Advertisement

ಬಿಜೆಪಿ ಮುಖಂಡನ ಮೇಲೆ ಹಲ್ಲೆ ಯತ್ನ: ಕಡಬ ಭಾಗಶಃ ಬಂದ್‌

03:20 AM Jul 18, 2017 | Team Udayavani |

ಕಡಬ: ಬಿಜೆಪಿ ಯುವ ಮುಖಂಡ, ಕಡಬ ಸಿ.ಎ.ಬ್ಯಾಂಕ್‌ ಉಪಾಧ್ಯಕ್ಷ ರಮೇಶ್‌ ಕಲ್ಪುರೆ ಅವರ ಮೇಲೆ ರವಿವಾರ ಸಂಜೆ ನಡೆದ ಹಲ್ಲೆ ಪ್ರಕರಣವನ್ನು ಖಂಡಿಸಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ನೀಡಿದ ಕಡಬ ಬಂದ್‌ ಕರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.

Advertisement

ಕಡಬ ಹಾಗೂ ಕೋಡಿಂಬಾಳ ಪೇಟೆಯಲ್ಲಿ  ಸೋಮವಾರ ಬೆಳಗ್ಗಿನಿಂದಲೇ ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್‌ ಆಗಿದ್ದವು. ಕೆಲವು ಅಂಗಡಿಗಳು ತೆರೆದಿದ್ದರೂ ಬಳಿಕ ಮುಚ್ಚಿದವು. ಶಾಲಾ,  ಕಾಲೇಜುಗಳಲ್ಲಿ ಎಂದಿನಂತೆಯೇ ಪಾಠ ಪ್ರವಚನಗಳು ನಡೆದವು. 

ರಾಷ್ಟ್ರೀಕೃತ ಬ್ಯಾಂಕ್‌ಗಳು, ತಹಶೀಲ್ದಾರ್‌ ಕಚೇರಿ ಹಾಗೂ ಇತರ ಸರಕಾರಿ ಕಚೇರಿಗಳು  ತೆರೆದಿದ್ದರೂ ಜನ ಸಂಖ್ಯೆ ವಿರಳವಾಗಿತ್ತು.  ಸದಾ ಜನರಿಂದ ತುಂಬಿರುತ್ತಿದ್ದ ಪೇಟ ಬಂದ್‌ ಹಿನ್ನೆಲೆಯಲ್ಲಿ  ಜನ ಸಂಚಾರ ಕಡಿಮೆಯಾಗಿ ಬಿಕೋ ಎನ್ನು ತ್ತಿತ್ತು. ಕೆಲವು ಆಟೋ ರಿûಾಗಳು ಸಂಚರಿಸುವುದು ಬಿಟ್ಟರೆ  ಇತರ ಬಾಡಿಗೆ ವಾಹನಗಳು ಸಂಚಾರ ಸ್ಥಗಿತ ಗೊಳಿಸಿದ್ದವು. ಕಡಬ ಮೂಲಕ ಹಾದು ಹೋಗುವ ಸರಕಾರಿ ಬಸ್ಸುಗಳು ಸಂಚಾರಕ್ಕೆ ತೊಂದರೆಯಿರಲಿಲ್ಲ. ಖಾಸಗಿ ಚಿಕಿತ್ಸಾಲಯಗಳು ತೆರೆದಿದ್ದರೆ, ಔಷಧದಂಗಡಿಗಳು ಮುಚ್ಚಿದ್ದವು.

