Advertisement

ಕೃಷಿ ಮೇಳದಲ್ಲಿ ಶ್ವಾನಗಳ ಪ್ರದರ್ಶನದ ಆಕರ್ಷಣೆ 

07:27 AM Feb 18, 2019 | |

ಹಾಸನ: ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರದಿಂದ ಆರಂಭವಾದ ಎರಡು ದಿನಗಳ ಕೃಷಿ ಮೇಳದಲ್ಲಿ ಶ್ವಾನಗಳ ಪ್ರದರ್ಶನ ಜನರನ್ನು ಆಕರ್ಷಿಸಿತು. ಪಶು ಸಂಗೋಪನಾ ಇಲಾಖೆಯಿಂದ ಆಯೋಜಿಸಿದ್ದ ಶ್ವಾನ ಪ್ರದರ್ಶನದಲ್ಲಿ 24 ತಳಿಯ ಸುಮಾರು 120ಕ್ಕೂ ಹೆಚ್ಚು ಶ್ವಾನಗಳನ್ನು ಒಂದಡೆ ನೋಡಿ ಶ್ವಾನಪ್ರಿಯರು ಸಂತಸ ವ್ಯಕ್ತಪಡಿಸಿದರು. 

Advertisement

ಆರು ತಿಂಗಳ ಮರಿಗಳಿಂದ ಬೃಹದಾಕಾರದ ಶ್ವಾನಗಳನ್ನು ಕಂಡು ಜನರು ಅಚ್ಚರಿಪಟ್ಟರು. ತಮ್ಮ ಪ್ರೀತಿಯ ಶ್ವಾನಗಳನ್ನು ಮಾಲೀಕರು ಭಿನ್ನ ಹೆಸರುಗಳಿಂದ ಕರೆಯುತ್ತಾ ಮುದ್ದಿಸುತ್ತಾ ಪ್ರದರ್ಶಿಸಿದರು. ಕೆಲವು ಶ್ವಾನಗಳು ಪ್ರದರ್ಶನದಲ್ಲಿ ಗತ್ತಿನಿಂದ ಹೆಜ್ಜೆ ಹಾಕಿದರೆ, ಇನ್ನು ಕೆಲ ಶ್ವಾನಗಳು ತಮ್ಮ ಮಾಲೀಕರನ್ನು ಅಪ್ಪಿಕೊಂಡು ಪ್ರೀತಿ ತೋರಿದವು. 

ಅಪರಿಚಿತ ನಾಯಿಗಳನ್ನು ಕಂಡು ಅವು ಪರಸ್ಪರ ಬೊಗಳುತ್ತಿದ್ದರಿಂದ ಮೈದಾನದ ತುಂಬಾ ಶ್ವಾನಗಳ ಕೂಗು ಕೇಳಿ ಬಂದಿತು. ಪ್ರದರ್ಶನ ನೋಡಲು ಬಂದಿದ್ದ ಮಕ್ಕಳು, ಮಹಿಳೆಯರು, ಹಿರಿಯರು ಮುದ್ದಾದ ನಾಯಿಗಳ ಜತೆ ಸೆಲ್ಫಿ ತೆಗೆಸಿಕೊಂಡರು. ಮಕ್ಕಳು ಪುಟ್ಟ ಶ್ವಾನಗಳ ಮೈದಡವಿ ಖುಷಿಪಟ್ಟರು. 

ದೇಶಿ ತಳಿಗಳಾದ ಬಾಗಲಕೋಟೆಯ ಮುಧೋಳ, ಸೈಬೀರಿಯನ್‌ ಹಸ್ಕಿ ಗಮನಸೆಳೆದವು. ದುಬಾರಿ ಬೆಲೆಯ ಪಗ್‌, ಪಮೇರಿಯನ್‌, ಡಾಬರ್‌ ಮನ್‌, ಜರ್ಮನ್‌ ಶಫ‌ರ್ಡ್‌, ಗ್ರೇಟ್‌ಡೇನ್‌, ಬಾಕ್ಸರ್‌, ಲ್ಯಾಬ್ರಡಾರ್‌, ಗೋಲ್ಡನ್‌ ರಿಟ್ರೀವರ್‌ ತಳಿಯ ಶ್ವಾನಗಳು ಚುರುಕಿನ ಪ್ರದರ್ಶನ ನೀಡಿದರು. ಮಳಿಗಳಲ್ಲಿ ಪ್ರದರ್ಶನದಲ್ಲಿದ್ದ ಬೃಹದಾಕಾರದ ಶ್ವಾನಗಳು, ಅವುಗಳನ್ನು ಸಾಕುವ ವಿಧಾನ, ಆಹಾರ-ವಿಹಾರದ ಮಾಹಿತಿ ಪಡೆದು ಅಚ್ಚರಿ ವ್ಯಕ್ತಪಡಿಸಿದರು.

