Advertisement

ನಾಳೆ ಆಟಿ ಅಮಾವಾಸ್ಯೆ ಆಚರಣೆ

08:25 PM Aug 06, 2021 | Team Udayavani |

ಉಡುಪಿ: ರವಿವಾರ (ಆ. 8) ಆಷಾಢ ಮಾಸದ ಆಟಿ ಅಮಾವಾಸ್ಯೆ. ಪ್ರತಿ ವರ್ಷ ಈ ದಿನ ಹಾಲೆ ಮರದ ಕಷಾಯವನ್ನು ಕುಡಿಯುವುದು ವಾಡಿಕೆ. ಸಂಸ್ಕೃತದಲ್ಲಿ ಸಪ್ತಪರ್ಣಿ ಎನ್ನುತ್ತಾರೆ. ಅತಿ ಕಹಿಯಾದ ನೈಸರ್ಗಿಕ ಔಷಧಿ ಇದು. ಹೀಗಾಗಿಯೇ ಮಕ್ಕಳು ಇದನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಾರೆ. ಆಗ ತಾಯಂದಿರು ಒಂದಿಷ್ಟು ಸಿಹಿಯನ್ನು ಬಾಯಿಗೆ ಹಾಕಿ ಕಷಾಯವನ್ನು ಕುಡಿಸುವುದುಂಟು.

Advertisement

ಈಗ ಕೊರೊನಾ ಸೋಂಕಿನ ಕಾಲಘಟ್ಟ. ಮಳೆಗಾಲದಲ್ಲಿ ವೈರಲ್‌ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಔಷಧೀಯ ಕ್ರಮ ಬಂದಿದೆ. ಇದೊಂದು ರೀತಿಯಲ್ಲಿ ರೋಗ ಬಾರದಂತೆ ತಡೆಯುವ ಮಾರ್ಗ ಎಂಬ ವಿಶ್ಲೇಷಣೆ ಇದೆ.

ಈಗ ಇತರ ಜಾತಿಗಳ ಮರಗಳ ಸಂಖ್ಯೆ ಕಡಿಮೆಯಾಗಿರುವಂತೆ ಹಾಲೆ ಮರಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಎಲ್ಲರಿಗೂ ಹಾಲೆ ಮರದ ಕೆತ್ತೆ ಬೇಕು, ಹಾಲೆ ಮರವನ್ನು ಬೆಳೆಸುವ ಕುರಿತು ಗಮನ ಹರಿಸುವವರು ಕಡಿಮೆ. ಇದು ಹಲಸು, ಸಾಗವಾನಿ ರೀತಿಯಲ್ಲಿ ಬೆಲೆ ಬಾಳುವ ಮರ ಆಗಿರದ ಕಾರಣ ಇದನ್ನು ಬೆಳೆಸುವವರು, ಪೋಷಿಸುವವರೂ ಕಡಿಮೆ. ವರ್ಷಕ್ಕೆ ಒಂದು ದಿನ ಮಾತ್ರ ನೆನಪಾಗುವ ಮರವಾದ ಕಾರಣ “ಯೂಸ್‌ ಆ್ಯಂಡ್‌ ತ್ರೋ’ ಸ್ಥಿತಿ ಈ ವೃಕ್ಷವರ್ಗಕ್ಕೆ ಆಗಿದೆ. ಹೀಗೆ ಮುಂದುವರಿದರೆ ಹಾಲೆ ಮರವನ್ನು ಹುಡುಕಿಕೊಂಡು ಹೋಗಬೇಕಾಗಬಹುದು. ಇಂತಹ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುವ ಶಕ್ತಿಗಳೂ ಸದಾ ಜಾಗೃತ ಸ್ಥಿತಿಯಲ್ಲಿರುತ್ತವೆ. ಈಗ ಉಚಿತವಾಗಿ ಸಿಗುವ ವಸ್ತು ಮುಂದೊಂದು ದಿನ ಕ್ರಯ ಕೊಟ್ಟು ಪಡೆದುಕೊಳ್ಳುವ ಹಂತಕ್ಕೆ ಬರಬಹುದು. ಇದಕ್ಕೆಲ್ಲ ನಾವೇ ಹೊಣೆಯಾಗುತ್ತೇವೆ.

