ಬೆಳ್ತಂಗಡಿ: ಟೆಲಿಗ್ರಾಂ ಮೂಲಕ ನಕಲಿ ಖಾತೆಯಿಂದ ಶಿಕ್ಷಕಿಯೋರ್ವರಿಗೆ ಬೆದರಿಕೆ ಹಾಕಿರುವುದಲ್ಲದೆ ಒಂದು ಲಕ್ಷ ರೂ. ವಸೂಲಿಗೈದು ವಂಚನೆ ಎಸಗಿರುವ ಆರೋಪಿಯನ್ನು ಕ್ಷಿಪ್ರ ಕಾರ್ಯಾಚರಣೆಯಡಿ ವೇಣೂರು ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಗ್ರಾಮದ ಅಂಟ್ರಿಂಜ ನಿವಾಸಿ ಅಶ್ವತ್ ಹೆಬ್ಬಾರ್ (23 ವ) ಆರೋಪಿಯಾಗಿದ್ದು, ಈತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಗ್ರಾಮದ ನಿವಾಸಿ, ಪೆರೋಡಿತ್ತಾಯಕಟ್ಟೆ ಶಾಲೆಯ ಶಿಕ್ಷಕಿ ಜ್ಯೋತಿ ಎಂಬವರಿಗೆ ನಕಲಿ ಟೆಲಿಗ್ರಾಂ ಖಾತೆ ಬಳಸಿ ಮೂರು ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದ. ಹಣ ನೀಡದೆ ಹೋದಲ್ಲಿ ಪತಿಗೆ ಜೀವಹಾನಿ ಮಾಡುವುದಾಗಿ ಬೆದರಿಕೆಯೊಡ್ಡಿದ್ದ ಎನ್ನಲಾಗಿದೆ.
ಈ ಬಗ್ಗೆ ಜ್ಯೋತಿ ಅವರು ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಕಾರ್ಯಾಚರಣೆಗಿಳಿದ ವೇಣೂರು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕಿ ಸೌಮ್ಯ ಜೆ., ಆನಂದ ಎಂ. ಪೊಲೀಸರ ತಂಡ ಆ.2ರಂದು ಮಧ್ಯರಾತ್ರಿ ತೆಂಕಕಾರಂದೂರು ಗ್ರಾಮದ ಗುಂಡೇರಿ ಎಂಬಲ್ಲಿಂದ ಬಂಧಿಸಿದ್ದಾರೆ.
ಸಿನಿಮೀಯ ರೀತಿ ಪ್ರಕರಣ: ಮೂರು ಲಕ್ಷ ರೂ. ಬೇಡಿಕೆ ಇಟ್ಟಿದ್ದ ಆರೋಪಿಗೆ ಒಂದು ಲಕ್ಷ ರೂ. ನೀಡುವುದಾಗಿ ಆರೋಪಿಯನ್ನು ಟೆಲಿಗ್ರಾಂನಲ್ಲಿ ಒಪ್ಪಿಸಿದಂತೆ ಆರೋಪಿ ಆ.2 ರಂದು ಸಂಜೆ ಅಳದಂಗಡಿ ಕೆದ್ದು ಸಮೀಪ ಹಣ ಎಸೆದು ಹೋಗಲು ಸೂಚಿಸಿದ್ದ. ಬಳಿಕ ಅಲ್ಲಿ ಎಸೆಯಬೇಡಿ ಎಂದು ಸಂದೇಶ ರವಾನಿಸಿ ಬೇರೊಂದು ಸ್ಥಳವನ್ನು ಸೂಚಿಸಿದ್ದ. ಹೀಗೆ ಮೂರ್‍ನಾಲ್ಕು ಬಾರಿ ಸ್ಥಳವನ್ನು ಬದಲಾಯಿಸುತ್ತಾ ಸಂದೇಶದಲ್ಲೆ ವ್ಯವಹರಿಸುತ್ತಿದ್ದ ಆರೋಪಿ ಶಿರ್ಲಾಲು ಸವಣಾಲು ಕ್ರಾಸ್ ಬಳಿ ಹಣವನ್ನು ವಾಹನದಿಂದ ಎಸೆದು ಹೋಗುವಂತೆ ತಿಳಿಸಿದ್ದ. ಅದರಂತೆ ಹಣದ ಬ್ಯಾಗನ್ನು ಎಸೆದು ಹೋಗಿದ್ದರು. ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿ ಹಣದ ಪ್ಯಾಕನ್ನು ಪಡೆಯುವಷ್ಟರಲ್ಲಿ ಮೊದಲೇ ಕಾದು ಕುಳಿತಿದ್ದ ಪೊಲೀಸರು ಹಿಡಿಯಲು ಯತ್ನಿಸಿದ್ದಾರೆ.
ಇದನ್ನೂ ಓದಿ:ಎಡವಟ್ಟು…; ಬ್ಯಾಟಿಂಗ್ ಗೆ ಬಂದ ಚಾಹಲ್ ರನ್ನು ಹಿಂದೆ ಕರೆಸಿದ ಕೋಚ್- ಕ್ಯಾಪ್ಟನ್| Video
ಆದರೆ ಅಚಾನಕ್ ಆಗಿ ತಪ್ಪಿಸಿಕೊಂಡಿದ್ದ ಆರೋಪಿ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದ, ಕ್ಷಿಪ್ರ ಕಾರ್ಯಾಚರಣೆಗಿಳಿದ ಪೊಲೀಸರು ತಡರಾತ್ರಿ ಆತನ ಅಣ್ಣನ ಮನೆ ಗುಂಡೇರಿ ಸಮೀಪ ದಸ್ತಗಿರಿ ಮಾಡಿ ಆತ ವಸೂಲಿ ಮಾಡಿದ್ದ ಒಂದು ಲಕ್ಷ ರೂ. ನಗದು, ಕೃತ್ಯಕ್ಕೆ ಉಪಯೋಗಿಸಿದ ಬೈಕನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.