ಬೆಂಗಳೂರು: ಎಟಿಎಂನಲ್ಲಿ ಮಹಿಳೆಯೊಬ್ಬರು ಹಣ ಡ್ರಾ ಮಾಡುವಾಗಲೇ ಕಾರ್ಡ್ ಅದಲು ಬದಲು ಮಾಡಿದ ವಂಚಕನೊಬ್ಬ ಬಳಿಕ ಎರಡು ಲಕ್ಷ ರೂ. ಡ್ರಾ ಮಾಡಿಕೊಂಡಿರುವ ಘಟನೆ ಪೀಣ್ಯದಲ್ಲಿ ನಡೆದಿದೆ.
ಖಾಸಗಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುವ ನಾಗರತ್ನ ಮಾ. 13ರಂದು ಜಾಲಹಳ್ಳಿಯಲ್ಲಿರುವ ಆಕ್ಸಿಸ್ ಬ್ಯಾಂಕ್ ಎಟಿಎಂಗೆ ತೆರಳಿದ್ದರು. ಈ ವೇಳೆ ಮೂವರು ವ್ಯಕ್ತಿಗಳು ಹಿಂದೆ ನಿಂತಿದ್ದರು. ಅವರೂ ಹಣ ಡ್ರಾ ಮಾಡಲು ಬಂದಿರಬಹುದೆಂದು ಭಾವಿಸಿ, 10 ಸಾವಿರ ರೂ. ಡ್ರಾ ಮಾಡಿದ್ದಾರೆ. ಮತ್ತೆ ಪ್ರಯತ್ನಿಸಿದಾಗ ಹಣ ಬಾರದಿರುವುದನ್ನು ಪರಿಶೀಲಿಸಿ ವಾಪಸ್ ಬಂದಿದ್ದಾರೆ.
ಇದಾದ ಕೆಲವೇ ಗಂಟೆಗಳಲ್ಲಿ ಅವರ ಅಕೌಂಟ್‌ನಿಂದ 2ಲಕ್ಷ ರೂ. ಡ್ರಾ ಮಾಡಿಕೊಂಡಿರುವ ಬಗ್ಗೆ ಮೊಬೈಲ್‌ಗೆ ಮೆಸೇಜ್‌ನಿಂದ ಬಂದಿದೆ. ಇದರಿಂದ ಅಚ್ಚರಿಗೊಂಡ ಅವರು ಮಾರನೇ ದಿನ ಈ ಬಗ್ಗೆ ಬ್ಯಾಂಕ್‌ಗೆ ವಿಚಾರಿಸಲು ತೆರಳಿದಾಗ, ಅವರ ಬಳಿಯಿದ್ದ ಕಾರ್ಡ್ ಅವರದ್ದಲ್ಲ, ಬೇರೆಯವರದು ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ಹಣ ಡ್ರಾ ಮಾಡುವಾಗ ಹಿಂದೆ ನಿಂತಿದ್ದವ ವ್ಯಕ್ತಿಯೊಬ್ಬ ಇವರು ಹಣ ಪಡೆದುಕೊಳ್ಳುವಾಗ ಕೆಲವೇ ಕ್ಷಣಗಳಲ್ಲಿ ಅವರ ಕಾರ್ಡ್ ಪಡೆದು ಮತ್ತೂಂದು ಆಕ್ಸಿಸ್ ಕಾರ್ಡ್‌ನ್ನೇ ಇಟ್ಟಿದ್ದಾರೆ. ಇದನ್ನು ಗಮನಿಸದ ನಾಗರತ್ನ ಅವರು ತಮ್ಮದೇ ಎಟಿಎಂ ಕಾರ್ಡ್ ಇರಬಹುದು ಎಂದು ವಾಪಾಸ್ ಬಂದಿದ್ದಾರೆ.
2 ಲಕ್ಷ ರೂ. ಕಡಿತಗೊಂಡ ಬಳಿಕವೇ ಅವರಿಗೆ ತಮ್ಮ ಕಾರ್ಡ್ ಅದಲು ಬದಲಾಗಿದೆ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದರು. ಈ ಕುರಿತು ನಾಗರತ್ನ ಪೀಣ್ಯ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಎಟಿಎಂ ಕೇಂದ್ರದ ಸಿಸಿಟಿವಿ ಫೂಟೇಜ್ ಪರಿಶೀಲಿಸಿದ್ದು ವಂಚಕನ ಬಂಧನಕ್ಕೆ ಬಲೆ ಬೀಸಿದ್ದಾರೆ.