ಬೆಂಗಳೂರು: ಮುಂಬೈನಿಂದ ಕಂಟ್ರಿ ಮೇಡ್ ಪಿಸ್ತೂಲುಗಳನ್ನು ಕಳವು ಮಾಡಿ ತಂದು ನಗರದಲ್ಲಿ ತನ್ನದೇ ಗುಂಪು ಕಟ್ಟಿಕೊಂಡು ದರೋಡೆ, ಸುಲಿಗೆಗೆ ಸಿದ್ಧತೆ ನಡೆಸಿದ್ದ ಕಾರವಾರ ಮೂಲದ ಆರೋಪಿಯೊಬ್ಬ ಶಿವಾಜಿನಗರ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕಾರವಾರ ಜಿಲ್ಲೆ ಸಿದ್ದಾಪುರ ತಾಲೂಕಿನ ಜಯನಗರದ ನಿವಾಸಿ ಶೇಖ್ ಮುಸ್ತಫಾ (20) ಬಂಧಿತ.
ಆತನಿಂದ ಎರಡು ಕಂಟ್ರಿ ಮೇಡ್ ಪಿಸ್ತೂಲ್‌ಗಳು, ಮೂರು ಜೀವಂತ ಗುಂಡುಗಳು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು. ವಿದ್ಯಾಭ್ಯಾಸ ಅರ್ಧಕ್ಕೆ ಮೊಟಕಗೊಳಿಸಿರುವ ಶೇಖ್ ಮುಸ್ತಫಾ 2018ರಲ್ಲಿ ದುಬೈಗೆ ತೆರಳಿದ್ದು, ಅಲ್ಲಿ ಕ್ಯಾಟರಿಂಗ್ ಕೆಲಸ ಮಾಡಿಕೊಂಡಿದ್ದ.
ಎರಡು ತಿಂಗಳ ಹಿಂದೆ ಮುಂಬೈಗೆ ಬಂದು ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದ ಈತ, ಮುಂಬೈನ ದರೋಡೆ ಹಾಗೂ ಸುಲಿಗೆಕೋರ ಕಿಂಗ್ ಮಾಯಾ ಎಂಬಾತನ ತಂಡ ಸೇರಿಕೊಂಡು ಒಂದು ತಿಂಗಳ ಕಾಲ ದರೋಡೆ, ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದ. ಪೆಟ್ರೋಲ್ ಬಂಕ್ ಮಾಲೀಕನಿಗೆ ಬೆದರಿಕೆಯೊಡ್ಡಿ 50 ಸಾವಿರ ರೂ. ದರೋಡೆ ಮಾಡಿದ್ದ.
ಈ ವೇಳೆ ಅಕ್ರಮ ಹಣ ಸಂಪಾದನೆಗೆ ನಿರ್ಧರಿಸಿದ್ದ ಆರೋಪಿ, ಬೆಂಗಳೂರಿನಲ್ಲಿ ತನ್ನದೆ ತಂಡ ಕಟ್ಟಿಕೊಂಡು ದರೋಡೆ, ಸುಲಿಗೆ ಸಂಚು ರೂಪಿಸಿದ್ದ ಎಂದು ಪೊಲೀಸರು ಹೇಳಿದರು. ಈ ಮಧ್ಯೆ ಡಿ.4ರಂದು ಕಿಂಗ್ ಮಾಯಾ ಮದ್ಯದ ಅಮಲಿನಲ್ಲಿ ಮಲಗಿದ್ದಾಗ ಆತನ ಬಳಿಯಿದ್ದ ಎರಡು ಕಂಟ್ರಿ ಮೇಡ್ ಪಿಸ್ತೂಲ್ ಹಾಗೂ ಜೀವಂತ ಗುಂಡುಗಳನ್ನು ಆರೋಪಿ ಮುಸ್ತಫಾ ಕಳವು ಮಾಡಿದ್ದ.
ನಂತರ ಯಾರಿಗೂ ತಿಳಿಯದಂತೆ ಮುಂಬೈನಿಂದ ಬೆಂಗಳೂರಿಗೆ ಬಂದು, ಖಾಸಗಿ ಹೋಟೆಲ್‌ನ ಲಾಡ್ಜ್ನಲ್ಲಿ ವಾಸವಾಗಿದ್ದ. ಇತ್ತೀಚೆಗೆ ಶಿವಾಜಿನಗರದ ಬ್ರಾಡ್ವೇ ರಸ್ತೆಯಲ್ಲಿ ಕಂಟ್ರಿ ಮೇಡ್ ಪಿಸ್ತೂಲ್ ಇಟ್ಟುಕೊಂಡು ಸುಲಿಗೆಗೆ ಸಂಚು ರೂಪಿಸಿದ್ದ.
ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ಬಂಧಿಸಿ ಪಿಸ್ತೂಲ್ ವಶಕ್ಕೆ ಪಡೆಯಲಾಗಿದೆ. ಇದೇ ವೇಳೆ ಲಾಡ್ಜ್ನಲ್ಲಿ ಇಟ್ಟಿದ್ದ ಮತ್ತೂಂದು ಪಿಸ್ತೂಲ್ ಹಾಗೂ ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆತನ ಹಿನ್ನೆಲೆ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.