Advertisement

ಗ್ರಾ.ಪಂ.ಗಳಿಗೆ ಎಟಿಎಂ ಸೇವೆ ಇನ್ನೂ ಮರೀಚಿಕೆ

08:15 AM Jul 31, 2017 | Team Udayavani |

ವೇಣೂರು: ಗ್ರಾಮೀಣ ಭಾಗದ ಜನತೆಗೂ ಬ್ಯಾಂಕಿಂಗ್‌ ಸೇವೆ ಸುಲಭವಾಗಿ ಲಭಿಸಬೇಕೆಂಬ ಉದ್ದೇಶದಿಂದ ಸರಕಾರ ಗ್ರಾ.ಪಂ.ಗಳಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಎಟಿಎಂ ಸೌಲಭ್ಯ ಇನ್ನೂ ಜಾರಿಯಾಗಿಲ್ಲ. ಈ ಯೋಜನೆಗೆ ಪ್ರಾಯೋಗಿಕ
ವಾಗಿ ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಹಾಗೂ ಬಂಟ್ವಾಳ ತಾಲೂಕಿನ ಕೇಪು ಗ್ರಾ.ಪಂ.ನ್ನು ಆಯ್ಕೆ ಮಾಡಲಾಗಿತ್ತು.
ಹೊಸಂಗಡಿ ಗ್ರಾ.ಪಂ. ಆಯ್ಕೆ ರಾಜ್ಯದ 100 ಗ್ರಾ.ಪಂ.ಗಳಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲು ಸರಕಾರ ಕಳೆದ ಸಾಲಿನ 2016ರಲ್ಲಿ ಯೋಜನೆ ರೂಪಿಸಿತ್ತು. ದ.ಕ. ಜಿಲ್ಲೆಯಲ್ಲಿ 4 ಗ್ರಾ.ಪಂ.ಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿತ್ತು. ಇದರಲ್ಲಿ ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿ ಗಳಿಸಿ ಗುರುತಿಸಿಕೊಂಡಿರುವ ಬೆಳ್ತಂಗಡಿ ತಾ|ನ ಹೊಸಂಗಡಿ ಗ್ರಾ.ಪಂ.ನ್ನು ಆಯ್ಕೆ ಮಾಡಲಾಗಿತ್ತು.

Advertisement

36 ಗ್ರಾ.ಪಂ.ಗಳಿಗೆ ಪ್ರಸ್ತಾವನೆ
ಕೇಂದ್ರದ ಗ್ರಾಮೀಣ ಅಭಿವೃದ್ಧಿ ಇಲಾಖೆ ಈ ಸಂಬಂಧ ರಾಜ್ಯ ಸರಕಾರಕ್ಕೆ  2016ರ ಜೂ.3ರಂದು ಪತ್ರ ಬರೆದಿತ್ತು. ಈ ಪತ್ರಕ್ಕೆ ಸ್ಪಂದಿಸಿದ ರಾಜ್ಯ ಸರಕಾರ ಎಟಿಎಂ ಆರಂಭಿಸಲು ಕೇಂದ್ರದ ಮಾನದಂಡದಂತೆ ಅರ್ಹತೆ ಹೊಂದಿರುವ ರಾಜ್ಯದ 994  ಗ್ರಾಮ ಪಂಚಾಯತ್‌ಗಳನ್ನು ಗುರುತಿಸಿ ಪ್ರಸ್ತಾವನೆ ಕಳುಹಿಸಿತ್ತು. ಬೆಳ್ತಂಗಡಿ ತಾಲೂಕಿನಿಂದ 36 ಗ್ರಾ.ಪಂ.ಗಳಿಗೆ ಎಟಿಎಂ ಸೌಲಭ್ಯ ಕಲ್ಪಿಸುವಂತೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಆದರೆ ಇದರಲ್ಲಿ ಹೊಸಂಗಡಿ ಗ್ರಾ.ಪಂ. ಆಯ್ಕೆ ಆಗಿದ್ದರೆ ಬಂಟ್ವಾಳ ತಾಲೂಕಿನಿಂದ 21 ಗ್ರಾ.ಪಂ.ಗಳನ್ನು ಆಯ್ಕೆ ಮಾಡಿ ಕಳುಹಿಸಲಾಗಿತ್ತು. ಇದರಲ್ಲಿ ಕೇಪು ಗ್ರಾಮ ಪಂಚಾಯತ್‌  ಪ್ರಾಯೋಗಿಕ ಎಟಿಎಂ ಸೇವೆಗೆ ಆಯ್ಕೆಯಾಗಿತ್ತು. 

