Advertisement

ಆರ್‌ಟಿಪಿಎಸ್‌ಗೆ ನುಗ್ಗಲು ಯತ್ನ: ಶಾಸಕರು ವಶಕ್ಕೆ

11:15 AM Dec 02, 2017 | Team Udayavani |

ರಾಯಚೂರು: ತಾಲೂಕಿಗೆ ನಿರಂತರ ವಿದ್ಯುತ್‌ ಪೂರೈಕೆಗೆ ಆಗ್ರಹಿಸಿ ಗುರುವಾರ ತಡರಾತ್ರಿ ಆರ್‌ ಟಿಪಿಎಸ್‌ ಕೇಂದ್ರಕ್ಕೆ ನುಗ್ಗಲು ಮುಂದಾದ ಶಾಸಕರು ಹಾಗೂ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದರು. ಗ್ರಾಪಂ ಚುನಾವಣೆ ನಿಮಿತ್ತ ನೀತಿ ಸಂಹಿತೆ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ತಾಲೂಕಿನ ಮೈಸೂರು ಪೆಟ್ರೋ ಕೆಮಿಕಲ್‌ ಬಳಿ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು.

Advertisement

ಇದರಿಂದ ರೊಚ್ಚಿಗೆದ್ದ ಶಾಸಕರಾದ ತಿಪ್ಪರಾಜ್‌ ಹವಾಲ್ದಾರ್‌, ಡಾ| ಶಿವರಾಜ ಪಾಟೀಲ ಸೇರಿದಂತೆ ಸಾವಿರಾರು ಕಾರ್ಯಕರ್ತರು ರಸ್ತೆ ಮಧ್ಯದಲ್ಲೇ ಧರಣಿ ಕುಳಿತರು. ಜಿಲ್ಲಾಧಿ ಕಾರಿ ಸೇರಿದಂತೆ ಕೆಪಿಸಿ ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು. ಆದರೆ, ಸಂಜೆ ಏಳು ಗಂಟೆಯಿಂದ 9.30ರವರೆಗೆ ಯಾವ ಅಧಿಕಾರಿಗಳು ಬರಲಿಲ್ಲ. ಎಡಿಸಿ, ಎಸ್‌ಪಿ ಮನವೊಲಿಸಲು ಮುಂದಾದರೂ ಪ್ರಯೋಜನವಾಗಲಿಲ್ಲ.

ಕೊನೆಗೆ ಜಿಲ್ಲಾಧಿಕಾರಿ ಡಾ|ಬಗಾದಿ ಗೌತಮ್‌, ಆರ್‌ಟಿಪಿಎಸ್‌ ಇಡಿ ವೇಣಗೋಪಾಲ್‌ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಲು ಮುಂದಾದರು. ಸಮಸ್ಯೆ ಆಲಿಸಲು ವಿಳಂಬ ಮಾಡಿದ ಕಾರಣಕ್ಕೆ ಶಾಸಕರು ಡಿಸಿಯನ್ನು ತರಾಟೆ ತೆಗೆದುಕೊಂಡರು. ನೀವು ಜನರ ಸೇವಕರು. ಜನರಿಗಾಗಿ ಹೋರಾಟ ನಡೆಸುತ್ತಿದ್ದರೆ, ಸ್ಪಂದಿಸಲು ಮೀನಮೇಷ ಎಣಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಜಿಲ್ಲಾಧಿಕಾರಿ ಹೋರಾಟ ಕೈ ಬಿಡುವಂತೆ ಮನವೊಲಿಸಲು ಮುಂದಾದರೂ ಪ್ರಯೋಜನವಾಗಲಿಲ್ಲ. ನಮಗೆ ಅಧಿಕೃತ ಆದೇಶ ಕೊಡುವವರೆಗೆ ಹೋರಾಟ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಅದು ಸದಕ್ಕೆ ಆಗುವುದಿಲ್ಲ ಎಂದು ಅಧಿಕಾರಿಗಳು ತಿಳಿ ಹೇಳಿದರೂ ಶಾಸಕರು ಒಪ್ಪಲಿಲ್ಲ. ರಾತ್ರಿ 11.30ರ ಸುಮಾರಿಗೆ ಆರ್‌ ಟಿಪಿಎಸ್‌ಗೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ಶಾಸಕರಿಬ್ಬರು ಸೇರಿದಂತೆ 50ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡು ಕರೆದೊಯ್ದರು.

