Advertisement

ಚಿನ್ನದ ಯುವತಿಗೆ ಅದ್ದೂರಿ ಸ್ವಾಗತ

09:43 AM Sep 07, 2018 | Team Udayavani |

ಮಂಗಳೂರು: ಏಶ್ಯನ್‌ ಗೇಮ್ಸ್‌ನ ರಿಲೇಯಲ್ಲಿ ದೇಶಕ್ಕೆ ಬಂಗಾರದ ಪದಕ ತಂದುಕೊಟ್ಟ ಕರಾವಳಿ ಮೂಲದ ಪೂವಮ್ಮ ಗುರುವಾರ ಮಂಗಳೂರಿಗೆ ಆಗಮಿಸಿದಾಗ ಭವ್ಯ ಸ್ವಾಗತ ನೀಡಲಾಯಿತು.

Advertisement

ಗುರುವಾರ ಮಧ್ಯಾಹ್ನ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ತಂದೆ, ತಾಯಿ, ಕುಟುಂಬ ವರ್ಗದವರು, ವಿದ್ಯಾರ್ಥಿಗಳು, ಸ್ಥಳೀಯ ಜನಪ್ರತಿನಿಧಿಗಳು, ಗಣ್ಯರು ಬರಮಾಡಿಕೊಂಡರು. ಪೂವಮ್ಮ ತನ್ನ ತಾಯಿ ಜಾಜಿ ಅವರಿಗೆ ಮುತ್ತಿಕ್ಕುವ ಮೂಲಕ ಪದಕ ಸಂಭ್ರಮವನ್ನು ಹಂಚಿಕೊಂಡರು. ತಂದೆ ರಾಜು, ಸಹೋದರ ಮಂಜು, ಸಹೋದರಿ ಲಿಖೀತಾ ಸಾಕ್ಷಿಯಾಗಿದ್ದರು. ಬಳಿಕ ನಗರದ ಉರ್ವಾಸ್ಟೋರ್‌ ಬಳಿಯಿರುವ ತಮ್ಮ ಮನೆಗೆ ಬಂದ ಪೂವಮ್ಮ ಅವರಿಗೆ ಸ್ನೇಹಿತರು, ನೆರೆಹೊರೆಯವರು, ಅಪಾರ ಸಂಖ್ಯೆಯ ಜನರು ಭವ್ಯ ಸ್ವಾಗತ ಕೋರಿದರು.

ಪೂವಮ್ಮ ಮನೆಗೆ ನಳಿನ್‌ 
ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಪೂವಮ್ಮ ಅವರ ಮನೆಗೆ ಭೇಟಿ ನೀಡಿ ಶುಭ ಹಾರೈಸಿದರು.
ಶಾಸಕ ಡಿ. ವೇದವ್ಯಾಸ ಕಾಮತ್‌ ಕೂಡ ಪೂವಮ್ಮ ಮನೆಗೆ ತೆರಳಿ ಅಭಿನಂದಿಸಿದರು. ಪೂವಮ್ಮ ಸಾಧನೆಯ ಹಿಂದೆ ಕಠಿನ ಶ್ರಮ ಅಡಗಿದೆ. ಅದನ್ನು ಪರಿಗಣಿಸಿ ಅವರಿಗೆ ರಾಜ್ಯ ಸರಕಾರವು ಕನಿಷ್ಠ 1 ಕೋಟಿ ರೂ. ನಗದು ಬಹುಮಾನ‌ ನೀಡಬೇಕು. ನಗರದಲ್ಲಿ ಸರಕಾರಿ ನಿವೇಶನ ನೀಡಿ ಪ್ರೋತ್ಸಾಹಿಸಬೇಕು ಎಂದರಲ್ಲದೆ, ಈ ಬಗ್ಗೆ ಸಿಎಂ ಅವರಲ್ಲಿ  ಮನವಿ ಮಾಡಲಾಗುವುದು ಎಂದರು.

