Advertisement

ಗಲಾಟೆ ತಡೆಯಲು ಬಂದ ಪೊಲೀಸರಿಗೆ ರಾಡ್ ನಿಂದ ಹೊಡೆದು ಹಲ್ಲೆ: ಆರೋಪಿಗೆ ಥಳಿಸಿದ ಸಾರ್ವಜನಿಕರು

07:43 PM Jul 10, 2020 | keerthan |

ಬಂಟ್ವಾಳ: ಲಾರಿ ಚಾಲಕರಿಗೆ ಮತ್ತು ಸಾರ್ವಜನಿಕರ ನಡುವಿನ ಗಲಾಟೆ ತಪ್ಪಿಸಲು ಬಂದ ಪೊಲೀಸರಿಗೆ ವ್ಯಕ್ತಿಯೊಬ್ಬ ಕಬ್ಬಿಣದ ರಾಡ್ ನಿಂದ ಹೊಡೆದು ಹಲ್ಲೆ ಮಾಡಿದ ಘಟನೆ ಗುರುವಾರ ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪದ ಮೆಲ್ಕಾರ್ ನಲ್ಲಿ ನಡೆದಿದೆ.

Advertisement

ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನು ಗೋಳ್ತಮಜಲು ಗ್ರಾಮದ ಅಬ್ದುಲ್ ಸಲಾಂ (28) ಎಂದು ಗುರುತಿಸಲಾಗಿದೆ. ಪೊಲೀಸರ ಮೇಲೆ ಹಲ್ಲೆ ಮಾಡಿದ ಕಾರಣ ನೆರೆದಿದ್ದ ಸ್ಥಳೀಯರು ಆತನಿಗೆ ಥಳಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಗುರುವಾರ ರಾತ್ರಿ ಮೆಲ್ಕಾರ್ ನಲ್ಲಿ ಲಾರಿ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ಗಲಾಟೆಯಾಗುತ್ತಿದೆ ಎಂಬುದಾಗಿ ಬಂದ ಮಾಹಿತಿಯ ಮೇರೆಗೆ ಬಂಟ್ವಾಳ ನಗರ ಪೊಲೀಸ್ ಠಾಣಾ ಸಹಾಯಕ ಪೊಲೀಸ್ ಉಪನಿರೀಕ್ಷಕ ಶೈಲೇಶ್ ಟಿ ಮತ್ತು ಮೂವರು ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ತೆರಳಿದ್ದರು. ಸ್ಥಳದಲ್ಲಿ ಕೈಯಲ್ಲಿ ಕಬ್ಬಿಣದ ರಾಡನ್ನು ಹಿಡಿದುಕೊಂಡು ಗಲಾಟೆ ಮಾಡುತ್ತಿದ್ದ ಅಬ್ದುಲ್ ಸಲಾಂ ಎಂಬಾತನನ್ನು ತಡೆಯಲು ಹೋದಾಗ ಆರೋಪಿಯು ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ.

ನಂತರ ಕೈಯಲ್ಲಿದ್ದ ಕಬ್ಬಿಣದ ರಾಡಿನಲ್ಲಿ ಏಕಾಏಕಿಯಾಗಿ ಪೊಲೀಸರಿಗೆ ಹಲ್ಲೆ ನಡೆಸಿದ್ದು, ಸ್ಥಳದಲ್ಲಿದ್ದ ಇಲಾಖಾ ವಾಹನವನ್ನು ರಾಡ್ ನಿಂದ ಹೊಡೆದು ಕಾಲಿನಿಂದ ತುಳಿದು ಕೈಯಿಂದ ಹೊಡೆದು ಜಖಂಗೊಳಿಸಿದ್ದಾನೆ. ಈ ಸಂದರ್ಭದಲ್ಲಿ ಸ್ಥಳದಲ್ಲಿ ಸೇರಿದ್ದ ಸಾರ್ವಜನಿಕರು ಆರೋಪಿಗೆ ಥಳಿಸಿದ್ದು, ಆರೋಪಿಯೂ ಗಾಯಗೊಂಡಿದ್ದಾನೆ ಎನ್ನಲಾಗಿದೆ.

ಹಲ್ಲೆಗೊಳಗಾದ ಸಹಾಯಕ ಪೊಲೀಸ್ ಉಪನಿರೀಕ್ಷಕ ಶೈಲೇಶ್ ಟಿ ಮತ್ತು ಇತರ ಮೂವರು ಪೊಲೀಸರಿಗೆ ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆರೋಪಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ 353, 504, 506, 332, 307,427  ಐಪಿಸಿ ಮತ್ತು 2ಎ ಕೆಪಿಡಿಎಲ್ ಪಿ ಕಾಯ್ದೆಯಂತೆ ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next