ಎಲ್ಲವೂ ಬದಲಾಗಿಬಿಟ್ಟಿದೆ. ನೀಲಾಕಾಶದ ಸೌಂದರ್ಯವನ್ನು ಕಾರ್ಮೋಡಗಳು ಕದಡಿದಂತೆ, ನಾವಿಬ್ಬರೂ ಕೂತು ಹರಟಿದ್ದ ಕಲ್ಲುಬೆಂಚು ಕಳೆಗಟ್ಟಿದೆ. ನದಿ ತೀರದಲ್ಲಿನ ಗಾಳಿಯೊಂದಿಗೆ ತಂಪಾದ ಹಿತಭಾವ ಮುನಿಸಿಕೊಂಡಿದೆ. ನಿನ್ನಿಷ್ಟದ ಪಾನಿಪೂರಿ ಅಂಗಡಿಯವ ಸ್ಥಳಾಂತರ ಮಾಡಿದ್ದಾನೆ.
ಮೊದಲ ಭೇಟಿ, ಮೊದಲ ನೋಟ ನೆಟ್ಟ ಜಾಗದಲ್ಲಿನ ಸಂಭ್ರಮದ ನೆಲೆಯೀಗ ಮರುಭೂಮಿಯಂಥ ಖಾಲಿತನದಿಂದ ಸೊರಗಿ ಹೋಗಿದೆ. ಆ ಜಾಗಕ್ಕೆ ನೀನೊಮ್ಮೆ ಒಂಟಿಯಾಗಿ ಹೋಗಿ ನೋಡಿದ್ದರೆ ನಿನಗದು ಅರಿವಾಗುತ್ತಿತ್ತು. ಅಲ್ಲಿ ನಿನ್ನ ಹಸಿನಾಚಿಕೆಯ, ಬಿಸಿಯುಸಿರಿನ, ಮುದ್ದುಮಾತಿನ, ನಗುಚೇಷ್ಟೆಯ ಆಲಾಪವಿತ್ತು ಆಗ!
ನಿನ್ನ ಆ ವೈಯ್ನಾರ, ಬೆಡಗು ಬಿನ್ನಾಣ ಸವಿಯಲು ರೆಕ್ಕೆ ಕಟ್ಟಿ ಹಾರಿ ಉತ್ಸುಕತೆಯಲ್ಲಿ ಬರುತ್ತಿದ್ದ ನನಗೆ, ನಿನ್ನನ್ನು ಕಂಡಾಗ ಕ್ಷಣಮಾತ್ರ ಹಿತಭಯವಾಗಿ ತಂಪನೆಯ ಬೆವರ ಹನಿಗಳು ಮೂಡುತ್ತಿದ್ದವು. ಆ ಒಲವಿನ ನಡುಕದಲ್ಲಿ ಸಮಯದ, ಲೋಕದ ಪರಿವೆ ನನ್ನೊಳಿರಲಿಲ್ಲ. ಬರುಬರುತ್ತಲೇ ಕಣ್ಣೋಟ ಮುಗುಳ್ನಗೆಯಾಗಿ, ಮುಗುಳ್ನಗೆ ಸ್ಪರ್ಶಕ್ಕೆ ತಿರುಗಿ ನೀನು ಉಸಿರಿನಷ್ಟೇ ನನ್ನ ಜೀವಕ್ಕೆ ಅಗತ್ಯ ಮತ್ತು ಬಹುಮುಖ್ಯ ಎನಿಸಿಬಿಟ್ಟಿದ್ದರಲ್ಲಿ ಅಚ್ಚರಿ ಹುಟ್ಟಿಸುವಂಥದ್ದು ಏನಿರಲಿಲ್ಲ ಎಂಬುದು ನನ್ನ ನಂಬಿಕೆ.