ಎಂದೋ ಮುಂದಾಗುವ ಸಮಸ್ಯೆಯನ್ನು ಈಗಲೇ ಪರಿಹರಿಸಬೇಕಾಗಿದೆ. ಮನೆ ಸಮೀಪ ಇಂತಹ ಗಿಡಗಳಿದ್ದರೆ ಅವುಗಳನ್ನು ಪೋಷಿಸಬೇಕು. ಈ ಗಿಡ ಹುಟ್ಟುವುದು ಬೀಜದಿಂದ. ಇವು ಬಹು ಸೂಕ್ಷ್ಮ. ಮರದಲ್ಲಿ ಬೆಳೆಯುವ ಕೋಡು ಒಣಗಿದ ಬಳಿಕ ಗಾಳಿಯಲ್ಲಿ ಹಾರಿಹೋಗುವ (ಅಜ್ಜನ ಗಡ್ಡದ ರೀತಿ) ಬೀಜ ಎಲ್ಲೋ ಬಿದ್ದು ಮಳೆ ಬಂದಾಗ ಅಲ್ಲಿ ಹುಟ್ಟುತ್ತವೆ. ಇದನ್ನು ಕಾಳಜಿಯಿಂದ ಬೆಳೆಸುವುದು ಕಷ್ಟ ಮತ್ತು ಅಪರೂಪ.

ನದಿ ಪಾತ್ರ-ಔಷಧೀಯ ಸಸ್ಯಗಳ ಅಗತ್ಯ
ವನಮಹೋತ್ಸವದಲ್ಲಿ ಬೇರೆ ಬೇರೆ ಗಿಡಗಳನ್ನು ನೆಡುವಾಗ ಹಾಲೆ ಗಿಡಕ್ಕೂ ಒಂದಂಶ ಗಮನ ಕೊಟ್ಟರೆ ಮುಂದಿನ ದಿನಗಳ ಬೇಡಿಕೆಯನ್ನು ಈಡೇರಿಸಲು ಸಾಧ್ಯವಾಗುತ್ತದೆ. ನದಿ ನೀರು ಮಾಲಿನ್ಯಗೊಳ್ಳುತ್ತವೆ ಎಂಬ ಕೂಗು ಕೇಳಿಬರುವಾಗ ನದಿ ಪಾತ್ರಗಳಲ್ಲಿ ಕಹಿಬೇವು, ಹಾಲೆ, ಅಶ್ವತ್ಥ, ಆಲದಂತಹ ವೃಕ್ಷಸಂಕುಲಗಳನ್ನು ಬೆಳೆಸಿದರೆ ಈ ಎಲೆ ನದಿ ನೀರಿನಲ್ಲಿ ಬಿದ್ದು ನೀರು ಸ್ವಲ್ಪ ಪ್ರಮಾಣದಲ್ಲಿಯಾದರೂ ಶುದ್ಧಿಗೊಳ್ಳುತ್ತದೆ. ಇದಕ್ಕೂ ಮುಖ್ಯವಾಗಿ ಮಣ್ಣಿನ ಸವಕಳಿಯನ್ನು ಗಣನೀಯ ಪ್ರಮಾಣದಲ್ಲಿ ತಡೆಯುತ್ತದೆ. ಹೊರಗಿನಿಂದ ಬರುವ ರಾಸಾಯನಿಕ ಮಾಲಿನ್ಯಗಳನ್ನು ಇಂತಹ ಮರಗಳ ಬೇರು ಹೀರಿ ಆ ಮೂಲಕವೂ ನೀರಿನ ಶುದ್ಧೀಕರಣ ನಡೆಯುತ್ತದೆ. ಬೇರುಗಳ ಮೂಲಕ ನೀರನ್ನು ಹೀರಿ ಅಂತರ್ಜಲ ಹೆಚ್ಚಲು ಕಾರಣವಾಗುತ್ತವೆ ಎನ್ನುವ ಅಂಶಗಳನ್ನು ಉದ್ಯಾವರ ಕುತ್ಪಾಡಿ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಜನಪದ ವೈದ್ಯಕೀಯ ಸಂಶೋಧನ ಕೇಂದ್ರದ ಮುಖ್ಯಸ್ಥ ಡಾ| ರವಿಕೃಷ್ಣ ಬೆಟ್ಟು ಮಾಡುತ್ತಾರೆ.

Advertisement

ಹಾಲೆ ಮರ ಬೆಳೆಸಬೇಕು
ಹಿಂದೆಲ್ಲ ಗ್ರಾಮದ ಗಡಿಗಳನ್ನು ಆಲ, ಅಶ್ವತ್ಥ, ಹಾಲೆ ಇತ್ಯಾದಿ ಮರಗಳ ಸಾಲುಗಳಿಂದ ಗುರುತಿಸಲಾಗುತ್ತಿತ್ತು. ಅಂದರೆ ಗಡಿಗಳಲ್ಲಿ ಇಂತಹ ಮರಗಳ ಸಾಲನ್ನು ಬೆಳೆಸುತ್ತಿದ್ದರು. ಈಗಲೂ ಇಂತಹ ಔಷಧೀಯ ಸಸ್ಯಗಳನ್ನು ಬೇರೆ ರೀತಿಯಲ್ಲಿ ಬೆಳೆಸುವ ಅಗತ್ಯವಿದೆ. ನದಿಗಳ ನೀರಿನ ಶುದ್ಧೀಕರಣ, ಮಣ್ಣಿನ ಸವಕಳಿ ತಡೆ, ಅಂತರ್ಜಲದ ವೃದ್ಧಿಗಾಗಿ ನದಿ ಪಾತ್ರಗಳಲ್ಲಿ ಔಷಧೀಯ ಸಸ್ಯಗಳ ವನಮಹೋತ್ಸವ ಆಚರಿಸುವ ಅಗತ್ಯವಿದೆ.
– ಡಾ|ರವಿಕೃಷ್ಣ, ಮುಖ್ಯಸ್ಥರು, ಜನಪದ ವೈದ್ಯಕೀಯ ಸಂಶೋಧನ ಕೇಂದ್ರ, ಕುತ್ಪಾಡಿ, ಉದ್ಯಾವರ, ಉಡುಪಿ