ರಸ್ತೆಯಲ್ಲೇ ಮಲಗಿದ ಶಾಸಕರು: ತಮ್ಮ ಹೋರಾಟಕ್ಕೆ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಇಬ್ಬರು ಶಾಸಕರು ರಸ್ತೆಯಲ್ಲೇ ಮಲಗಿ ಧರಣಿ ನಡೆಸಿದರು. ಶಾಸಕ ತಿಪ್ಪರಾಜ್‌ ಹವಾಲ್ದಾರ್‌ ಸತತ ನಾಲ್ಕು ದಿನಗಳಲ್ಲಿ 58 ಕಿಮೀ ಹಾಗೂ ಶಿವರಾಜ ಪಾಟೀಲ ಅವರು 30ಕಿ. ಮೀ. ಕ್ರಮಿಸಿದ್ದರಿಂದ ಧಣಿದಿದ್ದರು. ಇದರಿಂದ ರಸ್ತೆ ಮೇಲೆಯೇ ಮಲಗಿಬಿಟ್ಟರು. ಅವರ ಜತೆ ಕಾರ್ಯಕರ್ತರು ರಸ್ತೆ ಮೇಲೆಯೇ ಕುಳಿತು ಬಿಟ್ಟರು.

Advertisement

ಪೊಲೀಸರೊಂದಿಗೆ ವಾಗ್ವಾದ: ಹೋರಾಟಗಾರರನ್ನು ಬ್ಯಾರಿಕೇಡ್‌ ಹಾಕಿ ಅಡ್ಡಗಟ್ಟಿ ತಡೆದ ಪೊಲೀಸರೊಂದಿಗೆ ಕಾರ್ಯಕರ್ತರು ವಾಗ್ವಾದ ನಡೆಸಿದರು. ಪೊಲೀಸರು ಅವರನ್ನು ತಡೆಯಲು ಸಾಕಷ್ಟು ಪ್ರತಿರೋಧ ಒಡ್ಡಬೇಕಾಯಿತು. ನಂತರ ಶಾಸಕರನ್ನು ವಶಕ್ಕೆ ಪಡೆದು ವ್ಯಾನ್‌ ಹತ್ತಿಸುವಾಗಲೂ ಪೊಲೀಸರೊಂದಿಗೆ ವಾಗ್ಧಾದ ನಡೆಸಿದರು. 

ಐದು ಗಂಟೆ ಟ್ರಾಫಿಕ್‌ ಜಾಮ್‌: ವೈಟಿಪಿಎಸ್‌ ಎದುರು ಬೃಹತ್‌ ಕಾರ್ಯಕ್ರಮ ನಡೆಸಿದ ನಂತರ ಆರ್‌ ಟಿಪಿಎಸ್‌ಗೆ ಪಾದಯಾತ್ರೆ ತೆರಳುತ್ತಿದ್ದಂತೆ ಹೈದರಾಬಾದ್‌-ರಾಯಚೂರು ಮುಖ್ಯ ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌ ಸಮಸ್ಯೆ ತಲೆದೋರಿತು. ನಂತರ ರಸ್ತೆಯಲ್ಲೇ ಧರಣಿ ನಡೆಸುತ್ತಿದ್ದಂತೆ ಸರಿಸುಮಾರು ಐದು ಗಂಟೆಗೂ ಹೆಚ್ಚು ಕಾಲ ರಸ್ತೆ ಜಾಮ್‌ ಆಗಿತ್ತು.

