Advertisement
ಔಷಧ ನಿಯಂತ್ರಣಾಲಯ ಇಲಾಖೆ ಕಚೇರಿಯಲ್ಲಿ ರಾಜ್ಯ ಆಶಾ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳೊಂದಿಗೆ ಆರೋಗ್ಯ ಸಚಿವ ರಮೇಶ್‌ಕುಮಾರ್ ಸತತ ಎರಡು ತಾಸು ಸಂಧಾನ ಸಭೆ ನಡೆಸಿದರು. ಸರ್ಕಾರ ಮೂರು ಸಾವಿರ ರೂ. ನೀಡುವುದಾಗಿ ಹೇಳಿದರೆ, ಕಾರ್ಯಕರ್ತೆಯರು ಆರು ಸಾವಿರ ರೂ.ಗಳಿಗೆ ಪಟ್ಟುಹಿಡಿದರು. ಅಂತಿಮವಾಗಿ ಸರ್ಕಾರ ಮೂರೂವರೆ ಸಾವಿರ ನೀಡುವುದಾಗಿ ಹೇಳಿತು. ಇದಕ್ಕೆ ಸಮ್ಮತಿಸಿದ ಕಾರ್ಯಕರ್ತೆಯರು ಮುಷ್ಕರ ಹಿಂಪಡೆದರು.
ಈ ಹಿನ್ನೆಲೆಯಲ್ಲಿ ಎಲ್ಲ ಕಾರ್ಯಕರ್ತೆಯರು ತಮ್ಮ ಊರುಗಳತ್ತ ಮುಖಮಾಡಿದರು. ಆದರೆ, ರಾತ್ರಿ 9.30ಕ್ಕೆ ಮುಷ್ಕರ ಹಿಂಪಡೆಯುವ ನಿರ್ಧಾರ ಕೈಗೊಂಡಿದ್ದರಿಂದ ದೂರದಿಂದ ಬಂದಿದ್ದ ಅನೇಕರಿಗೆ ರಾತ್ರಿ ಊರಿಗೆ ತೆರಳಲು ಸಾಧ್ಯವಾಗಲಿಲ್ಲ. ಹಾಗಾಗಿ, ಕಾಯ್ದಿರಿಸಿದ್ದ ಕಲ್ಯಾಣ ಮಂಟಪಗಳಲ್ಲಿ ಕಾರ್ಯಕರ್ತೆಯರು ಆಶ್ರಯ ಪಡೆದರು.
ಗಾಳಿಸಹಿತ ಮಳೆಯ ನಡುವೆಯೇ ಮಕ್ಕಳು-ಮರಿಗಳೊಂದಿಗೆ ಸಹಸ್ರಾರು ಆಶಾ ಕಾರ್ಯಕರ್ತೆಯರು ಸ್ವಾತಂತ್ರ್ಯ ಉದ್ಯಾನದಿಂದ ರೈಲು ನಿಲ್ದಾಣ, ಮೆಜೆಸ್ಟಿಕ್‌ಗಳಿಗೆ ತೆರಳಿದರು. ಆದರೆ, ಅಲ್ಲಿ ಸಾರಿಗೆ ವ್ಯವಸ್ಥೆ ಕೆಲವರಿಗೆ ಸಿಕ್ಕಿತು, ಇನ್ನು ಕೆಲವರು ಅದೇ ನಿಲ್ದಾಣದಲ್ಲಿ ಮಲಗಿದ್ದ ದೃಶ್ಯ ಕಂಡುಬಂದಿತು. ಸಭೆಯಲ್ಲಿ ಕೇಂದ್ರ ಸರ್ಕಾರದ ಪ್ರೋತ್ಸಾಹಧನ ಹೊರತುಪಡಿಸಿ, ರಾಜ್ಯ ಸರ್ಕಾರ ಆರು ಸಾವಿರ ರೂ. ನೀಡಬೇಕು ಎಂದು ಆಶಾ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು. ಆದರೆ ಸಚಿವರು, ಮೂರು ಸಾವಿರ ರೂ. ನೀಡುವುದಾಗಿ ಹೇಳಿದರು. ಆದರೆ, ಪದಾಧಿಕಾರಿಗಳು ಬಿಗಿಪಟ್ಟುಹಿಡಿದರು. ಆರು ಸಾವಿರ ರೂ. ನೀಡುವುದಾಗಿ ಘೋಷಿಸುವವರೆಗೂ ಮುಷ್ಕರ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಹಾಗಾಗಿ, ಮತ್ತೆ 500 ರೂ. ಹೆಚ್ಚಿಸುವ ಭರವಸೆ ಸರ್ಕಾರದಿಂದ ಬಂದಿತು.
