Advertisement
ಭಾನುವಾರವೂ ಸಿನಿಮಾ ಜಾತ್ರೆಯಲ್ಲಿ ನೂಕುನುಗ್ಗಲಾಗಿದೆ. ಕನ್ನಡ ಚಿತ್ರರಂಗದ ಬಹುತೇಕ ನಿರ್ದೇಶಕರು, ನಿರ್ಮಾಪಕರು, ನಟ,ನಟಿಯರು, ತಂತ್ರಜ್ಞರು ಸೇರಿದಂತೆ, ಸಿನಿಮಾ ವಿದ್ಯಾರ್ಥಿಗಳು, ಸಾಹಿತಿಗಳು, ಬುದ್ದಿಜೀವಿಗಳು ಚಿತ್ರೋತ್ಸವದಲ್ಲಿ ಮಿಂದೆದ್ದಿದ್ದಾರೆ. ಚಿತ್ರೋತ್ಸವದಲ್ಲಿ ಕಂಡಿದ್ದು, ಹೇಳಿದ್ದು, ನಡೆದಿದ್ದು ಕುರಿತು ಒಂದು ರೌಂಡಪ್…
Related Articles
Advertisement
ಬಹುತೇಕ ಖ್ಯಾತನಾಮ ನಿರ್ದೇಶಕರ ಚಿತ್ರಗಳೇ ಇಲ್ಲಿ ಪ್ರದರ್ಶನವಾಗುತ್ತಿರುವ ಹಿನ್ನೆಲೆಯಲ್ಲಿ ಮೂರು ಹೊತ್ತು ಸಿನಿಮಾ ಧ್ಯಾನ ಮಾಡುವ ಸಿನಿಪ್ರಿಯರು, ಯಾವುದೇ ಕಾರಣಕ್ಕೂ ಅಂತಹ ಚಿತ್ರಗಳನ್ನು ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶದಿಂದ, ಕೊರಳಲ್ಲಿ ಗುರುತಿನ ಪತ್ರ (ಐಡಿ ಕಾರ್ಡ್) ನೇತಾಕಿಕೊಂಡು, ಚಿತ್ರಪ್ರದರ್ಶನದ ವೇಳಾಪಟ್ಟಿಯನ್ನು ಕೈಯಲ್ಲಿಡಿದು ಓಡಾಡುತ್ತಿದ್ದದ್ದು ಸಾಮಾನ್ಯವಾಗಿತ್ತು.
ಸತ್ಯು ಜತೆ ಮಾತುಕತೆ…ಹಿರಿಯ ನಿರ್ದೇಶಕ ಎಂ.ಎಸ್.ಸತ್ಯು ಅವರೊಂದಿಗೆ ಅನೇಕ ಯುವ ನಿರ್ದೇಶಕರು, ಯುವ ಬರಹಗಾರರು, ಸಿನಿಮಾ ವಿದ್ಯಾರ್ಥಿಗಳು ಒಂದಷ್ಟು ಮಾತುಕತೆಯಲ್ಲಿ ತೊಡಗಿದ್ದರು. ಸಿನಿಮೋತ್ಸವದಲ್ಲಿ ಯಾವ ಚಿತ್ರಗಳು ಹೇಗಿವೆ, ಯಾವ ಚಿತ್ರಗಳನ್ನು ವೀಕ್ಷಿಸಬೇಕು ಎಂಬ ಬಗ್ಗೆ ಬಹುತೇಕ ಯುವಕರು ಅವರೊಂದಿಗೆ ಚರ್ಚೆ ನಡೆಸುವ ಮೂಲಕ ಒಂದಷ್ಟು ಹೊಸ ವಿಷಯಗಳನ್ನು ಕಲೆಹಾಕುತ್ತಿದ್ದದ್ದು ಕೂಡ ಕಂಡುಬಂತು. “ಪ್ರಾದೇಶಿಕ ಭಾಷೆ ಚಿತ್ರಗಳಿಗಿಂತಲೂ, ವಿದೇಶಿಯ ಹಲವು ಚಿತ್ರಗಳನ್ನು ವೀಕ್ಷಿಸುವುದನ್ನು ಯಾವುದೇ ಕಾರಣಕ್ಕೆ ತಪ್ಪಿಸಿಕೊಳ್ಳಬೇಡಿ’ ಎಂಬ ಸತ್ಯು ಅವರ ಸಲಹೆಯೊಂದಿಗೆ ಅನೇಕರು, ಜಗತ್ತಿನ ಸಿನಿಮಾಗಳ ಆಯ್ಕೆ ಮಾಡಕೊಂಡು ಸ್ಕ್ರೀನ್, 3, ಸ್ಕ್ರೀನ್ 5 ಹಾಗೂ ಸ್ಕ್ರೀನ್ 7ರತ್ತ ಧಾವಿಸುತ್ತಿದ್ದರು. ಇವುಗಳ ನಡುವೆಯೇ ಎಂ.