Advertisement

ಕೊನೆಗೂ ಖಾಸಗಿ ಸಹಭಾಗಿತ್ವದಲ್ಲಿ ಟ್ರಕ್‌ ಟರ್ಮಿನಲ್‌ ನಿರ್ಮಾಣ

03:38 PM May 31, 2017 | Team Udayavani |

ಸುರತ್ಕಲ್‌: ದೇವರಾಜು ಅರಸು ಟ್ರಕ್‌ ಟರ್ಮಿನಲ್ಸ್‌ ನಿಗಮವು ಖಾಸಗಿ ಸಹಭಾಗಿತ್ವದಲ್ಲಿ ಮಂಗಳೂರಿನಲ್ಲಿ ಟ್ರಕ್‌ ಟರ್ಮಿನಲ್‌ ನಿರ್ಮಿಸಲು ಪ್ರಕ್ರಿಯೆ ಆರಂಭಿಸಿದೆ.

Advertisement

ಈಗಾಗಲೇ ನಿಗಮದ ಅಧಿಕಾರಿಗಳು ನಗರಕ್ಕೆ ಆಗಮಿಸಿ ಜಿಲ್ಲಾಧಿಕಾರಿ ಜಗದೀಶ್‌ ಅವರೊಂದಿಗೆ ಈ ಕುರಿತು ಚರ್ಚಿಸಿದ್ದಾರೆ. 

ಬೈಕಂಪಾಡಿ ಎಪಿಎಂಸಿ ಮುಂಭಾಗ 30 ಎಕರೆ ಖಾಸಗಿ ಭೂಮಿಯಿದ್ದು, ಅದರ ಮಾಲಕರೊಂದಿಗೆ ಜಂಟಿಯಾಗಿ ಟ್ರಕ್‌ ಟರ್ಮಿನಲ್‌ ನಿರ್ಮಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. ನಿಗಮವು ಸಮಗ್ರ  ಯೋಜನಾ ವರದಿ (ಡಿಪಿಆರ್‌) ರೂಪಿಸಿ ಸಾಧಕ ಬಾಧಕಗಳನ್ನು ಪಟ್ಟಿ ಮಾಡಲಿದೆ. ಅದಾದ ಬಳಿಕ ಟ್ರಕ್‌ ಟರ್ಮಿನಲ್‌ ನಿರ್ಮಾಣ ಪ್ರಕ್ರಿಯೆ ಆರಂಭವಾಗಲಿದೆ. ಇದಲ್ಲದೆ ವಿಶೇಷ ಆರ್ಥಿಕ ವಲಯದಲ್ಲಿ ಸುಸಜ್ಜಿತ ಗೋದಾಮು ಗಳು, ಸರಕು ಸಂಗ್ರಹಣೆಗೆ ಬೇಕಾದ ವ್ಯವಸ್ಥೆಗಳನ್ನು ಕಲ್ಪಿಸುವ ಪ್ರಕ್ರಿಯೆಯೂ ಚಾಲ್ತಿಯಲ್ಲಿದೆ.

ಮಂಗಳೂರು ನಗರ ಕೈಗಾರಿಕ, ವಾಣಿಜ್ಯ ತಾಣವಾಗಿ ಬೆಳೆಯುತ್ತಿದೆ. ಈ ಹೊತ್ತಿನಲ್ಲಿ ಟ್ರಕ್‌ ಟರ್ಮಿನಲ್‌ ಅಗತ್ಯವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಮೊದಲ ಬಜೆಟಿನಲ್ಲಿಯೇ ಇಲ್ಲಿ ಟ್ರಕ್‌ ಟರ್ಮಿನಲ್‌ ನಿರ್ಮಿಸುವುದಾಗಿ ಘೋಷಿಸಿದ್ದರು.