ನಿನ್ನ ಕೂದಲೆಳೆಗಳ ಗುಂಪೊಂದು ತಮ್ಮ ಪೋಲಿತನ ಪ್ರದರ್ಶನಕ್ಕೆ ಎದುರೆದುರು ಬಂದು ನಾಟ್ಯವಾಡುತ್ತಿತ್ತು. ನನ್ನ ದೃಷ್ಟಿ ಅದರತ್ತ ಹರಿದಾಗ, ಅಚಾನಕ್ಕಾಗಿ ಅವು ಹಿಂದೆ ಸರಿದು ಕೇಶಸಮುದ್ರದೊಳಗೆ ಲೀನಗೊಳ್ಳುತ್ತಿದ್ದ ಆ ಕ್ಷಣ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ನೀನಂದು ಮುಡಿದಿದ್ದ ಮಲ್ಲಿಗೆಯ ಒಂದು ಮೊಗ್ಗು ನನ್ನ ಜೇಬಿನಲ್ಲಿ ಭದ್ರವಾಗಿ ಕುಳಿತಿದೆ. ಕೇಶರಾಶಿ ಬಿಡಿಸಿ ತಿರುಗಿ ಕಟ್ಟುವಾಗ ನನ್ನೆದೆಯ ಮೇಲೆ ಮೋಹಮೂಡಿ ಗಂಟು ತಪ್ಪಿಸಿಕೊಂಡು ಬಂದು ಕೂತ ಕೂದಲೆಳೆಯೊಂದು ನನ್ನ ದಿನಚರಿ ಪುಸ್ತಕದಲ್ಲಿ ಆಜೀವ ಸದಸ್ಯತ್ವ ಪಡೆದಿದೆ. ನಿನ್ನ ಮುಗ್ಧ ನಗುವಿನ ಒಂದು ಸ್ತಬ್ಧಚಿತ್ರ ಎದೆಯಲ್ಲಿ ಹಚ್ಚಹಸುರಾಗಿ ಅಚ್ಚೊತ್ತಿದೆ. ಆ ನದಿ ತೀರದಲ್ಲಿ ನೀ ಗುನುಗಿದ ಗೀತೆಯೊಂದು ಆಗಾಗ್ಗೆ ಬೀಸುವ ತಂಗಾಳಿಗೆ ಹಿನ್ನೆಲೆ ಗಾಯನ ಕೊಟ್ಟಂತಿದೆ. ನಾ ಹೆಜ್ಜೆಯಿಟ್ಟಂತೆಯೇ ಎದೆಯೊಳಗಿಂದ ಕೇಳುವ ಆ ನಿನ್ನ ಗೆಜ್ಜೆದನಿಯ ನಿಮಿತ್ತ ನೀನೆಲ್ಲೋ ನನ್ನೊಳಗೆ ಅವಿತಂಥ ಅಂತಿಮ ನಿರ್ಣಯಕ್ಕೆ ನಾ ಬರುವಾಗಲೇ..
ಎಲ್ಲವೂ ಬದಲಾಗಿಬಿಟ್ಟಿದೆ. ನೀಲಾಕಾಶದ ಸೌಂದರ್ಯವನ್ನು ಕಾರ್ಮೋಡಗಳು ಕದಡಿದಂತೆ, ನಾವಿಬ್ಬರೂ ಕೂತು ಹರಟಿದ್ದ ಕಲ್ಲುಬೆಂಚು ಕಳೆಗಟ್ಟಿದೆ. ನದಿತೀರದಲ್ಲಿನ ಗಾಳಿಯೊಂದಿಗೆ ತಂಪಾದ ಹಿತಭಾವ ಮುನಿಸಿಕೊಂಡಿದೆ. ನಿನ್ನಿಷ್ಟದ ಪಾನಿಪೂರಿ ಅಂಗಡಿಯವ ಸ್ಥಳಾಂತರ ಮಾಡಿದ್ದಾನೆ. ನಿನಗೆಂದೇ ಕಾದಿರಿಸಿದ್ದ ಗುಲಾಬಿ ಹೂವು ಒಣಗಿ ಕರಕಲಾಗಿದೆ. ನೀನೆದ್ದು ಹೋದ ಮೇಲೆ ನನ್ನ ಮೊಗದ ಮಂದಹಾಸ ಕೂಡ ನನ್ನ ತೊರೆದು ಹೋಗಿದೆ. ಯಾವುದೋ ಗೊತ್ತುಗುರಿ ಪರಿಚಯವಿಲ್ಲದ ಊರ ಜಾತ್ರೆಯಲ್ಲಿ ಒಬ್ಬಂಟಿಯಾಗಿ ಮಗುವನ್ನು ಬಿಟ್ಟು ಹೋಗುವುದಕ್ಕೂ ಮುನ್ನ… ನೀನು ಒಮ್ಮೆಯಾದರೂ ತಿರುಗಿ ನೋಡಬೇಕಿತ್ತು…
ಅರ್ಜುನ್ ಶೆಣೈ