ಎರಡೂ ಕಡೆ 10 ಕಿಮೀ ಅಧಿಕ ವಾಹನಗಳು ಸಾಲುಗಟ್ಟಿದ್ದವು. ಇದರಿಂದ ಪ್ರಯಾಣಿಕರು ನಾನಾ ಪಡಿಪಾಟಲು ಎದುರಿಸುವಂತಾಯಿತು. ಇನ್ನೂ ಬೈಪಾಸ್‌ ಬಳಿ ದೊಡ್ಡ ವಾಹನಗಳನ್ನು ಬಿಡದೆ ತಡೆ ಹಿಡಿದಿದ್ದರಿಂದ ಈ ಕಡೆಯೂ ಸಾಕಷ್ಟು ಲಾರಿಗಳು ಸಾಲುಗಟ್ಟಿದ್ದವು.

ಡಿಸಿ ಜತೆ ಶಾಸಕ ಗುಪ್ತ ಮಾತುಕತೆ: ಧರಣಿ ನಿರತವೇಳೆ ಇಬ್ಬರು ಶಾಸಕರು ಜಿಲ್ಲಾಧಿಕಾರಿ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ನಂತರ ಬಂದು ಕೆಲ ಕಾಲ ಕುಳಿತರು. ಈ ವೇಳೆ ಶಾಸಕ ತಿಪ್ಪರಾಜ್‌ ಮಾತನಾಡಿ, ಜಿಪಂ ಸದಸ್ಯರು, ತಾಪಂ ಸದಸ್ಯರು ಹಾಗೂ ನಾವು ಮಾತ್ರ ನಿರಶನ ಕೂಡುತ್ತೇವೆ ಉಳಿದವರೆಲ್ಲ ತೆರಳಿ ಎಂದು ಮನವಿ ಮಾಡಿದರು. ಇದಕ್ಕೆ ಕಾರ್ಯಕರ್ತರು ಒಪ್ಪಲಿಲ್ಲ. 

ಬಗೆಹರಿಯದ ಗೊಂದಲ: ರೈತರ ಪಂಪ್‌ಸೆಟ್‌ ಗಳಿಗೆ ನಿರಂತರ 12 ಗಂಟೆ ತ್ರಿಪೇಸ್‌, 24 ಗಂಟೆ ಒಂದು ಫೇಸ್‌ ವಿದ್ಯುತ್‌ ನೀಡುವುದಾಗಿ ಕಾಂಗ್ರೆಸ್‌ ಹೇಳುತ್ತಿದೆ. ನಮಗೆ ಅದರ ಅಧಿಕೃತ ಆದೇಶ ಪ್ರತಿ ಕೊಡಿ ಎಂದು ಪಟ್ಟು ಹಿಡಿದಿದ್ದ ಶಾಸಕರು ಕೊನೆಗೆ ಯಾವುದನ್ನು ಪಡೆಯಲಿಲ್ಲ. ವೇದಿಕೆ ಕಾರ್ಯಕ್ರಮದಲ್ಲಿ ಆದೇಶ ಪ್ರತಿ ಕೈ ಸೇರುವವರೆಗೆ ನಾವು ಹೋರಾಟದಿಂದ ಹಿಂದೆ ಸರಿಯುವ ಪ್ರಮೇಯವಿಲ್ಲ. ನಮ್ಮ ಜೀವ ಹೋದರೂ ಚಿಂತೆಯಿಲ್ಲ ಎಂದು ಇಬ್ಬರು ಶಾಸಕರು ಹೇಳಿಕೆ ನೀಡಿದ್ದರು. ಆದರೆ, ಕೊನೆಗೆ ಜನರಿಗೆ ಯಾವುದೇ ಸ್ಪಷ್ಟ ಸಂದೇಶ ಸಿಗದಂತಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next