Advertisement

ವಿಜಯಗೆ ಕಾಮನ್ವೆಲ್ತ್‌ ಅರ್ಹತೆ: ಕಾಡಿದೆ ಷರತ್ತು!

05:24 PM Mar 16, 2018 | Team Udayavani |

ಬೆಂಗಳೂರು: ಪ್ರತಿಷ್ಠಿತ ಕಾಮನ್‌ವೆಲ್ತ್‌ ಕೂಟಗಳಲ್ಲಿ ಪಾಲ್ಗೊಂಡು ದೇಶಕ್ಕಾಗಿ ಪದಕ ಗೆಲ್ಲುವುದು ಪ್ರತಿಯೊಬ್ಬ ಅಥ್ಲೀಟ್‌ ಜೀವನದ ಅದಮ್ಯ ಕನಸು. ಕಠಿಣ ಗುರಿ ಸಾಧನೆಗಾಗಿ ಅಥ್ಲೀಟ್‌ಗಳು ಟ್ರ್ಯಾಕ್‌ನಲ್ಲಿ ಪಡುವ ಕಷ್ಟಕ್ಕೆ ಅಕ್ಷರ  ರೂಪ ನೀಡಲು ಸಾಧ್ಯವಿಲ್ಲ. ಅವಮಾನ, ನಿಂದನೆ,
ಸೋಲು-ಗೆಲುವು ಅನುಭವಿಸಿಕೊಂಡೇ ಸಾಧನೆ ಮೆಟ್ಟಿಲೇರಿರುತ್ತಾರೆ. ಇನ್ನೇನು ಜೀವನಕ್ಕೆ ಬಹುದೊಡ್ಡ ತಿರುವು ಸಿಕ್ಕಿತು ಎನ್ನುವಷ್ಟರಲ್ಲಿ ಇಕ್ಕಟ್ಟಿನ ಸ್ಥಿತಿ ಸೃಷ್ಟಿಯಾಗುತ್ತದೆ.

Advertisement

ಇಂತಹುದೇ ಸಂದಿಗ್ಧ ಸ್ಥಿತಿಯಲ್ಲಿ ಸಿಲುಕಿಕೊಂಡು ರಾಜ್ಯದ ಖ್ಯಾತ ಅಥ್ಲೀಟ್‌ ವಿಜಯಕುಮಾರಿ ಒದ್ದಾಡುತ್ತಿದ್ದಾರೆ. ಕಾಮನ್‌ವೆಲ್ತ್‌ಗೆ ಅರ್ಹತೆ ಸಿಕ್ಕಿದರೂ ಕೂಟದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೋ, ಇಲ್ಲವೋ ಎಂಬ ಆತಂಕದಲ್ಲಿದ್ದಾರೆ.  ಮುಂಬರುವ ಕಾಮನ್‌ವೆಲ್ತ್‌ ಕೂಟದ 4/400 ಮೀ. ರಿಲೇ ತಂಡದಲ್ಲಿ ವಿಜಯ ಕುಮಾರಿ ಸ್ಥಾನ ಪಡೆದಿರುವುದು ಖಚಿತಗೊಂಡಿದೆ. ಆದರೆ ಈ ಸಂತೋಷದ ವಿಷಯವನ್ನು ಸಿಹಿ ಹಂಚಿ ಆಚರಿಸುವ ಸ್ಥಿತಿಯಲ್ಲಿ ವಿಜಯ ಇಲ್ಲ. ಭಾರತೀಯ ಅಥ್ಲೆಟಿಕ್ಸ್‌ ಒಕ್ಕೂಟ (ಎಎಫ್ಐ)ದ ಷರತ್ತೂಂದು ವಿಜಯಗೆ ಗೊಂದಲ ಮೂಡಿಸಿದೆ. ಈ ಕಾರಣದಿಂದ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್‌) ಹಾಸ್ಟೆಲ್‌ ನಲ್ಲಿರುವ ಅಥ್ಲೀಟ್‌ ಓಟಕ್ಕೆ ತಡೆ ಬೀಳುವ ಪರಿಸ್ಥಿತಿಯಿದೆ.

ಏನಿದು ಭಾರತೀಯ ಅಥ್ಲೆಟಿಕ್ಸ್ ಒಕ್ಕೂಟದ ಕರಾರು?
ವಿಜಯ ಕುಮಾರಿ ಇತ್ತೀಚೆಗೆ ನಡೆದಿದ್ದ ಫೆಡರೇಷನ್‌ ಕಪ್‌ ಅಥ್ಲೆಟಿಕ್ಸ್‌ನಲ್ಲಿ ಪಾಲ್ಗೊಂಡು. 53.03 ಸೆಕೆಂಡ್ಸ್‌ನಲ್ಲಿ 400 ಮೀ. ಓಡಿ ಬೆಳ್ಳಿ ಪದಕ ಪಡೆದಿದ್ದರು. ರಾಜ್ಯದವರೇ ಆದ ಮತ್ತೋರ್ವ ಅಥ್ಲೀಟ್‌ ಎಂ.ಆರ್‌.ಪೂವಮ್ಮ (53.38 ಸೆಕೆಂಡ್ಸ್‌) ವಿಜಯ ಎದುರು ಸೋತು ಕಂಚಿನ ಪದಕ ಪಡೆದಿದ್ದರು. ಇದಾದ ಬಳಿಕ ಮುಂಬರುವ ಕಾಮನ್‌ವೆಲ್ತ್‌ ಕೂಟದ 4/400 ಮೀ. ಭಾರತ ರಿಲೇ ತಂಡವನ್ನು ಪ್ರಕಟಗೊಳಿಸಲಾಯಿತು. ಈ ತಂಡದಲ್ಲಿ ಖ್ಯಾತ ಓಟಗಾರ್ತಿ ಪೂವಮ್ಮ ಜೊತೆ ವಿಜಯ ಕೂಡ ಇದ್ದಾರೆ. ಇದರ ಬೆನ್ನಲ್ಲೇ ಎಎಫ್ಐನಿಂದ ಷರತ್ತು ಕೂಡ ಪ್ರಕಟವಾಯಿತು. 

