ಬೆಂಗಳೂರು: ನಗರದ ಕನಕಪುರ ರಸ್ತೆ ಬಳಿಯಿರುವ ನಾರಾಯಣಗುರುಗಳ ಗುರುಕುಲ ಅಭಿವೃದ್ಧಿಗೆ ರಾಜ್ಯ ಸರ್ಕಾರ ಆರ್ಥಿಕ ನೆರವು ಸೇರಿದಂತೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧವಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶುಕ್ರವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಉದ್ಘಾಟಿಸಿ ಮಾತನಾಡಿದರು.
ಕನಕಪುರ ರಸ್ತೆ ಬಳಿ ನಾರಾಯಣ ಗುರುಕುಲಕ್ಕೆ ಸೇರಿದ 10 ಎಕರೆ ಭೂಮಿಯಿ ಇದೆ. ಗುರುಕುಲದ ಉತ್ಸುವಾರಿಗಳು ಗುರುಕುಲದ ಅಭಿವೃದ್ಧಿಗೆ ನೆರವು ಕೇಳಿದರೆ ಸರ್ಕಾರ ಅಗತ್ಯ ಸಹಕಾರ ನೀಡಲು ಬದ್ಧವಿದೆ. ಅಸ್ಪೃಶ್ಯತೆ ತಾಂಡವಾಡುತ್ತಿದ್ದ ಕಾಲಘಟ್ಟದಲ್ಲಿ ಸಾಮಾಜ ಸುಧಾರಕರಾಗಿ ದೀನ, ದಲಿತರ ಸಮಾನತೆಗೆ ಹೊಸ ಆಯಾಮ ನೀಡಿದ ನಾರಾಯಣ ಗುರುಗಳು, ಸರಳ ವಿಚಾಧಾರೆಗಳ ಮೂಲಕ ಜನತೆ ಹತ್ತಿರವಾದರು. ಅವರು ಹೇಳಿದ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕಾಗಿದೆ ಎಂದು ತಿಳಿಸಿದರು.
ಹರಿಜನರಿಗೆ ಸಂಸ್ಕೃತ ಪಾಠ: ಕಾಯಕ ಯೋಗಿ ಬಸವಣ್ಣನವರ ರೀತಿಯಲ್ಲಿ ಸೇವೆ ಮಾಡಿದ ನಾರಾಯಣ ಗುರುಗಳು ಹರಿಜನರಿಗೆ ಸಂಸ್ಕೃತ ಕಲಿಸಿ ಸಮಾನತೆಯನ್ನು ಎತ್ತಿಹಿಡಿದರು. ಇವರ ಚಿಂತನೆಗಳಿಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಸ್ವಾಮಿ ವಿವೇಕಾನಂದ ಮತ್ತು ರವೀಂದ್ರ ನಾಥ್ ಟ್ಯಾಗೋರ್ ಕೂಡ ಪ್ರಭಾವಿತರಾಗಿದ್ದರು ಎಂದು ಯಡಿಯೂರಪ್ಪ ಶ್ಲಾಘಿಸಿದರು.
ಸಮಾಜದಲ್ಲಿ ಬೇರೂರಿದ್ದ ಅಂಧಶ್ರದ್ಧೆ, ಮೂಢನಂಬಿಕೆ ತೊಡೆದು ಹಾಕಿ, ವೈಜ್ಞಾನಿಕ ಪ್ರಜ್ಞೆ ಬೆಳೆಸಿದರು. ಕೇರಳ, ತಮಿಳುನಾಡು ಅಲ್ಲದೆ ಕರ್ನಾಟಕದ ಕರಾವಳಿ ಭಾಗದಲ್ಲಿ ಸಾಮಾಜಿಕ ತುಳಿತಕ್ಕೊಳಗಾದವರ ದನಿಯಾಗಿದ್ದರು. ಅಸ್ಪ್ರಶ್ಯರಿಗಾಗಿಯೇ ದೇವಾಲಯ ಕಟ್ಟಿದ ಶ್ರೇಯಸ್ಸು ಇವರದ್ದಾಗಿದೆ ಎಂದರು.
ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ: ಮುಜರಾಯಿ ಮತ್ತು ಬಂದರು ಖಾತೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಕೇರಳ ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಮಾಡಿರುವುದಕ್ಕೆ ನಾರಾಯಣ ಗುರುಗಳ ಕೊಡುಗೆಯೇ ಕಾರಣ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರ್ಕಾರ ಬಡವರ ಪರ ಇರುವ ಸರ್ಕಾರವಾಗಿದ್ದು ಪ್ರವಾಹ ಸಂತ್ರಸ್ತರಿಗಾಗಿ ಮನೆ ನಿರ್ಮಿಸಿಕೊಡಲು ಮುಂದಾಗಿದೆ. ಮುಂದೆ ಕೂಡ ಬಡವರ ಪರವಾಗಿ ಕೆಲಸ ಮಾಡಲಿದೆ ಎಂದು ತಿಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಜಾನಕಿ ಸೇರಿದಂತೆ ಮತ್ತಿತರರು ಇದ್ದರು.