ಹೊಸದಿಲ್ಲಿ : ಗುಜರಾತ್‌ನ ಬನಾಸ್‌ಕಾಂತಾ ಜಿಲ್ಲೆಯ ಧನೇರಾ ಪಟ್ಟಣದಲ್ಲಿ ನಿನ್ನೆ ಪ್ರವಾಹ ಪೀಡಿತರನ್ನು ಭೇಟಿಯಾಗಿ ಸಾಂತ್ವನ ಹೇಳಿ ಸಭೆಯನ್ನು ಉದ್ದೇಶಿಸಿ ಮಾತನಾಡಲು ಬಂದಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ಕರಿ ಪತಾಕೆ ತೋರಿಸಿ, ಪ್ರಧಾನಿ ಮೋದಿ ಪರ ಘೋಷಣೆ ಕೂಗಿ, ರಾಹುಲ್ ಕಾರಿಗೆ ಕಲ್ಲೆಸೆಯಲಾದ ಘಟನೆಯಲ್ಲಿ ಶಾಮೀಲಾದ ಆರೋಪದ ಮೇಲೆ ಪೊಲೀಸರು ಸ್ಥಳೀಯ ಬಿಜೆಪಿ ನಾಯಕ ಜಯೇಶ್ ದಾರ್ಜಿ ಎಂಬವರನ್ನು ಬಂಧಿಸಿದ್ದಾರೆ.
ಬಿಜೆಪಿ ನಾಯಕ ಜಯೇಶ್ ದಾರ್ಜಿ ಅವರು ರಾಹುಲ್ ಗಾಂಧಿ ಕಾರಿನ ಮೇಲೆ ನಡೆಸಲಾದ ಕಲ್ಲೆಸೆತದ ದಾಳಿಯಲ್ಲಿ ಶಾಮೀಲಾಗಿದ್ದರು ಎಂದು ಸ್ಥಳೀಯ ಕಾಂಗ್ರೆಸ್ ಆರೋಪಿಸಿತ್ತು.
ರಾಹುಲ್ ಗಾಂಧಿ ಕಾರಿನ ಮೇಲಿನ ದಾಳಿ ಘಟನೆಗೆ ಸಂಬಂಧಿಸಿ ಈ ತನಕವೂ ಪೊಲೀಸರು ಎಫ್ಐಆರ್ ದಾಖಲಿಸದಿರುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಪ್ರಧಾನ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿದ್ದರು.
“ಹೀಗೆ ಪ್ರತಿಭಟಿಸಿ ಸಮಯ ವ್ಯರ್ಥ ಮಾಡುವ ಬದಲು ನೀವು ಪ್ರವಾಹ ಪೀಡಿತರಿಗೆ ನೆರವಾಗುವ ಕೆಲಸ ಮಾಡಿ’ ಎಂದು ರಾಹುಲ್ ಗಾಂಧಿ, ಪ್ರತಿಭಟನೆ ನಿರತ ಕಾಂಗ್ರೆಸ್ ಕಾರ್ಯಕರ್ತರಿಗೆ ಹೇಳಿದರು.
ಹಲ್ಲೆ ಘಟನೆಯನ್ನು ಖಂಡಿಸಿ ಪ್ರಧಾನಿ ಮೋದಿ ಈ ವರೆಗೆ ಯಾವುದೇ ಹೇಳಿಕೆ ಕೊಟ್ಟಿಲ್ಲವಲ್ಲ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ರಾಹುಲ್ ಗಾಂಧಿ, “ಇದರಲ್ಲಿ ಶಾಮೀಲಾದವರೇ ಅದನ್ನು ಹೇಗೆ ಖಂಡಿಸಬಲ್ಲರು; ಇದು ಮೋದಿ ಜೀ, ಬಿಜೆಪಿ, ಆರ್‌ಎಸ್‌ಎಸ್ ನವರ ರಾಜಕಾರಣದ ಶೈಲಿ; ಅದರ ಬಗ್ಗೆ ಯಾರಾದರೂ ಏನನ್ನು ತಾನೇ ಹೇಳಬಹುದು ?’ ಎಂದು ಮಾರ್ಮಿಕವಾಗಿ ಉತ್ತರಿಸಿದರು.