Advertisement
ಸಂಪೂರ್ಣ ನವೀಕರಿಸಲ್ಪಟ್ಟ ಬೆಂಗಳೂರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಚುಟುಕು ಕ್ರಿಕೆಟ್ ಹಣಾಹಣಿ ತೀವ್ರತೆಯನ್ನು ಪಡೆದು ಕೊಳ್ಳಲಿದೆ. ಇದು ಸರಣಿ ನಿರ್ಣಾಯಕ ಪಂದ್ಯ ವಾದ್ದರಿಂದ ಕೊನೆಯ ಎಸೆತದ ತನಕ ರೋಮಾಂ ಚನ ಗರಿಗೆದರುವ ಎಲ್ಲ ಸಾಧ್ಯತೆ ಇದೆ.
Related Articles
Advertisement
ಏಕದಿನ ಸರಣಿಯಲ್ಲಿ ರನ್ ಪ್ರವಾಹವನ್ನೇ ಕಂಡ ಬಳಿಕ ಚುಟುಕು ಕ್ರಿಕೆಟ್ ಕೂಡ ಇದರ ಮುಂದುವರಿದ ಭಾಗವಾಗಿರಲಿದೆ ಎಂಬುದೇ ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಇಲ್ಲಿ 140ರ ಆಸುಪಾಸಿನಲ್ಲೇ ಸ್ಕೋರ್ ಗಿರಕಿ ಹೊಡೆಯುತ್ತಿದೆ.
ಎರಡರಲ್ಲೂ ಭಾರತಕ್ಕೇ ಮೊದಲು ಬ್ಯಾಟ್ ಮಾಡುವ ಅವಕಾಶ ಸಿಕ್ಕಿತ್ತು. ಕಾನ್ಪುರದಲ್ಲಿ ಇಂಗ್ಲೆಂಡ್ ಸುಲಭದಲ್ಲಿ ಚೇಸ್ ಮಾಡಿದರೆ, ನಾಗ್ಪುರದಲ್ಲಿ ಗೆಲುವಿನ ಹಂತದ ತನಕ ಬಂದು ಅಂತಿಮ ಓವರಿನಲ್ಲಿ ಎಡವಿತು. 18ನೇ ಹಾಗೂ 20ನೇ ಓವರಿನಲ್ಲಿ ಒಟ್ಟು ಐದೇ ರನ್ ಕೊಟ್ಟ ಬುಮ್ರಾ ಟೀಮ್ ಇಂಡಿಯಾ ಪಾಲಿನ “ಬಿಗ್ ಬಾಸ್’ ಎನಿಸಿದರು. ಅಷ್ಟೇ ಅಲ್ಲ, ಚುಟುಕು ಕ್ರಿಕೆಟ್ ಯಾವುದೇ ಹಂತದಲ್ಲಿ ಯಾವುದೇ ತಂಡವನ್ನು ಕುಟುಕೀತು ಎಂಬುದಕ್ಕೆ ಸ್ಪಷ್ಟ ನಿದರ್ಶನ ಒದಗಿಸಿತು.
ಬೆಂಗಳೂರಿನಲ್ಲಿ ಬಿಗ್ ಸ್ಕೋರ್?ಬೆಂಗಳೂರಿನಲ್ಲಾದರೂ ಬಿಗ್ ಸ್ಕೋರ್ ದಾಖಲಾದೀತೇ ಎಂಬುದು ಕ್ರಿಕೆಟ್ ಪ್ರೇಮಿಗಳ ಕುತೂಹಲ. ಇಲ್ಲಿ ಈವರೆಗೆ ನಡೆದದ್ದು 4 ಟಿ-20 ಅಂತಾರಾಷ್ಟ್ರೀಯ ಪಂದ್ಯ ಮಾತ್ರ. ಎರಡರಲ್ಲಿ ಭಾರತ ಕಾಣಿಸಿಕೊಂಡಿತ್ತು. ಪಾಕಿಸ್ಥಾನ ವಿರುದ್ಧ ಆಡಿದ 2012ರ ಪಂದ್ಯದಲ್ಲಿ 5 ವಿಕೆಟ್ ಸೋಲನುಭವಿಸಿದರೆ, ಕಳೆದ ವರ್ಷ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶವನ್ನು ಒಂದೇ ಒಂದು ರನ್ನಿನಿಂದ ಸೋಲಿಸಿತ್ತು. ಇದೇ ಪಂದ್ಯಾವಳಿಯ ಬಾಂಗ್ಲಾ ಎದುರಿನ ಮುಖಾಮುಖೀಯಲ್ಲಿ ಆಸ್ಟ್ರೇಲಿಯ 7ಕ್ಕೆ 157 ರನ್ ಗಳಿಸಿದ್ದು ಈ ಅಂಗಳದ ದೊಡ್ಡ ಮೊತ್ತ. ಈ ಬಾರಿ ಧಾರಾಳ ರನ್ ಹರಿವು ಕಂಡುಬರಲಿದೆ ಎಂಬುದು ಕ್ಯುರೇಟರ್ ಹೇಳಿಕೆ. ಸ್ಕೋರ್ ಎಷ್ಟೇ ಆಗಿರಲಿ, ಪಂದ್ಯ ಮಾತ್ರ “ಟೈಟ್ ಫಿನಿಶ್’ ಕಾಣುವ ಬಗ್ಗೆ ಅನುಮಾನವಿಲ್ಲ. ಸರಣಿ ಗೆಲುವಿಗೆ ಬೇಕು ಲಕ್!
