ಉಡುಪಿ: ತಮ್ಮ ಪ್ರಥಮ ಪರ್ಯಾಯ (1952-53) ಅವಧಿಯಲ್ಲಿ ಧರ್ಮಸ್ಥಳ ಮೇಳದಿಂದ ಪ್ರದರ್ಶಿಸಲ್ಪಟ್ಟ ಭಸ್ಮಾಸುರ ಮೋಹಿನಿ ಪ್ರಸಂಗದಲ್ಲಿ ಕೋಳ್ಯೂರು ರಾಮಚಂದ್ರ ರಾವ್ ಅವರು ಮೋಹಿನಿ ಪಾತ್ರವನ್ನು ಮನೋಜ್ಞವಾಗಿ ನಿರ್ವಹಿಸಿದ್ದರು. ಅವರ ದಾಕ್ಷಾಯಿಣಿ, ಸೀತೆ, ಚಂದ್ರಮತಿ ಪಾತ್ರಗಳ ಅದ್ಭುತ ನಿರ್ವಹಣೆ ಪರಿಣಾಮಕಾರಿಯಾಗಿದ್ದಲ್ಲದೆ, ಸಂತೋಷ ಕೊಟ್ಟಿತ್ತು ಎಂದು ಪರ್ಯಾಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ನೆನಪಿಸಿಕೊಂಡರು.
ಉಡುಪಿಯ ತೆಂಕುತಿಟ್ಟು ವೇದಿಕೆ ಆಶ್ರಯದಲ್ಲಿ ರಾಜಾಂಗಣದಲ್ಲಿ ಶನಿವಾರ ನಡೆದ “ರಾತ್ರಿ ಆಟ’ದ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಶ್ರೀಪಾದರು ಹಿರಿಯ ಸ್ತ್ರೀಪಾತ್ರಧಾರಿ ಡಾ| ಕೋಳ್ಯೂರು ರಾಮಚಂದ್ರ ರಾವ್ ಅವರನ್ನು ಸಮ್ಮಾನಿಸಿ ಆಶೀರ್ವಚನ ನೀಡಿದರು.
ಪೇಜಾವರ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮಾತನಾಡಿ, ಯಕ್ಷರಂಗದಲ್ಲಿ ಕೋಳ್ಯೂರು ಅವರದ್ದು ಕರ್ಮ ಯೋಗಿಯ ಸಾಧನೆಗೆ ಸಮಾನ ಎಂದು ಹರ ಸಿದರು.ಭಾಸ್ಕರ ರೈ ಕುಕ್ಕುವಳ್ಳಿ ಅವರು ಅಭಿನಂದನ ಭಾಷಣದಲ್ಲಿ ಕೋಳ್ಯೂರುಅವರ ಪಾತ್ರ ವೈಖರಿಯ ವಿವಿಧ ಆಯಾಮಗಳನ್ನು ವೈಶಿಷ್ಟéಪೂರ್ಣವಾಗಿ ಅನಾವರಣಗೊಳಿಸಿದ್ದರು ಎಂದರು.
ಇದೇ ಸಂದರ್ಭ ಸುಧಾಕರ ಆಚಾರ್ಯ ಅವರ ಕಲಾರಾಧನೆಯ 28ನೇ ವರ್ಷದ ತಾಳಮದ್ದಳೆಯು ಈ ಬಾರಿ ಆ. 13ರಂದು ಜರಗಲಿದ್ದು, ಇದರ ಕರಪತ್ರವನ್ನು ಶ್ರೀಪಾದರು ಬಿಡುಗಡೆಗೊಳಿಸಿದರು.
ಕಟೀಲು ದೇಗುಲದ ಅರ್ಚಕ ವೆಂಕಟರಮಣ ಆಸ್ರಣ್ಣ, ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಪತ್ತನಾಜೆ ಚಿತ್ರದ ನಿರ್ದೇಶಕ ತೋನ್ಸೆ ವಿಜಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ನಿತೀಶ್ ಶೆಟ್ಟಿ ಎಕ್ಕಾರು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಕಿಶೋರ್ ಸಿ. ಉದ್ಯಾವರ ವಂದಿಸಿದರು.
“ಹೈದರಾಬಾದ್ ವಿಜಯ’ ತಾಳಮದ್ದಳೆ
ಪೇಜಾವರ ಶ್ರೀಗಳ ಐತಿಹಾಸಿಕ ಪಂಚಮ ಪರ್ಯಾಯ ಸಂದರ್ಭ ಕಳೆದ ವರ್ಷದ ಸ್ವಾತಂತ್ರೊéàತ್ಸವಕ್ಕೆ “ಸ್ವರಾಜ್ಯ ವಿಜಯ’ ತಾಳಮದ್ದಳೆ ಮೇಳೈಸಿ ಕಲಾಪ್ರೇಮಿಗಳ ಮನಸೂರೆಗೊಂಡಿತ್ತು. ಶ್ರೀಪಾದರ ಪರ್ಯಾಯಾವಧಿಯಲ್ಲಿ ಈಗಾಗಲೇ ಯಶಸ್ವೀ 4 ಕಾರ್ಯಕ್ರಮಗಳನ್ನು ನೀಡಿದ್ದು, ಇದೀಗ 5ನೇ ಕಾರ್ಯಕ್ರಮವಾಗಿ ಶ್ರೀಪಾದರ ಆಶಯದಂತೆ “ಹೈದರಾಬಾದ್ ವಿಜಯ’ ತಾಳಮದ್ದಳೆ ನಡೆಸುವ ಇರಾದೆ ಹೊಂದ ಲಾಗಿದ್ದು, ಈ ಬಗ್ಗೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ಸುಧಾಕರ ಆಚಾರ್ಯ ತಿಳಿಸಿದ್ದಾರೆ.