ಗ್ರಾ.ಪಂ.ಗೆ ಮಾಹಿತಿ ಇಲ್ಲ
ಪ್ರತೀ ಜಿಲ್ಲೆಯ 4 ಗ್ರಾ.ಪಂ.ಗಳಲ್ಲಿ ಎಟಿಎಂ ಕೇಂದ್ರ ತೆರೆಯುವ ಯೋಜನೆ ಸರಕಾರದ ಮುಂದಿತ್ತು. ಇಲ್ಲಿನ ಸಾಧಕ-ಬಾಧಕಗಳನ್ನು ನೋಡಿಕೊಂಡು ಇನ್ನುಳಿದ ಅರ್ಹ ಗ್ರಾಮ ಪಂಚಾಯತ್‌ಗಳಿಗೆ ವಿಸ್ತರಿಸುವ ಬಗ್ಗೆ ಸರಕಾರ ಹೇಳಿಕೊಂಡಿತ್ತು. ಆದರೆ ಪ್ರಾಯೋಗಿಕ ಸೇವೆಯೇ ಪ್ರಾರಂಭಗೊಂಡಿಲ್ಲ. ಪಂಚಾಯತ್‌ಗಳಿಗೆ ಈ ಬಗ್ಗೆ ಮಾಹಿತಿಯೇ ಇಲ್ಲವಾಗಿದೆ.

ಗ್ರಾಮೀಣ ಜನತೆಗೆ ಉಪಯೋಗ 
ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರು ತಮ್ಮ ಖಾತೆಗೆ ಜಮೆ ಆದ ಕೂಲಿ ಹಣವನ್ನು ಪಡೆಯಲು ನಗರ ಭಾಗಗಳಿಗೆ ಹೋಗಬೇಕು. ಗ್ರಾಮೀಣ ಭಾಗಗಳಲ್ಲಿ ಎಟಿಎಂ ನಿರ್ಮಾಣ ಆದರೆ ಕಾರ್ಮಿಕರು ಹಣವನ್ನು ಗ್ರಾಮದಲ್ಲೇ ಸುಲಭವಾಗಿ ಹಣ ಪಡೆಯಬಹುದು. ಅಲ್ಲದೆ ಸರ್ಕಾರದ ವಿವಿಧ ಯೋಜನೆಗಳಲ್ಲಿ ಕೃಷಿಕರಿಗೆ ಸಹಾಯಧನ, ಸಬ್ಸಿಡಿ ಹಣವನ್ನು ಕೂಡಾ ಎಟಿಎಂ ಮೂಲಕ ಪಡೆಯಲು ಅನುಕೂಲವಾಗುತ್ತಿತ್ತು. 

ಇನ್ನೂ ಲಭಿಸದ ವೈಫೆ„ ಸೇವೆ
2017ರ ಮಾರ್ಚ್‌ ವೇಳೆಗೆ ರಾಜ್ಯದ ಎಲ್ಲಾ ಗ್ರಾ.ಪಂ.ಗಳಲ್ಲಿ ವೈಫೆ„ ಸಂಪರ್ಕ ಕಲ್ಪಿಸುವ ಬಗ್ಗೆ ಸರಕಾರ ನೀಡಿದ ಭರವಸೆಯೂ ಈಡೇರಿಲ್ಲ.

Advertisement

– ಪದ್ಮನಾಭ ಕುಲಾಲ್‌ ವೇಣೂರು

Advertisement

Udayavani is now on Telegram. Click here to join our channel and stay updated with the latest news.

Next