ಇಂಗ್ಲೆಂಡ್ ಇನ್‌ಸ್ಟಂಟ್ ಕ್ರಿಕೆಟಿನ ಸಶಕ್ತ ಹಾಗೂ ವೈವಿಧ್ಯಮಯ ತಂಡ. 1-11ರ ತನಕ ಎಲ್ಲರೂ ಅಪಾಯಕಾರಿ ಆಟಗಾರರೇ. ನಾಯಕ ಮಾರ್ಗನ್ ಅವರಂತೂ ಪ್ರಚಂಡ ಫಾರ್ಮ್ನಲ್ಲಿದ್ದಾರೆ. ಬೌಲಿಂಗ್ ಕೂಡ ಹರಿತವಾಗಿಯೇ ಇದೆ. ಆದರೆ… ಟಿ-20 ಸರಣಿ ಗೆಲ್ಲಲು ಮುಖ್ಯವಾಗಿ ಬೇಕಿರುವುದು ಅದೃಷ್ಟ. ಇದು ಇಂಗ್ಲೆಂಡಿಗಿದೆಯೇ? ಅದು ಸರಣಿ ಗೆಲುವಿನೊಂದಿಗೆ ಭಾರತ ಪ್ರವಾಸವನ್ನು ಮುಗಿಸುವುದೇ ಅಥವಾ ಹ್ಯಾಟ್ರಿಕ್ ಸರಣಿ ಸೋಲಿಗೆ ತುತ್ತಾಗುವುದೇ? ಒಟ್ಟಾರೆ ಬೆಂಗಳೂರು ಕ್ರಿಕೆಟ್ ಕೌತುಕದ ಹೆಬ್ಟಾಗಿಲಾಗಿ ಗೋಚರಿಸುತ್ತಿದೆ! ಕೊಹ್ಲಿಗೆ ಎರಡನೇ ತವರು
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಬೆಂಗಳೂರು ಎರಡನೇ ತವರು. ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ನಾಯಕನಾಗಿರುವ ಕೊಹ್ಲಿಗೆ ಚಿನ್ನಸ್ವಾಮಿ ಅಂಗಳ ಸಾಕಷ್ಟು ಗೆಲುವಿನ ಸವಿಯನ್ನು ಉಣಿಸಿದೆ. ಬುಧವಾರವೂ ಇಂಥದೇ ಅನುಭವವಾಗಲಿ ಎಂಬುದು ಅಭಿಮಾನಿಗಳ ಹಾರೈಕೆ. ಹಾಗೆಯೇ ರಾಜ್ಯದ ಇಬ್ಬರು ಆಟಗಾರರಾದ ಕೆ.ಎಲ್. ರಾಹುಲ್ ಮತ್ತು ಮನೀಷ್ ಪಾಂಡೆ ಈ ಪಂದ್ಯದಲ್ಲಿ ಆಡುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ಇವರಿಬ್ಬರೂ ವಿಫಲ ರಾಗಿದ್ದರು. ಆದರೆ ನಾಗ್ಪುರದಲ್ಲಿ ಆಡಿದ್ದೇ ರಾಹುಲ್ ಮತ್ತು ಪಾಂಡೆ ಎಂಬುದನ್ನು ಮರೆಯುವಂತಿಲ್ಲ. ಉಳಿದಂತೆ ರೈನಾ, ಯುವರಾಜ್, ಧೋನಿ ಬಿರುಸಿನ ಆಟಕ್ಕೆ ಮುಂದಾದರೆ ದೊಡ್ಡ ರನ್ ರಾಶಿಯನ್ನು ಕಾಣಬಹುದು. ಭಾರತ ಗೆಲುವಿನ ಕಾಂಬಿನೇಶನ್‌ನಲ್ಲಿ ಬದಲಾವಣೆ ಮಾಡುವ ಸಂಭವ ಕಡಿಮೆ. ಆದರೂ ಯುವ ಆಟಗಾರ, ಮುನ್ನುಗ್ಗಿ ಬಾರಿಸಬಲ್ಲ ರಿಷಬ್ ಪಂತ್ ಅವರಿಗೆ ಅವಕಾಶವೊಂದನ್ನು ನೀಡಲು ಕೊಹ್ಲಿ-ಕುಂಬ್ಳೆ ಯೋಚಿಸುತ್ತಿದ್ದಾರೆ. ಹಾಗೆಯೇ ಕಳೆದೆರಡು ಪಂದ್ಯಗಳಲ್ಲಿ ಪ್ರೇಕ್ಷಕನಾಗಿ ಉಳಿದಿರುವ ಸ್ವಿಂಗ್ ದಾಳಿಗಾರ ಭುವನೇಶ್ವರ್ ಕುಮಾರ್ ಅವರಿಗೂ ಚಾನ್ಸ್ ಕೊಡಬೇಕೆಂಬ ತುಡಿತವಿದೆ. ಆದರೆ ಯಾರನ್ನು ಹೊರಗಿರಿಸುವುದೆಂಬುದೇ ಪ್ರಶ್ನೆ.