ಮಾಜಿ ಸಚಿವ ಅಭಯಚಂದ್ರ ಜೈನ್‌, ಆಳ್ವಾಸ್‌ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಮೋಹನ ಆಳ್ವ, ಸಹ್ಯಾದ್ರಿ ಕಾಲೇಜು ಅಧ್ಯಕ್ಷ ಮಂಜುನಾಥ ಭಂಡಾರಿ, ಬಿಜೆಪಿಯ ರವಿಶಂಕರ್‌ ಮಿಜಾರ್‌, ನಿತಿನ್‌ ಕುಮಾರ್‌, ಸಂಜಯ ಪ್ರಭು, ಪ್ರಭಾ ಮಾಲಿನಿ, ರಮೇಶ್‌ ಕಂಡೆಟ್ಟು, ಭಾಸ್ಕರಚಂದ್ರ ಶೆಟ್ಟಿ, ವಸಂತ ಜೆ. ಪೂಜಾರಿ, ಪ್ರೇಮಾನಂದ ಶೆಟ್ಟಿ, ಪೂರ್ಣಿಮಾ, ರೂಪಾ ಡಿ. ಬಂಗೇರ ಸಹಿತ ಪ್ರಮುಖರು ವಿಮಾನನಿಲ್ದಾಣದಲ್ಲಿ ಹಾಜರಿದ್ದರು.

ಪ್ರಧಾನಿಗೂ ಕ್ರೀಡೆ ಬಗ್ಗೆ ಇದೆ ಆಸಕ್ತಿ
ಚಿನ್ನದ ಪದಕ ಗೆದ್ದಿರುವುದು ತುಂಬಾ ಖುಷಿ ತಂದಿದೆ. ಬುಧವಾರ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದೆ. ಎರಡನೇ ಬಾರಿ ಅವರ ಭೇಟಿಗೆ ಅವಕಾಶ ಸಿಕ್ಕಿತ್ತು. ಅವರಿಗೂ ಕ್ರೀಡಾ ಕ್ಷೇತ್ರದ ಬಗ್ಗೆ ಒಲವಿದೆ. ವರ್ಲ್ಡ್ ಏಶ್ಯನ್‌ ಸಹಿತ ಒಲಿಂಪಿಕ್ಸ್‌ ಕ್ರೀಡಾಕೂಟದ ಅಭ್ಯಾಸಕ್ಕೆ ಪ್ರೋತ್ಸಾಹ ನೀಡುವುದಾಗಿ ಹೇಳಿದ್ದಾರೆ. ಮನೆಗೆ ಬಾರದೆ ಸುಮಾರು 8 ತಿಂಗಳು ಆಗಿತ್ತು. ಇಲ್ಲಿನ ನನ್ನ ಫೇವರಿಟ್‌ ಆಹಾರ ಮಿಸ್‌ ಮಾಡಿಕೊಳ್ಳುತ್ತಿದ್ದೆ. ಈಗ ಚಿನ್ನ ಗೆದ್ದು ಮನೆಗೆ ಮರಳುತ್ತಿರುವುದಕ್ಕೆ ಬಹಳ ಹೆಮ್ಮೆ ಆಗುತ್ತಿದೆ. ಒಂದು ತಿಂಗಳು ವಿಶ್ರಾಂತಿ ಪಡೆದು ಬಳಿಕ ಮಂಗಳಾ ಕ್ರೀಡಾಂಗಣದಲ್ಲಿ ಕ್ರೀಡಾಭ್ಯಾಸ ಮುಂದುವರಿಸುತ್ತೇನೆ ಎಂದು ಪೂವಮ್ಮ ಅವರು “ಉದಯವಾಣಿ’ ಜತೆ ಸಂತಸ ಹಂಚಿಕೊಂಡರು.

Advertisement

ಪೂವಮ್ಮ ಅವರಿಗೆ ರಾಜ್ಯ ಸರಕಾರದ ವತಿಯಿಂದ ನಿವೇಶನ‌ ಸಿಗದ ವಿಚಾರ ತಿಳಿದಿದೆ. ಈ ಬಗ್ಗೆ ಸ್ಥಳೀಯ ಶಾಸಕರ ಬಳಿ ಮಾತನಾಡಿ, ರಾಜ್ಯ ಸರಕಾರದ ಗಮನಕ್ಕೆ ತರಲು ಪ್ರಯತ್ನಿಸುತ್ತೇನೆ.

 ನಳಿನ್‌ ಕುಮಾರ್‌ ಕಟೀಲು, ಸಂಸದ

Advertisement

Udayavani is now on Telegram. Click here to join our channel and stay updated with the latest news.

Next