ಅದಕ್ಕಾಗಿ ನೂರು ಎಕರೆ ಸೂಕ್ತ ಜಾಗವನ್ನು ಗುರುತಿಸಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದರು. ಆದರೆ ಇದುವರೆಗೆ ಜಿಲ್ಲಾಡಳಿತ ಅನೇಕ ಸಭೆಗಳನ್ನು ನಡೆಸಿದ್ದರೂ, ನಿರ್ಧಾರ ಅಂತಿಮಗೊಂಡಿರಲಿಲ್ಲ. 

Advertisement

ಬೈಕಂಪಾಡಿಯ ಎಪಿಎಂಸಿ ಯಾರ್ಡ್‌ ನಲ್ಲಿಯೂ ಟ್ರಕ್‌ ಟರ್ಮಿನಲ್‌ ನಿರ್ಮಿಸಿದರೆ ಹೇಗೆ ಎನ್ನುವ ವಿಚಾರವೂ ಚರ್ಚೆಗೆ ಬಂದಿತ್ತು. ಆದರೆ ಆ ಜಾಗವನ್ನು ಉಪಯೋಗಿಸುವುದರ ವಿರುದ್ಧ ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ ನ್ಯಾಯಾಲಯಕ್ಕೆ ಹೋಗುವುದಾಗಿ ಎಚ್ಚರಿಸಿದ್ದರು.

ಈಗ ಬೆಂಗಳೂರು-ಮಂಗಳೂರು ಮಧ್ಯೆ ನೇರ ಸುರಂಗ ಮಾರ್ಗ ನಿರ್ಮಿಸುವ ಪ್ರಸ್ತಾಪ ಕೇಂದ್ರ ಸರಕಾರದಲ್ಲಿದ್ದು, ಅದು ಜಾರಿಗೆ ಬಂದರೆ ಮಂಗಳೂರಿಗೆ ಬರುವ ಟ್ರಕ್‌ಗಳ ಸಂಖ್ಯೆ ಇನ್ನೂ ಹೆಚ್ಚಲಿದೆ. ಈಗಾಗಲೇ ಸರಾಸರಿ ಐದು ಸಾವಿರಕ್ಕೂ ಮಿಕ್ಕಿ ಟ್ರಕ್‌ಗಳು ಇಲ್ಲಿನ ಬಂದರಿಗೆ ಹೋಗಿ ಬರುತ್ತಿವೆ.  

ಈಗ ಈ ಟ್ರಕ್‌ಗಳಿಗೆ ವಿಶ್ರಾಂತಿಗೆ ಸೂಕ್ತ ಜಾಗವಿಲ್ಲದ ಪರಿಣಾಮ ಬೆ„ಕಂಪಾಡಿ, ಕುಳಾಯಿಯಿಂದ ಕೂಳೂರು ತನಕ ಟ್ರಕ್‌ಗಳ ಸಾಲಾಗಿ ನಿಲ್ಲಿಸಲಾಗುತ್ತಿದೆ. ಬೈಕಂಪಾಡಿಯ ಬಳಿ ಯಾವಾಗಲೂ ಟ್ರಕ್‌ಗಳನ್ನು ಅಡ್ಡಾದಿಡ್ಡಿ ನಿಲ್ಲಿಸುವುದರಿಂದ ಟ್ರಾಫಿಕ್‌ ಜಾಮ್‌ ಆದದ್ದಿದೆ. ಎಪಿಎಂಸಿ ಹೊರಗೆ ಟ್ರಕ್‌ಗಳು ದಿನವಿಡೀ ನಿಂತು ಸಮಸ್ಯೆಯಾಗಿದೆ. 