ಘಟನೆ ಹಿನ್ನೆ‌ಲೆ
ರವಿವಾರ ಸಂಜೆಯ 6 ಗಂಟೆಯ ಸುಮಾರಿಗೆ ರಮೇಶ್‌ ಕಲ್ಪುರೆ ಅವರು ಕಡಬದ ಯಶೋದಾ  ಸೂಪರ್‌ ಶಾಪ್‌ನಿಂದ ದಿನಸಿ ಸಾಮಗ್ರಿ ಖರೀದಿಸಿ ತಮ್ಮ ಜೀಪಿನ ಬಳಿ ನಡೆದು ಹೋಗುತ್ತಿದ್ದ ವೇಳೆ ಕುಟ್ರಾಪ್ಪಾಡಿ ನಿವಾಸಿ  ಪ್ರಕಾಶ್‌ ಮತ್ತು ಆತನ  ಜತೆಗಾರರು ಏಕಾಏಕಿ ಹಲ್ಲೆ ನಡೆಸಿದರು. ಅಷ್ಟರಲ್ಲಿ ಅಲ್ಲಿಗೆ ಆಗಮಿಸಿದ ಸಾರ್ವಜನಿಕರು ಹಲ್ಲೆಕೋರರನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದರು.  ಸುದ್ದಿ ತಿಳಿದು ಕಡಬ ಪೊಲೀಸ್‌ ಠಾಣೆಯ ಮುಂದೆ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಜಮಾಯಿಸಿದ್ದರಿಂದ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.

ವಿವಿಧ ಸಂಘಟನೆಗಳ ಆಗ್ರಹ
ಬಂದ್‌ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಶ್ರೀ ದುರ್ಗಾಂಬಿಕಾ ದೇವ ಸ್ಥಾನದ ವಠಾರದಲ್ಲಿ ಬೆಳಗ್ಗೆಯಿಂದಲೇ ಜಮಾಯಿಸಲಾರಂಭಿಸಿದ್ದರು. ಅದನ್ನು ಕಂಡ ಪೊಲೀಸರು ನಿಷೇಧಾಜ್ಞೆ ಜಾರಿ ಯಲ್ಲಿರುವುದರಿಂದ ಗುಂಪುಗೂಡ ದಂತೆ ಸೂಚಿಸಿದರು. ಈಗಾಗಲೇ ಹಲ್ಲೆಕೋರರನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿರುವುದರಿಂದ ಈ ರೀತಿ ಗುಂಪುಗೂಡಿ ಅಶಾಂತಿಗೆ ಎಡೆಮಾಡಿ ಕೊಡದಂತೆ ವೃತ್ತ ನಿರೀಕ್ಷಕ ಅನಿಲ್‌ಕುಲಕರ್ಣಿ ಸಂಘಟನೆಗಳ ಮುಖಂಡರಿಗೆ ಮನವಿ ಮಾಡಿದರು.

Advertisement

ಆ ಸಂದರ್ಭದಲ್ಲಿ ಕಾರ್ಯಕರ್ತರನ್ನು ದ್ದೇಶಿಸಿ ಮಾತನಾಡಿದ ಬಿಜೆಪಿ ಮುಖಂಡ  ಕೃಷ್ಣ ಶೆಟ್ಟಿ, ಈಗಾಗಲೇ ಪೊಲೀಸರು ಹಲ್ಲೆ ಕೋರರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಯಾವುದೇ ಒತ್ತಡಗಳಿಗೆ ಮಣಿಯದೆ ಪೊಲೀಸರು ದುಷ್ಕರ್ಮಿಗಳ ವಿರುದ್ಧ ಕಠಿನ ಕಾನೂನು ಕ್ರಮ ಕೈಗೊಳ್ಳಬೇಕು. ಸದಾ ಶಾಂತಿಯಲ್ಲಿರುವ ಕಡಬದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲರೂ ಸಹಕಾರ ನೀಡಬೇಕು. ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಎಲ್ಲರೂ ಇಲ್ಲಿಂದ ತೆರಳಬೇಕು ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು. ಅದಾದ ಬಳಿಕ ಗುಂಪು ಚದುರಿತು. 

