Advertisement

ಸಹಾಯಕ ಪ್ರಾಧ್ಯಾಪಕರ ಅಂತಿಮ ಪಟ್ಟಿ ಪ್ರಕಟ

03:10 AM Jul 19, 2017 | Karthik A |

ಅಭ್ಯರ್ಥಿಗಳ ಪ್ರತಿಭಟನೆಗೆ ಮಣಿದ ಕಾಲೇಜು ಶಿಕ್ಷಣ ಇಲಾಖೆ
ಬೆಂಗಳೂರು: ರಾಜ್ಯ ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯ ಪದವಿ ಕಾಲೇಜಿನಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಆಯ್ಕೆಯಾಗಿರುವ 1,489 ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಇಲಾಖೆ ಮಂಗಳವಾರ ಪ್ರಕಟಿಸಿದೆ. ಸರಕಾರವು ಅಂತಿಮ ಪಟ್ಟಿ ಪ್ರಕಟಿಸಲು ವಿನಾ ಕಾರಣ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ನೊಂದ ಅಭ್ಯರ್ಥಿಗಳು ಹಲವು ಬಾರಿ ಪ್ರತಿಭಟನೆ ನಡೆಸಿದ್ದರು. ಮಂಗಳವಾರ ಬೆಳಗ್ಗೆ ನಗರದ ಬಹುಮಹಡಿ ಕಟ್ಟಡದ ಎದುರು ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ ನೇತೃತ್ವದಲ್ಲಿ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ್ದರು.

Advertisement

ಅನಂತರ ಎಂಎಲ್‌ಸಿ ಪುಟ್ಟಣ್ಣ ಸಮೇತವಾಗಿ, ಅಭ್ಯರ್ಥಿಗಳು ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿರುವ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಗೆ ಭೇಟಿ ನೀಡಿ, ತತ್‌ಕ್ಷಣವೇ ಪಟ್ಟಿ ಪ್ರಕಟಿಸುವಂತೆ ಆಗ್ರಹಿಸಿದರು. ಆಯುಕ್ತರು ರಜೆಯಲ್ಲಿದ್ದಾರೆ. ತತ್ಸಮಾನ ಅಧಿಕಾರಿಯ ಸಹಿಯ ಅನಂತರ ಪ್ರಕಟಿಸುವುದಾಗಿ  ಕಚೇರಿಯ ಅಧಿಕಾರಿಗಳು ಭರವಸೆ ನೀಡಿದರು. ಅಪರಾಹ್ನ 4 ಗಂಟೆಯ ವರೆಗೂ ಪ್ರಕಟಿಸದೇ ಇದ್ದುದರಿಂದ ಪುಟ್ಟಣ್ಣ ಮತ್ತು ಅಭ್ಯರ್ಥಿಗಳು ಆಯುಕ್ತರ ಕಚೇರಿಗೆ ಪ್ರವೇಶಿಸಿ, ಪಟ್ಟಿ ಪ್ರಕಟಿಸಲೇ ಬೇಕು ಎಂದು ಪಟ್ಟು ಹಿಡಿದರು. ಒತ್ತಡಕ್ಕೆ ಮಣಿದ ಅಧಿಕಾರಿಗಳು ಸರಕಾರದ ಆದೇಶದಂತೆ ಅಂತಿಮಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದರು.

