Advertisement

ಕಾಂಗ್ರೆಸ್ ನಾಯಕರಿಂದ ಬಿಜೆಪಿ ಸರ್ಕಾರ, ಪತ್ರಕರ್ತರ ಗೌರವ ಹಾಳು ಮಾಡುವ ಪ್ರಯತ್ನ: ಸುಧಾಕರ್

08:05 PM Oct 30, 2022 | Team Udayavani |

ಬೆಂಗಳೂರು: ಕರ್ನಾಟಕದ ಪತ್ರಿಕಾ ಮಿತ್ರರು ವಿಶೇಷವಾದ ಗೌರವ ಹೊಂದಿದ್ದಾರೆ. ಹಾಗೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಜನೋಪಯೋಗಿ ಕೆಲಸಗಳನ್ನು ಮಾಡಿ ಜನಪ್ರಿಯತೆ ಪಡೆಯುತ್ತಿದೆ. ಇದನ್ನು ಸಹಿಸದ ಕಾಂಗ್ರೆಸ್, ಬಿಜೆಪಿ ಸರ್ಕಾರ ಹಾಗೂ ಪತ್ರಕರ್ತರ ಗೌರವ ಹಾಳು ಮಾಡುವ ಕೆಲಸ ಮಾಡುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಕಂದಾಯ ಸಚಿವ ಆರ್.ಅಶೋಕ್ ಅವರೊಂದಿಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ಹಬ್ಬದ ಸಂದರ್ಭದಲ್ಲಿ ಉಡುಗೊರೆಗಳನ್ನು ಕೊಡುವುದು ಹಿಂದೂ ಧರ್ಮದ ಪ್ರತೀತಿ, ಪರಂಪರೆ ಮತ್ತು ಇತಿಹಾಸ. ಬಣ್ಣದ ಹಬ್ಬ ಬಂದಾಗ ಬಣ್ಣ ಹಚ್ಚುತ್ತೇವೆ. ದೀಪಾವಳಿ ಬಂದಾಗ ಪಟಾಕಿಗಳನ್ನು ಸಿಡಿಸಿ, ಉಡುಗೊರೆಗಳನ್ನು, ಸಿಹಿಯನ್ನು ನೀಡುತ್ತೇವೆ. ಕಾಂಗ್ರೆಸ್‍ಗೆ ಹಿಂದೂ ಹಬ್ಬಗಳ ಬಗ್ಗೆ ಇಷ್ಟು ದ್ವೇಷವೇಕೆ ಎಂದು ಪ್ರಶ್ನೆ ಮಾಡಿದರು.

ಪತ್ರಕರ್ತರಿಗೆ ಹಣ ನೀಡಿರುವುದು ನಿಜವೇ ಆಗಿದ್ದಲ್ಲಿ,‌ ಕಾಂಗ್ರೆಸ್ ಗೆ ಯಾರು ದೂರು ನೀಡಿದ್ದಾರೆ ಎಂದು ತಿಳಿಸಿಲ್ಲ. ಮುಖ್ಯಮಂತ್ರಿ ಕಚೇರಿಯಿಂದ ಹಣ ಕೊಟ್ಟಿದ್ದಾರೆ ಎಂದು ಕಾಂಗ್ರೆಸ್‍ಗೆ ಯಾವುದೇ ಮಾಧ್ಯಮದ ಸ್ನೇಹಿತರು ದೂರು ನೀಡಿಲ್ಲ. ಇದಕ್ಕೆ ಯಾವುದೇ ಸಾಕ್ಷಿ ಇಲ್ಲ ಎಂದು ಕಾಂಗ್ರೆಸ್ ನಾಯಕರೇ ಹೇಳಿದ್ದಾರೆ. ಆದರೂ ಆಪಾದನೆ ಮಾಡುವುದೇ ಸರಿ ಎಂದೂ ಹೇಳುತ್ತಿದ್ದಾರೆ. ಸಾಕ್ಷಿ ಇಲ್ಲದೆ ಆಪಾದನೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‍ನವರ ಕಾಲದಲ್ಲಿ ಉಡುಗೊರೆ ಕೊಟ್ಟಿರುವುದು ಹಾಗೂ ಪಡೆದಿರುವುದು ಜಗಜ್ಜಾಹೀರಾಗಿದೆ. ಇಂತಹ ವಿಷಯಗಳಲ್ಲಿ ಕ್ಷುಲ್ಲಕ ರಾಜಕಾರಣ ಮಾಡಬಾರದು. ರಾಜ್ಯ ಸರ್ಕಾರ ಉತ್ತಮ ಕಾರ್ಯಕ್ರಮಗಳನ್ನು ಜನರಿಗೆ ನೀಡುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಹಿಂದುಳಿದ ವರ್ಗಗಳ ದೊಡ್ಡ ನಾಯಕರಾಗಿದ್ದಾರೆ. ಹಿಂದುಳಿದ ಸಮಾವೇಶವೂ ಕಲಬುರ್ಗಿಯಲ್ಲಿ ಯಶಸ್ವಿಯಾಗಿ ನಡೆದಿದೆ. ಇದನ್ನು ಕಾಂಗ್ರೆಸ್ ನಾಯಕರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದರು.

