ಹೊಸದಿಲ್ಲಿ : ಜನಸಾಮಾನ್ಯರಿಗೆ ಭಾರೀ ದೊಡ್ಡ ರಿಲೀಫ್ ನೀಡುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಇಂದು ಸೋಮವಾರ ಜನರು ದಿನವಹಿ ATMನಿಂದ ವಿದ್‌ಡ್ರಾ ಮಾಡುವ ಹಣದ ಈ ವರೆಗಿನ 4,500 ರೂ.ಗಳ ಮಿತಿಯನ್ನು 10,000 ರೂ.ಗೆ ಏರಿಸಿದೆ.
ಇದೇ ವೇಳೆ ಗ್ರಾಹಕರು ತಮ್ಮ ಚಾಲ್ತಿ ಖಾತೆಯಿಂದ ವಾರಕ್ಕೆ 50,000 ರೂ. ಡ್ರಾ ಮಾಡುವ ಮಿತಿಯನ್ನು ಆರ್‌ಬಿಐ ಇಂದು 1 ಲಕ್ಷ ರೂ.ಗಳಿಗೆ ಏರಿಸಿದೆ. ಈ ಸೌಕರ್ಯವನ್ನು ಅದು ಕ್ಯಾಶ್ ಕ್ರೆಡಿಟ್ ಹಾಗೂ ಓವರ್ ಡ್ರಾಫ್ಟ್ ಖಾತೆಗಳಿಗೂ ವಿಸ್ತರಿಸಿದೆ.
ಆರ್‌ಬಿಐ ಈ ಸಂಬಂಧ ಇಂದು ತನ್ನ ಅಧಿಕೃತ ವೆಬ್ ಸೈಟಿನಲ್ಲಿ ಅಧಿಸೂಚನೆಯನ್ನು ಪ್ರಕಟಿಸಿದೆ. ಮಾತ್ರವಲ್ಲದೆ 2016ರ ನವೆಂಬರ್ 28ರಂದು ಮಾಡಲಾಗಿದ್ದ ರಿಯಾಯಿತಿಗಳು ಹಾಗೂ ನಮೂದಿಸಲಾಗಿದ್ದ ಯಾವುದೇ ನಿರ್ಬಂಧಗಳಿಗೆ ಯಾವುದೇ ರೀತಿಯ ಬದಲಾವಣೆಗಳನ್ನು ಮಾಡಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ಕಳೆದ ವರ್ಷ ಡಿಸೆಂಬರ್ 31ರಂದು ನೋಟು ಅಪನಗದೀಕರಣ ಕ್ರಮಕ್ಕೆ 50 ದಿನಗಳಾದಾಗ ಆರ್‌ಬಿಐ, ಎಟಿಎಂಗಳಿಂದ ಜನರು ವಿದ್‌ಡ್ರಾ ಮಾಡುವ ಹಣದ ಮೇಲಿನ ಮಿತಿಯನ್ನು ಏರಿಸಿತ್ತು.
ಕಳೆದ ನ.8ರಂದು ಮೋದಿ ಸರಕಾರ ನೋಟು ಅಪನಗದೀಕರಣ ಕೈಗೊಂಡಿದ್ದಾಗ ATM ಗಳಿಂದ ಜನರು ವಿದ್‌ಡ್ರಾ ಮಾಡುವ ಹಣದ ಮಿತಿಯನ್ನು ದಿನಕ್ಕೆ 2,500 ರೂ.ಗೆ ಸೀಮಿತಗೊಳಿಸಲಾಗುವುದು ಎಂದು ಹೇಳಿದ್ದ ಸಂದರ್ಭದಲ್ಲಿ ಜನರು ಕಂಗಾಲಾಗಿದ್ದರು.
ಅನಂತರದ 50 ದಿನಗಳಲ್ಲಿ ಜನರು ಬ್ಯಾಂಕುಗಳ ಮುಂದೆ ದೊಡ್ಡ ದೊಡ್ಡ ಕ್ಯೂಗಳಲ್ಲಿ ನಿಂತು ಹಣ ವಿದ್‌ಡ್ರಾ ಮಾಡುವ ಸ್ಥಿತಿ ಏರ್ಪಟ್ಟಿತ್ತು. ಆ 50 ದಿನಗಳ ಅವಧಿಯಲ್ಲಿ ದೇಶದಲ್ಲಿ ವಿಪರೀತ ನಗದು ಕೊರತೆ ಕಂಡು ಬಂದಿತ್ತು.