ಜನಪ್ರಿಯ ತಳಿಗಳ ನಾಯಿ ಮರಿಗಳು 15 ಸಾವಿರೂ.ನಿಂದ 18 ಸಾವಿರರೂ ವರೆಗೂ ಮಾರಾಟಕ್ಕಿದ್ದವು.  ಶ್ವಾನಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಶ್ವಾನಗಳ ಸ್ವಭಾವ, ಚುರುಕುತನ, ಭಾಷೆ, ಗಾತ್ರ, ನಡಿಗೆ, ಹಲ್ಲು, ಬಾಲ, ದೇಹದ ರಚನೆ, ಅನುಕರಣೆ ಆಧಾರದ ಮೇಲೆ ಸ್ಪರ್ಧೆ ನಡೆಸಲಾಯಿತು. ವಿಜೇತ ಶ್ವಾನಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಾಯಿತು.

Advertisement

ಶ್ವಾನಗಳ ಕುತ್ತಿಗೆಗೆ ಹಾಕುವ ಬೆಲ್ಟ್, ಆಹಾರ, ಔಷಧಿ ಮಾರಾಟ ಮಳಿಗೆಗಳು ಇದ್ದವು. ಒಂದೆ ಕಡೆ ಲಭ್ಯವಿದ್ದ ಈ ವಸ್ತುಗಳನ್ನು ಶ್ವಾನ ಮಾಲೀಕರು ಖರೀದಿಸಿದರು. ಶ್ವಾನ ಪ್ರದರ್ಶನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಬೆಳಗಿನಿಂದಲೇ ತಮ್ಮ ಶ್ವಾನಗಳೊಂದಿಗೆ ಮಾಲೀಕರು ಮೈದಾನಕ್ಕೆ ಬಂದು ಹೆಸರು ನೋಂದಣಿ ಮಾಡಿಸಿಕೊಂಡು ಸರದಿಗಾಗಿ ಕಾಯುತ್ತಿದ್ದರು. ಶ್ವಾನಗಳಿಗೆ ನೆರಳಿನ ವ್ಯವಸ್ಥೆ ಮಾಡಲಾಗಿತ್ತು.

ಬೆಳಿಗ್ಗೆ ಆರಂಭಗೊಂಡ ಸ್ಪರ್ಧೆ ಮಧ್ಯಾಹ್ನದವರೆಗೂ ನಡೆಯಿತು. ಹಾಸನ ಪಶುವೈದ್ಯಕೀಯ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಬಾಳಪ್ಪನವರ್‌ ಶ್ವಾನಗಳ ಪ್ರದರ್ಶನದ ಉಸ್ತುವಾರಿ ನೋಡಿಕೊಂಡರು. ಶ್ವಾನಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಅವುಗಳನ್ನು ಸಾಕುವ ವಿಧಾನಗಳ ಬಗ್ಗೆ ಮಾಹಿತಿ ನೀಡಲು ಶ್ವಾನ ಪ್ರದರ್ಶನ ಏರ್ಪಡಿಸಲಾಗಿದೆ. ದೇಶ, ದೇಶಗಳ 24 ತಳಿಗಳು ಶ್ವಾನಗಳ ತಳಿಗಳು ಸ್ಪರ್ಧೆಯಲ್ಲಿ ಭಾಗವಹಿಸಿವೆ ಎಂದು ಮಾಹಿತಿ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next