ಹಿಂದೆ ಐಟಿ ಸಚಿವರಾಗಿದ್ದ ಪ್ರಿಯಾಂಕ್ ಖರ್ಗೆ ಅವರು 40 ಮಂದಿಗೆ ಕಿಯೋನಿಕ್ಸ್ ಮೂಲಕ ಉಡುಗೊರೆ ನೀಡಿದ್ದರು. ಸಿಎಸ್‍ಆರ್ ನಿಧಿಯಡಿ 40 ಲ್ಯಾಪ್‍ಟಾಪ್‍ಗಳನ್ನು 14.09 ಲಕ್ಷ ರೂ. ವೆಚ್ಚದಲ್ಲಿ ನೀಡಿದ್ದರು. ಇವರಿಗೆ ಯಾವ ನೈತಿಕತೆ ಇದೆ ಎಂದು ಸಚಿವರು ಪ್ರಶ್ನೆ ಮಾಡಿದರು.

Advertisement

ಪೊಲೀಸ್ ಅಧಿಕಾರಿ ನಂದೀಶ್ ಅವರದ್ದು ಸಹಜ ಸಾವಾಗಿದೆ. ಅವರೇನೂ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆದರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಧಿಕಾರಿ ಗಣಪತಿ ಅವರು ಆತ್ಮಹತ್ಯೆ ಮಾಡಿಕೊಂಡರು. ಅನುಪಮ ಶೆಣೈ ರಾಜೀನಾಮೆ ನೀಡಿದರು. ಆದರೆ ನಂದೀಶ್ ಸಾವಿಗೆ ಕಾಂಗ್ರೆಸ್ ರಾಜಕೀಯ ಬಣ್ಣ ಬಳಿದಿದೆ ಎಂದರು.

ಕಂದಾಯ ಇಲಾಖೆಯಿಂದ ಮನೆ ಬಾಗಿಲಿಗೆ ಸೇವೆ ನೀಡಲಾಗುತ್ತಿದೆ. ಆರೋಗ್ಯ ಇಲಾಖೆಯಿಂದ ‘ನಮ್ಮ ಕ್ಲಿನಿಕ್’ಗಳು ಆರಂಭವಾಗುತ್ತಿವೆ. ಕಲ್ಯಾಣ ಕರ್ನಾಟಕಕ್ಕೆ 5,000 ಕೋಟಿ ರೂ. ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಕಾಂಗ್ರೆಸ್‍ನವರು ಎಸ್‍ಸಿ, ಎಸ್‍ಟಿಗೆ ಬೆಣ್ಣೆ ಹಚ್ಚಿಕೊಂಡೇ ಇದ್ದರು. ಆದರೆ ಮೀಸಲಾತಿ ವಿಚಾರದಲ್ಲಿ ಬಿಜೆಪಿ ಕ್ರಮ ವಹಿಸಿದೆ. ಇದರಿಂದ ಸರ್ಕಾರಕ್ಕೆ ಜನಪ್ರಿಯತೆ ಹೆಚ್ಚಿದೆ. ಇದನ್ನು ನೋಡಿ ಕಾಂಗ್ರೆಸ್ ಗೆ ಸಹಿಸಿಕೊಳ್ಳಲು ಆಗದೆ ಅಪಪ್ರಚಾರ ಮಾಡಲಾಗುತ್ತಿದೆ ಎಂದರು.

ಲೋಕಾಯುಕ್ತಕ್ಕೆ ದೂರು

ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದ್ದು, ಪಾರದರ್ಶಕವಾಗಿ ತನಿಖೆಯಾಗುತ್ತದೆ. ಇದು ಕಾಂಗ್ರೆಸ್‍ನವರ ಎಸಿಬಿ ಅಲ್ಲ. ಕೇಸ್‍ಗಳನ್ನು ಮುಚ್ಚಿಹಾಕಲು ಕಾಂಗ್ರೆಸ್ ಎಸಿಬಿ ಆರಂಭಿಸಿತು. ಲೋಕಾಯುಕ್ತವಿದ್ದಿದ್ದರೆ ಕೇಸ್‍ಗಳನ್ನು ಮುಚ್ಚಿಹಾಕಲು ಆಗುತ್ತಿರಲಿಲ್ಲ ಎಂದರು.

ಕಾಂಗ್ರೆಸ್‍ಗೆ ಲೋಕಾಯುಕ್ತದ ಮೇಲೆ ನಂಬಿಕೆಯೇ ಇಲ್ಲ. ಅದಕ್ಕಾಗಿ ಎಸಿಬಿ ರಚನೆ ಮಾಡಿ ಅಧಿಕಾರಿಗಳನ್ನು ಕೈ ಕೆಳಗೆ ಇಟ್ಟುಕೊಂಡಿದ್ದರು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next