2020ರವರೆಗೆ ಭಾರತೀಯ ಅಥ್ಲೆಟಿಕ್ಸ್‌
ಒಕ್ಕೂಟ ಪಟಿಯಾಲದಲ್ಲಿ ಆಯೋಜಿಸುವ ತರಬೇತಿ ಶಿಬಿರದಲ್ಲಿ ಕಡ್ಡಾಯವಾಗಿ ಇರಬೇಕು. ಈ ಕರಾರು ಪತ್ರಕ್ಕೆ ಸಹಿ ಹಾಕಿದರೆ ಮಾತ್ರ ಕಾಮನ್‌ವೆಲ್ತ್‌ ಕೂಟದಲ್ಲಿ ಪಾಲ್ಗೊಳ್ಳಬಹುದು ಎಂದು ತಿಳಿಸಲಾಗಿದೆ. 

ನಿರಾಕರಿಸಿದ ವಿಜಯ ಕುಮಾರಿ
ಬೆಂಗಳೂರಿನ ಸಾಯ್‌ನಲ್ಲಿದ್ದುಕೊಂಡು ಉತ್ತಮ ತರಬೇತಿ ಪಡೆದು, ಇಲ್ಲಿನ ಕಾಲೇಜೊಂದರಲ್ಲಿ ಶಿಕ್ಷಣ ಪಡೆಯುತ್ತಿರುವ ವಿಜಯಗೆ ಅಥ್ಲೆಟಿಕ್ಸ್‌ ಒಕ್ಕೂಟದ ಷರತ್ತು ಗೊಂದಲ ಮೂಡಿಸಿದೆ. ಏ.4ರಿಂದ ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿರುವ ಕೂಟದವರೆಗೆ ಪಟಿಯಾಲ ತರಬೇತಿ ಶಿಬಿರದಲ್ಲಿರಲು ವಿಜಯ ತಕರಾರಿಲ್ಲ. ಆದರೆ ಕೂಟ ಮುಗಿದ ಮೇಲೂ 2020ರವರೆಗೂ ಅಲ್ಲಿರಬೇಕೆಂಬ ಷರತ್ತು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಈ ಷರತ್ತಿಗೆ ಒಪ್ಪಿಕೊಂಡರೆ ಬಿಕಾಂ ವಿದ್ಯಾಭ್ಯಾಸ ಮೊಟಕುಗೊಳ್ಳುತ್ತದೆ. ಇದಕ್ಕಿಂತ ಮುಖ್ಯವಾಗಿ ಪ್ರಸ್ತುತ ಎಎಫ್ಐ ತರಬೇತಿ ಶಿಬಿರದಲ್ಲಿರುವ ಪ್ರಮುಖ ಅಥ್ಲೀಟ್‌ಗಳನ್ನು ವಿಜಯ ಸ್ಪರ್ಧೆಗಳಲ್ಲಿ ಹಿಂದಿಕ್ಕಿದ್ದಾರೆ. 

Advertisement

ಬೆಂಗಳೂರಿನಲ್ಲಿದ್ದೇ ಈ ಗುಣಮಟ್ಟ ಕಾಪಾಡಿಕೊಂಡಿರುವಾಗ ಅಲ್ಲಿಗೆ ಬರಬೇಕೆಂಬ ಒತ್ತಾಯವೇಕೆ ಎನ್ನುವುದು ವಿಜಯ ಪ್ರಶ್ನೆ. ಅಲ್ಲದೇ ಪಟಿಯಾಲದಲ್ಲಿ ಆಕೆ ಬರೀ ರಿಲೇ ಬಗ್ಗೆ ಮಾತ್ರ ಗಮನ ಕೇಂದ್ರೀಕರಿಸಬೇಕಾಗುತ್ತದೆ. ಆದರೆ ಅವರು 400 ಮೀ. ಮತ್ತು 800 ಮೀ. ವಿಭಾಗದಲ್ಲೂ ಸಾಧನೆ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಇದಕ್ಕೆ ಅಲ್ಲಿ ಬೇಕಾದ ಸೌಲಭ್ಯವಿಲ್ಲ. ವಿಜಯ ಬೆಂಗಳೂರಿನಲ್ಲೇ ಇರಲು ಬಯಸುವುದಕ್ಕೆ ಇದೂ ಕಾರಣವಾಗಿದೆ.
*ಹೇಮಂತ್ ಸಂಪಾಜೆ

Advertisement

Udayavani is now on Telegram. Click here to join our channel and stay updated with the latest news.

Next