Related Articles
ಪ್ರಸ್ತುತ ರಾಜ್ಯ ಸರ್ಕಾರ ಈಗ ಸಾವಿರ ರೂ. ಪ್ರೋತ್ಸಾಹಧನ ನೀಡುತ್ತಿದೆ. ಇದನ್ನು ಮೂರು ಸಾವಿರ ರೂ.ಗಳಿಗೆ ಹೆಚ್ಚಿಸಲಾಗುವುದು. ಹಾಗೂ ಕೇಂದ್ರದಿಂದ ಆಯಾ ಚಟುವಟಿಕೆಗಳಿಗೆ ಅನುಗುಣವಾಗಿ ಪ್ರೋತ್ಸಾಹಧನ ಕೂಡ ಬರಲಿದೆ. ಜತೆಗೆ ಆಶಾ ಕಾರ್ಯಕರ್ತೆಯರಿಗೆ ಉಚಿತ ಬಸ್ ಪಾಸ್ ವಿತರಿಸಲಾಗುವುದು. ಸ್ವಸಹಾಯ ಸಂಘಗಳಿಂದ 2 ಲಕ್ಷ ರೂ. ವರೆಗೆ ಸ್ವ-ಉದ್ಯೋಗಕ್ಕೆ ಬಡ್ಡಿರಹಿತ ಸಾಲ ನೀಡಲಾಗುವುದು. ಇದನ್ನು ಕಂತುಗಳಲ್ಲಿ ಪಾವತಿಸಬೇಕು. ಆರು ಸಾವಿರ ಆಶಾ ಕಾರ್ಯಕರ್ತೆಯರಿಗೆ ನಿವೇಶನ ನೀಡಲಾಗುವುದು. ಅಪಘಾತ ಅಥವಾ ಕಾಯಿಲೆಯಿಂದ ಅಕಾಲಿಕ ಸಾವನ್ನಪ್ಪಿದ ಕಾರ್ಯಕರ್ತೆಯರಿಗೆ ತಲಾ 50 ಸಾವಿರ ರೂ. ನೀಡುವುದಾಗಿ ಸಚಿವರು ತಿಳಿಸಿದರು.
Advertisement
ಆಗ, ಈ ಬಗ್ಗೆ ಯೋಚಿಸಲು ಸಮಯಾವಕಾಶ ಕೇಳಿದ ಪದಾಧಿಕಾರಿಗಳು, ಕಾರ್ಯಕರ್ತೆಯರೊಂದಿಗೆ ಮತ್ತೂಂದು ಸುತ್ತಿನ ಮಾತುಕತೆ ನಡೆಸಿದರು. ಅಂತಿಮವಾಗಿ ಮುಷ್ಕರ ಹಿಂಪಡೆಯುವ ನಿರ್ಧಾರ ಪ್ರಕಟಿಸಿದರು. ಒಮ್ಮೆಲೇ ಸಹಸ್ರಾರು ಕಾರ್ಯಕರ್ತೆಯರು ನಿಲ್ದಾಣಗಳತ್ತ ಹೊರಟಿದ್ದರಿಂದ ಹಾಗೂ ಮಳೆ ಕೂಡ ಇದ್ದುದರಿಂದ ಸಂಚಾರದಟ್ಟಣೆ ಉಂಟಾಯಿತು.
ಮಳೆ ನಡುವೆಯೂ ಮುಷ್ಕರಈ ಮಧ್ಯೆ ಎರಡನೇ ದಿನ ಸಂಘದ ಪದಾಧಿಕಾರಿಗಳು ನಿರ್ಧಾರ ಪ್ರಕಟಿಸುವವರೆಗೂ ಕಾರ್ಯಕರ್ತೆಯರು ಜಾಗಬಿಟ್ಟು ಕದಲಲಿಲ್ಲ. ಬೆಳಿಗ್ಗೆ ಹತ್ತಿರದ ಚೌಲಿó ಮತ್ತು ಸುಲಭ ಶೌಚಾಲಯಗಳಲ್ಲಿ ಬೆಳಗಿನ ಕಾರ್ಯಗಳನ್ನು ಪೂರೈಸಿ ಮತ್ತೆ ಸ್ವಾತಂತ್ರ್ಯ ಉದ್ಯಾನಕ್ಕೆ ಬಂದು ಧರಣಿಯಲ್ಲಿ ಪಾಲ್ಗೊಂಡರು. ಮಳೆ-ಗಾಳಿ ನಡುವೆ ರಾತ್ರಿಯಿಡೀ ಫುಟ್‌ಪಾತ್‌ಗಳಲ್ಲಿ ಕಳೆದರೂ, ಕರಗದ ಸರ್ಕಾರದ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. “ಸರ್ಕಾರದ ಆರೋಗ್ಯ ಯೋಜನೆಗಳ ಬಹುತೇಕ ಯಶಸ್ಸು ನಮ್ಮ ಶ್ರಮವನ್ನು ಅವಲಂಬಿಸಿದೆ. ಆದೆರ, ನಮ್ಮ ಬಗ್ಗೆ ಸರ್ಕಾರಕ್ಕೆ ಕರುಣೆಯೇ ಇಲ್ಲ. ಮಕ್ಕಳು-ಮರಿಗಳನ್ನು ಕಟ್ಟಿಕೊಂಡು ಸತತ ಎರಡು ದಿನ ಇಲ್ಲಿ ಬಿದ್ದಿದ್ದೇವೆ. ನೂರಾರು ಕಾರ್ಯಕರ್ತೆಯರು ಅಸ್ವಸ್ಥಗೊಂಡಿದ್ದಾರೆ. ಚಿಕಿತ್ಸೆ ತೆಗೆದುಕೊಂಡು ಮತ್ತೆ ಧರಣಿಯಲ್ಲಿ ಕುಳಿತಿದ್ದಾರೆ’ ಎಂದು ಮಂಡ್ಯದ ಆಶಾ ಕಾರ್ಯಕರ್ತೆ ಲಕ್ಷ್ಮೀ ಆಕ್ರೋಶ ವ್ಯಕ್ತಪಡಿಸಿದರು. ಸಭೆಯಲ್ಲಿ ಪದಾಧಿಕಾರಿಗಳಾದ ಸೋಮಶೇಖರ್, ನಾಗಲಕ್ಷ್ಮಿ, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತಿತರರು ಉಪಸ್ಥಿತರಿದ್ದರು.