Advertisement

ರೋಗಿಗೆ ಚಿಕಿತ್ಸೆ ಕೊಡಿಸಲು ನೆರವು

11:27 AM Jul 11, 2020 | Suhan S |

ವಿಜಯಪುರ: ಕೋವಿಡ್‌ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಸರ್ಕಾರ ಸೂಚನೆ ನೀಡಿದ್ದರೂ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ನಿರಾಕರಿಸುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.  ಸಿಂದಗಿ ತಾಲೂಕಿನ ಮಲಘಾಣ ರೋಗಿಯೊಬ್ಬರಿಗೆ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದ್ದರಿಂದ ಕುಟುಂಬದವರು ರೋಗಿಯನ್ನು ಕಾರಿನಲ್ಲೇ ಜಿಲ್ಲಾಧಿಕಾರಿ ಕಚೇರಿಗೆ ಕರೆತಂದ ಘಟನೆ ನಡೆದಿದೆ.

Advertisement

ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತಿದ್ದ ಮಲಘಾಣ ಗ್ರಾಮದ 54 ವರ್ಷದ ವ್ಯಕ್ತಿಯೊಬ್ಬರು ಸಿಂದಗಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ರೋಗಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯ ಮನಗಂಡ ವೈದ್ಯರು, ವಿಜಯಪುರ ನಗರದ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದರು. ಸಂಬಂ ಧಿಗಳು ರೋಗಿಯನ್ನು ಕಾರಿನಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಕರೆ ತಂದು ಹಲವು ಆಸ್ಪತ್ರೆಗಳಿಗೆ ಅಲೆದಾಡಿದ್ದಾರೆ. ಆದರೆ ಚಿಕಿತ್ಸೆ ನೀಡಲು ಯಾವುದೇ ಖಾಸಗಿ ಆಸ್ಪತ್ರೆ ವೈದ್ಯರು ಮುಂದಾಗದೇ, ಹಾಸಿಗೆ ಲಭ್ಯ ಇಲ್ಲ ಎಂದು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ.

ಇದರಿಂದ ಕಂಗಾಲಾದ ರೋಗಿಯ ಸಂಬಂಧಿಗಳು ರೋಗಿಯನ್ನು ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ಕರೆತಂದು ಜಿಲ್ಲಾಡಳಿತಕ್ಕೆ ಪರಿಸ್ಥಿತಿ ಮನವರಿಕೆ ಮಾಡಿಕೊಡುವ ಕೊಡಲು ಮುಂದಾಗಿದ್ದಾರೆ. ವಿಷಯ ತಿಳಿದ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಅವರು, ರೋಗಿ ಇದ್ದ ಕಾರಿನ ಬಳಿಗೆ ಧಾವಿಸಿ ಆರೋಗ್ಯ ವಿಚಾರಿಸಿ ಆತ್ಮಸ್ಥೈರ್ಯ ತುಂಬಿದ್ದಾರೆ. ಅಲ್ಲದೇ ಕೂಡಲೇ ಸರ್ಕಾರಿ ಜಿಲ್ಲಾಸ್ಪತ್ರೆಗೆ ರೋಗಿಯನ್ನು ದಾಖಲಿಸಲು ನೆರವಾಗಿ ಚಿಕಿತ್ಸೆ ಕೊಡಿಸಿ, ಮಾನವೀಯತೆ ಮೆರೆದಿದ್ದಾರೆ.

ನಂತರ ಈ ಕುರಿತು ಪ್ರತಿಕ್ರಿಯಿಸಿದ ಅವರು, ಉಸಿರಾಟದ ಸಮಸ್ಯೆ, ಅಸ್ತಮಾ ಕಾಯಿಲೆ ಎಂದಾಕ್ಷಣ ಕೊರೊನಾ ರೋಗ ಇದೆ ಎಂದು ಭಾವಿಸುವುದು ಬೇಡ. ಕೆಮ್ಮು, ನೆಗಡಿಯಾದರೂ ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ಹಾಗಂತ ಇಂಥ ಲಕ್ಷಣ ಇದ್ದವರಿಗೆ ಕೋವಿಡ್ ಸೋಂಕು ಇದೆ ಎಂದಲ್ಲ. ಕೋವಿಡ್‌ ಲಕ್ಷಣ ಇಲ್ಲದಿದ್ದರೂ ರೋಗ ದೃಢಪಟ್ಟಿರುವ ಪ್ರಕರಣಗಳೂ ನಮ್ಮ ಮುಂದಿವೆ. ಹೀಗಾಗಿ ವೈದ್ಯರು ಕರ್ತವ್ಯ ಪ್ರಜ್ಞೆ ಮೆರೆಯಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next