ಒಟ್ಟು 2,160 ಹುದ್ದೆಯಲ್ಲಿ ಭಾಷೆ, ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಶಾಸ್ತ್ರದ 1,489 ಹುದ್ದೆಯ ಪಟ್ಟಿಯನ್ನು ಪ್ರಕಟಿಸಿ, ಆ. 1ರಿಂದ 5ರ ತನಕ ಸ್ಥಳ ನಿಯುಕ್ತಿ ಕೌನ್ಸೆಲಿಂಗ್‌ ನಡೆಸುವುದಾಗಿಯೂ ಹೇಳಿದ್ದಾರೆ. ವಿವಿಧ ವಿಷಯಗಳ ಅಭ್ಯರ್ಥಿಗಳು ಪ್ರತ್ಯೇಕವಾಗಿ ಕೌನ್ಸೆಲಿಂಗ್‌ ಹಾಜರಾಗಬೇಕಾದ ದಿನಾಂಕವನ್ನು ತಿಳಿಸಲಾಗುತ್ತದೆ ಮತ್ತು ಸ್ಪಷ್ಟ ದಾಖಲೆ ನೀಡದ ಸುಮಾರು 600 ಅಭ್ಯರ್ಥಿಗಳ ಅಂತಿಮ ಪಟ್ಟಿ ಅನಂತರ ಪ್ರಕಟಿಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.

ಅತಿಥಿ ಉಪನ್ಯಾಸಕರ ನೇಮಕಕ್ಕೆ ತಾತ್ಕಾಲಿಕ ತಡೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸರಕಾರಿ ಪದವಿ ಕಾಲೇಜಿಗೆ ವಿವಿಧ ವಿಷಯದಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅಭ್ಯರ್ಥಿಗಳ ನೇಮಕದ ಅಂತಿಮ ಪಟ್ಟಿ ಸಿದ್ಧಗೊಂಡಿರುವ ಹಿನ್ನೆಲೆಯಲ್ಲಿ, ಅವರಿಗೆ ಕೌನ್ಸೆಲಿಂಗ್‌ ನಡೆಸಿ ಸ್ಥಳ ನಿಯೋಜನೆ ಮಾಡಲಾಗುತ್ತದೆ. ಇದಾದ ಅನಂತರ ಉಳಿಯುವ ಖಾಲಿ ಹುದ್ದೆಗೆ ಅತಿಥಿ ಉಪನ್ಯಾಸಕರನ್ನು ಕಾರ್ಯಭಾರದ ಆಧಾರದಲ್ಲಿ ನೇಮಕ ಮಾಡಿಕೊಳ್ಳಬೇಕಿರುವುದರಿಂದ ಈಗಾಗಲೇ ಅತಿಥಿ ಉಪನ್ಯಾಸಕರಾಗಿ ಆಯ್ಕೆಯಾಗಿರುವವರನ್ನು ಹೊರತುಪಡಿಸಿ, ಮುಂದಿನ ಮೂರು ದಿನಗಳ ಕಾಲ ಬೇರ್ಯಾವ ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳದಂತೆ ಕಾಲೇಜು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಒಂದು ತರಗತಿಗೆ ಇನ್‌ಟೆಕ್‌ 100 ವಿದ್ಯಾರ್ಥಿ ಇರಬೇಕು ಎಂದು ಇಲಾಖೆ ಹೊರಡಿಸಿರುವ ಆದೇಶವನ್ನು 60 ವಿದ್ಯಾರ್ಥಿಗಳಿಗೆ ಇಳಿಸಬೇಕು. ಈ ಸಂಬಂಧ ಆಯುಕ್ತರೊಂದಿಗೆ ಮಾತುಕತೆ ಮಾಡಿದ್ದೇವೆ. ಒಪ್ಪಿಗೆಯನ್ನು ಸೂಚಿಸಿದ್ದಾರೆ. ಇನ್‌ಟೆಕ್‌ ಕಡಿಮೆ ಮಾಡಿದರೆ, ಹೊಸದಾಗಿ ನೇಮಕಗೊಂಡ ಸಹಾಯಕ ಪ್ರಾಧ್ಯಾಪಕರಿಗೂ ಹಾಗೂ ಅತಿಥಿ ಉಪನ್ಯಾಸಕರಿಗೂ ಸಮಸ್ಯೆ ಇಲ್ಲ.
– ಪುಟ್ಟಣ್ಣ, ವಿಧಾನ ಪರಿಷತ್‌ ಸದಸ್ಯ

Advertisement
Advertisement

Udayavani is now on Telegram. Click here to join our channel and stay updated with the latest news.

Next