ಒಂದೆಡೆ ರೋ ರೋ -ಇನ್ನೊಂದೆಡೆ ಬಂದರು !
ಒಂದೆಡೆ ಬಂದರಿಗೆ ನೂರಾರು ಲಾರಿಗಳು,ಇನ್ನೊಂದೆಡೆ ವಿಶೇಷ ಆರ್ಥಿಕ ವಲಯಕ್ಕೆ  ಸರಕು ಸಾಗಿಸಲು ನಿತ್ಯ 250 ಕ್ಕೂ ಮಿಕ್ಕಿ ಲಾರಿಗಳು, ಇನ್ನು ಕೊಂಕಣ ರೈಲ್ವೆಯ ರೋರೋ ಸೇವೆಯಡಿ ಬರುವ ಲಾರಿಗಳು-ಇಷ್ಟೆಲ್ಲ ಲಾರಿಗಳಿಗೆ ನಿಲ್ಲಲು ಸ್ಥಳವೇ ಇಲ್ಲದಂತಾಗಿದೆ. 

ಟ್ರಕ್‌ ಟರ್ಮಿನಲ್‌ನಿಂದ ಅನುಕೂಲ
ಮಂಗಳೂರು ಬಂದರು ಪ್ರದೇಶವಾಗಿರುವುದರಿಂದ ನಿತ್ಯವೂ ರಾಜ್ಯ ಮತ್ತು ಹೊರ ರಾಜ್ಯದ ಸಾವಿರಾರು ಲಾರಿಗಳು ಬರುತ್ತವೆ. ಸರಕು ಸಮೇತ ಹೋಗುವುದರಿಂದ ಲೋಡು ಮಾಡಲು ದಿನಗಟ್ಟಲೆ ಕಾಯಬೇಕಾದುದು ಸಾಮಾನ್ಯ. ರೋರೋ ಲಾರಿಗಳ ನಿಲುಗಡೆಗೂ ಸರಿಯಾದ ಸ್ಥಳವಿಲ್ಲ. ಹೀಗಾಗಿ ಟ್ರಕ್‌ಗಳನ್ನು ರಸ್ತೆ ಬದಿ ನಿಲ್ಲಿಸಿದರೆ ಟ್ರಾಫಿಕ್‌ ಪೊಲೀಸರು ದಂಡ ವಿಧಿಸುತ್ತಾರೆ. ಟ್ರಕ್‌ ಟರ್ಮಿನಲ್‌ ನಿರ್ಮಾಣವಾದರೆ ಎಲ್ಲರಿಗೂ ಅನುಕೂಲ.
– ವಸಂತ್‌ ಹೊಸಬೆಟ್ಟು,  ಗೌರವ ಸಲಹೆಗಾರರು , ಕರ್ನಾಟಕ ಕರಾವಳಿ ಲಾರಿ ಮಾಲಕರ  ಸಂಘ ಮಂಗಳೂರು

ಬೈಕಂಪಾಡಿಯಲ್ಲಿ ನಿರ್ಮಾಣ ಪ್ರಯತ್ನ
ದೇವರಾಜ ಅರಸು ಟರ್ಮಿನಲ್ಸ್‌ ವತಿಯಿಂದ ಖಾಸಗಿ ಸಹಭಾಗಿತ್ವದಲ್ಲಿ ಟ್ರಕ್‌ ಟರ್ಮಿನಲ್‌ ನಿರ್ಮಾಣ ಕುರಿತು ಪ್ರಯತ್ನ ಸಾಗಿದೆ. ಬೈಕಂಪಾಡಿ ಬಳಿ 30 ಎಕರೆ ಖಾಸಗಿ ಜಾಗವಿದ್ದು  ಅದರ ಮಾಲಕರು ಆಸಕ್ತಿ ತೋರಿದ್ದಾರೆ. ಈ ಬಗ್ಗೆ ಡಿಪಿಆರ್‌ ತಯಾರಿಸಿ ಅಂತಿಮ ನಿರ್ಧಾರವನ್ನು  ನಿಗಮ ಕೈಗೊಳ್ಳಲಿದೆ. ಈ ಕುರಿತು ಮೂರು ಬಾರಿ ಅಧಿಕಾರಿಗಳು ಆಗಮಿಸಿ ಚರ್ಚಿಸಿದ್ದಾರೆ. 
– ಡಾ| ಜಗದೀಶ್‌, 
ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next