ಆರೋಗ್ಯಕ್ಕೆ ಉತ್ತಮ
ನಾನು ಇತರ ಸಸ್ಯಗಳಂತೆ ಹಾಲೆ ಮರದ ಗಿಡಗಳನ್ನೂ ಬೆಳೆಸುತ್ತೇನೆ. ಆದರೆ ಜನರು ಕೊಂಡೊಯ್ಯದಿದ್ದರೆ ಏನು ಪ್ರಯೋಜನ? ಇದು ದಾರಿ ಬದಿಯೂ ಹುಟ್ಟಿಕೊಳ್ಳುತ್ತದೆ. ಕರ್ಕಾಟಕ ಅಮಾವಾಸ್ಯೆ ದಿನ ಮಾತ್ರ ಜನರು ನೆನಪಿಸಿಕೊಂಡು ಮತ್ತೆ ಮರೆತುಬಿಡುತ್ತಾರೆ. ನನ್ನ ಪ್ರಕಾರ ಪ್ರತಿ ಅಮಾವಾಸ್ಯೆಗೆ ಸ್ವಲ್ಪ ಸ್ವಲ್ಪ ತೆಗೆದುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. ಕೊಕ್ಕರ್ಣೆ ಕೋಟಂಬೈಲಿನ ಎ.ಪಿ.ವಾಕುಡರಂತಹವರು ಇದನ್ನು ಪಡೆದು ಆರೋಗ್ಯ ಸಾಧಿಸಿಕೊಂಡಿದ್ದಾರೆ.
– ಮಂಜುನಾಥ ಗೋಳಿ ಕರ್ಜೆ, ಔಷಧೀಯ ಸಸ್ಯಗಳ ಬೆಳೆಗಾರರು

ಅಮಾವಾಸ್ಯೆ ದಿನ ಬೆಳಗ್ಗೆದ್ದು ಹಾಲೆ ಮರದ ತೊಗಟೆ ತರಲು ಹೋಗುವವರು ಸಾಮಾನ್ಯವಾಗಿ ಮರವನ್ನು ಮೊದಲೇ ಗುರುತಿಸಿಟ್ಟುಕೊಂಡಿರುತ್ತಾರೆ. ಅದನ್ನು ಮನೆಗೆ ತಂದು ಗುದ್ದಿ ರಸ ತೆಗೆದು ನೀರು ಬೆರೆಸಿ ಖಾಲಿ ಹೊಟ್ಟೆಗೆ ಕುಡಿಯುವುದು ವಾಡಿಕೆ. ಇದು ಬಹು ಹಿಂದಿನಿಂದಲೂ ನಡೆದು ಬರುತ್ತಿದೆ. ಇತ್ತೀಚಿಗೆ ಮಾಧ್ಯಮಗಳೂ ಬೆಳಕು ಚೆಲ್ಲುತ್ತಿರುವುದರಿಂದ ಹೆಚ್ಚಿನ ಆಸಕ್ತಿ ಬೆಳೆದಿದೆ. ಒಂದು ವಸ್ತು ಉತ್ತಮ ಎಂದು ಪ್ರಚಾರವಾದಾಗ ಇದರ ಇನ್ನೊಂದು ಅಡ್ಡ ಪರಿಣಾಮವೆಂದರೆ ಎಲ್ಲರೂ ಮುಗಿ ಬೀಳುವುದು, ಕೊನೆಗೆ ಕಚ್ಚಾ ಸಾಮಗ್ರಿಗಳ ಕೊರತೆ ಉಂಟಾಗುವುದು ಸಾಮಾನ್ಯ. ಬೇಡಿಕೆ ಜತೆ ಪೂರೈಕೆ ಕುರಿತು ಸಮಗ್ರ ಚಿಂತನೆ ನಡೆಸುವುದು ಬಹಳ ಕಡಿಮೆ ಎಂದೇ ಹೇಳಬೇಕು.

-ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next