೇಷ ಶಕ್ತಿಯ ಕಣಗಳನ್ನು ನಮ್ಮ ಸಮಭಾಜಕ ವೃತ್ತದ ಆಸುಪಾಸು ಸಂಪೂರ್ಣ ತಡೆಯಬಲ್ಲವು. ಆದರೆ ಧ್ರುವಗಳಲ್ಲಿ ಅವುಗಳಿಗೆ ಸಾಧ್ಯವಾಗುವುದಿಲ್ಲ. ಅಲ್ಲಿ ಆ ಶಕ್ತಿಯುತ ಕಣಗಳು ವಾತಾವರಣದ ಒಳ ನುಗ್ಗಿ ಅಲ್ಲಿರುವ ಅಣು, ಪರಮಾಣು ಗಳೊಂದಿಗೆ ಘರ್ಷಿಸಿ ಬೆಳಕು ಬಿಡುಗಡೆ ಮಾಡುತ್ತವೆ. ಅದೇ ಧ್ರುವ ಪ್ರಭೆ. ಡಾ| ಎ.ಪಿ. ಭಟ್, ಉಡುಪಿ