ಈ ಸಂದರ್ಭದಲ್ಲಿ  ಕಡಬ ಸಿ.ಎ. ಬ್ಯಾಂಕ್‌ ಅಧ್ಯಕ್ಷ ಸುಂದರ ಗೌಡ ಮಂಡೆಕರ, ನಿರ್ದೇಶಕ ಸೀತಾರಾಮ ಗೌಡ ಪೊಸವಳಿಕೆ, ಎಪಿಎಂಸಿ ಸದಸ್ಯೆ ಪುಲಸಾö ರೈ, ಬಿಜೆಪಿ ಮುಖಂಡರಾದ ಸತೀಶ್‌ ನಾಯಕ್‌, ಪ್ರಕಾಶ್‌ ಎನ್‌.ಕೆ., ಪ್ರಮುಖರಾದ ರವಿರಾಜ ಶೆಟ್ಟಿ, ವೆಂಕಟ್ರಮಣ ಕುತ್ಯಾಡಿ, ಫಯಾಜ್‌ ಕೆನರಾ, ದಾಮೋದರ ಗೌಡ ಡೆಪ್ಪುಣಿ, ಗಿರೀಶ್‌ ಎ.ಪಿ.,  ಜಯರಾಮ ಪಡೆಜ್ಜಾರ್‌, ಅಶೋಕ್‌ ಕುಮಾರ್‌ ಪಿ., ಸುರೇಶ್‌ ದೇಂತಾರು, ಪ್ರಮೋದ್‌ ರೈ ನಂದುಗುರಿ,   ಶಿವಪ್ರಸಾದ್‌ ರೈ  ಮೈಲೇರಿ,  ಹರೀಶ್‌ ಕೊಡಂದೂರು, ಪ್ರಮೋದ್‌ ರೈ ಕುಡಾಲ, ಚಿದಾನಂದ ದೇವುಪಾಲ್‌ ಮೊದಲಾದವರು ಉಪಸ್ಥಿತರಿದ್ದರು.

ಎಸ್ಪಿ  ಭೇಟಿ, ಪರಿಶೀಲನೆ
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಧೀರ್‌ ರೆಡ್ಡಿ  ಅವರು ಮಧ್ಯಾಹ್ನ ಕಡಬ ಪೊಲೀಸ್‌ ಠಾಣೆಗೆ ಭೇಟಿ ನೀಡಿ ಘಟನೆಯ ಬಗ್ಗೆ  ಮಾಹಿತಿ ಪಡೆದರು.  ಬಳಿಕ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು  ಘಟನೆಗೆ ಸಂಬಂಧಿಸಿ ಈಗಾಗಲೇ 6 ಮಂದಿಯನ್ನು  ಬಂಧಿಸಲಾಗಿದ್ದು  ತನಿಖೆ ಮುಂದುವರಿಯುತ್ತಿದೆ. ಜಿಲ್ಲೆಯಲ್ಲಿ ಶಾಂತಿ ಕದಡುವವರನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಪೊಲೀಸ್‌ ಸರ್ಪಗಾವಲು 
ಪುತ್ತೂರು ಡಿವೈಎಸ್‌ಪಿ  ಶ್ರೀನಿವಾಸ್‌,  ಪುತ್ತೂರು ಗ್ರಾಮಾಂತರ  ವೃತ್ತ ನಿರೀಕ್ಷಕ ಅನಿಲ್‌ ಕುಲಕರ್ಣಿ, ಹೆಚ್ಚುವರಿ ಪಡೆಯ  ಇನ್ಸ್‌ಪೆಕ್ಟರ್‌ ಉಮೇಶ್‌ ಉಪ್ಪಳಿಕೆ, ಇಂಟಲಿಜೆನ್ಸ್‌  ಇನ್ಸ್‌ಪೆಕ್ಟರ್‌ ನಂದಕುಮಾರ್‌, ಸಂಪ್ಯ ಎಸ್‌.ಐ.ಖಾದರ್‌, ಕಡಬ ಎಸ್‌.ಐ. ಪ್ರಕಾಶ್‌ ದೇವಾಡಿಗ  ಅವರ ನೇತೃತ್ವದಲ್ಲಿ ಕಡಬ ಪೇಟೆಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಹೆಚ್ಚುವರಿ ಪೊಲೀಸ್‌ ಪಡೆಯನ್ನು ಕರೆಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next