ಎಸ್. ಸತ್ಯು ಅವರು, ಭಾರತದ ಪ್ರಾದೇಶಿಕ ಭಾಷೆ ಸಿನಿಮಾಗಳನ್ನು ನೋಡಬೇಕು ಬೆಳೆಸಬೇಕು. ಆದರೆ, ಇದು ಅಂತಾರಾಷ್ಟ್ರೀಯ ಸಿನಿಮೋತ್ಸವ ಆಗಿರುವುದರಿಂದ ಮೊದಲು, ಜಗತ್ತಿನ ಸಿನಿಮಾಗಳನ್ನು ನೋಡಬೇಕು. ಈ ಸಲದ ಚಿತ್ರೋತ್ಸವದಲ್ಲಿ ಜಗತ್ತಿನ ಅದ್ಭುತ ಚಿತ್ರಗಳು ಬಂದಿವೆ. ನಿರ್ದೇಶನದ ಕನಸು ಕಟ್ಟಿಕೊಂಡವರು, ಸಿನಿಮಾ ಪ್ರೀತಿ ಇಟ್ಟುಕೊಂಡವರು, ಸಿನಿಮಾ ಬಗ್ಗೆ ಪ್ಯಾಶನ್ ಇರುವಂತಹವರು ಅಂತಹ ಚಿತ್ರಗಳನ್ನು ನೋಡಲೇಬೇಕು ಎಂದು ಹುರಿದುಂಬಿಸಿದ್ದು ವಿಶೇಷವಾಗಿತ್ತು. ಸೆಲ್ಫಿ ಜತೆ ಸಂಭ್ರಮ
ಸಿನಿಮೋತ್ಸವದಲ್ಲಿ ಹೆಚ್ಚು ಕಾಣಸಿಗುತ್ತಿರುವುದು ಯುವಕರು ಎಂಬುದು ವಿಶೇಷ. ಹೌದು, ಈ ಬಾರಿಯ ಚಿತ್ರೋತ್ಸವದಲ್ಲಿ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಕೊಳ್ಳುತ್ತಿದ್ದಾರೆ. ಯಾವ ಪಿವಿಆರ್‌ನಲ್ಲಿರುವ ಯಾವುದೇ ಸ್ಕ್ರೀನ್‌ನಲ್ಲಿ ಹೋದರೂ, ಅಲ್ಲಿ ಯುವಕರ ದಂಡೇ ಉದ್ದನೆಯ ಸಾಲಿನಲ್ಲಿ ಕುಳಿತಿರುವುದು ಸಾಮಾನ್ಯವಾಗಿತ್ತು. ಅದರಲ್ಲೂ ಭಾನುವಾರ ಇದ್ದುದರಿಂದ ಯುವಕರೇ ಹೆಚ್ಚಾಗಿ ಆಗಮಿಸಿ ತಮ್ಮ ನೆಚ್ಚಿನ ಆಯ್ಕೆಯ ಚಿತ್ರಗಳನ್ನು ವೀಕ್ಷಿಸುವ ಮೂಲಕ ಖುಷಿಪಡುತ್ತಿದ್ದದ್ದು ಕಂಡುಬಂತು. ಬಹುತೇಕರಿಗೆ ಎಲ್ಲಾ ಸಿನಿಮಾಗಳನ್ನು ನೋಡುವ ಆಸೆ ಇತ್ತು. ಆದರೆ, ನೋಡಲೇಬೇಕೆನ್ನುವ ಸಿನಿಮಾಗಳ ವೇಳಾಪಟ್ಟಿ ಬೇರೆ ಬೇರೆ ಸ್ಕ್ರೀನ್‌ನಲ್ಲಿ ಒಂದೇ ಸಮಯದಲ್ಲಿ ಇದ್ದುದರಿಂದ, ಕೆಲವು ಅಪರೂಪದ ಸಿನಿಮಾಗಳನ್ನು ನೋಡಲು ಸಾಧ್ಯವಾಗುತ್ತಿಲ್ಲ ಎಂಬ ಸಣ್ಣ ಬೇಸರವನ್ನು ನೋಡುಗರು ಹೊರಹಾಕಿದ್ದು ಕಂಡುಬಂತು. ವಿಶೇಷವೆಂದರೆ, ಸಿನಿಮಾ ಪ್ರೀತಿ ಇಟ್ಟುಕೊಂಡು ಸಿನಿಮೋತ್ಸವಕ್ಕೆ ಬಂದ ಅನೇಕ ಯುವಕರು, ತಮ್ಮ ಪ್ರೀತಿಯ ನಿರ್ದೇಶಕರು ಹಾಗೂ ಕೆಲ ನಟ, ನಟಿಯರನ್ನು ಭೇಟಿ ಮಾಡಿ ಒಂದಷ್ಟು ಮಾತುಕತೆಯಲ್ಲಿ ತೊಡಗಿದ್ದು ಸಹಜವಾಗಿತ್ತು. ಜಗತ್ತಿನ ಅಪರೂಪದ ಸಿನಿಮಾಗಳನ್ನು ನೋಡಿ ಖುಷಿಪಡುವ ತವಕದಲ್ಲಿದ್ದ ಅನೇಕರು ಕೆಲ ಪ್ರಶಸ್ತಿ ವಿಜೇತ ನಿರ್ದೇಶಕರೊಂದಿಗೆ ಸೆಲ್ಪಿà ತೆಗೆದುಕೊಳ್ಳುವ ಮೂಲಕ ಸಂಭ್ರಮಿಸಿದರು. ಹೊಟ್ಟೆಯದ್ದೇ ಸಮಸ್ಯೆ…
ಒರಾಯನ್ ಮಾಲ್‌ನಲ್ಲಿ ಸಿನಿಮೋತ್ಸವ ನಡೆಯುತ್ತಿರುವ ಖುಷಿ ಒಂದೆಡೆಯಾದರೆ, ಅಲ್ಲಿನ ಊಟದ ಸಮಸ್ಯೆ ಇನ್ನೊಂದೆಡೆ. ಅಲ್ಲಿ ಬರುವ ಪ್ರತಿಯೊಬ್ಬರ ದೂರು ಮತ್ತು ಅಸಮಾಧಾನ ಎಂದರೆ, ಅಲ್ಲಿ ಸಿಗುವ ಊಟದ್ದು. ಹೌದು, ಅಲ್ಲಿಗೆ ಎಲ್ಲಾ ತರಹದ ಮಂದಿಯೂ ಬರುತ್ತಾರೆ. ಬಂದವರಿಗೆ ಸಿನಿಮಾ ಎಂಬ ಊಟವೇನೋ ಸಿಗುತ್ತೆ. ಆದರೆ, ಹಸಿದ ಹೊಟ್ಟೆಗೆ ಊಟ ಬೇಕಲ್ಲವೇ? ಆ ಮಾಲ್‌ನಲ್ಲಿ ಎಲ್ಲವೂ ದುಬಾರಿ. ಕುಡಿಯುವ ನೀರಿನ ಬೆಲೆಯೇ ಅಲ್ಲಿ 50 ರೂ.! ಹೀಗಾದರೆ, ಊಟದ ಬೆಲೆ? ಚಿತ್ರೋತ್ಸವಕ್ಕೆ ಬಂದ ಬಹುತೇಕರು, ಇಲ್ಲಿ ದುಬಾರಿ ಹಣ ಕೊಟ್ಟು ಊಟ ಮಾಡುವುದೇ ಒಂದು ದೊಡ್ಡ ಸಮಸ್ಯೆ. ಚಿತ್ರೋತ್ಸವಕ್ಕೆ ಶ್ರೀಮಂತರೇ ಬರುವುದಿಲ್ಲ. ಸಿನಿಮಾ ವಿದ್ಯಾರ್ಥಿಗಳ ಕಾರುಬಾರು ಜಾಸ್ತಿ. ಹಾಗಾಗಿ, ಸಿನಿಮಾ ನೋಡುವ ಉತ್ಸಾಹದಿಂದ ಬರುವ ಅವರಿಗೆ ಇಲ್ಲಿ ಊಟದ್ದೇ ಸಮಸ್ಯೆ ಅಂತೆ. ಹಾಗಂತ ಹೇಳಿದವರ ಸಿನಿಮಾ ವಿದ್ಯಾರ್ಥಿಗಳ ಸಂಖ್ಯೆಯೇ ಜಾಸ್ತಿ ಇತ್ತು. ಪ್ರತಿ ವರ್ಷ ಮಾಲ್‌ಗಳಲ್ಲಿ ಸಿನಿಮೋತ್ಸವ ನಡೆಸುವುದು ಖುಷಿಯ ವಿಷಯವೇ, ಆದರೆ, ಅಲ್ಲಿ ಸಿನಿಮಾ ನೋಡಲು ಬರುವ ಜನರಿಗೆ ಕಡಿಮೆ ದರದಲ್ಲಿ ಊಟ, ತಿಂಡಿ, ತಿನಿಸಿನ ವ್ಯವಸ್ಥೆ ಇದ್ದರೂ ಚೆನ್ನಾಗಿರುತ್ತದೆ ಎಂಬ ಮಾತುಗಳು ಹಲವರಿಂದ ಕೇಳಿಬಂದವು.