Advertisement
ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‌ನ ಮರಿತಿಬ್ಬೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಮ್ಮ ಸರ್ಕಾರ ಹಿಂದುಳಿದ ವರ್ಗಗಳಿಗೆ ದ್ರೋಹ ಮಾಡಲ್ಲ. ಅವರಿಗೆ ಮೀಸಲಾತಿಯ ಅವಕಾಶ ಇಲ್ಲದೇ ತಾ.ಪಂ., ಜಿ.ಪಂ ಚುನಾವಣೆಗಳನ್ನು ನಡೆಸುವುದಿಲ್ಲ ಎಂದರು.
Related Articles
Advertisement
ಒಬಿಸಿಗಳಿಗೆ ಅನ್ಯಾಯ ಮಾಡಿದ್ದು ಸಿದ್ದು:ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಮಧ್ಯಪ್ರವೇಶಿಸಿ, ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾಗ ಹಿಂದುಳಿದ ವರ್ಗಗಳ ಆಯೋಗದಿಂದ ಎಲ್ಲಾ ವರ್ಗಗಳ ಸಮೀಕ್ಷೆ ಮಾಡಿದ್ದಾರೆ. ಆ ಮಾಹಿತಿಯನ್ನು ಸುಪ್ರೀಂಕೋರ್ಟ್‌ಗೆ ಕೊಡಿ ಎಂದು ಹೇಳಿದರು. ಅದಕ್ಕೆ, ಸಿದ್ದರಾಮಯ್ಯ ಮಾಡಿದರು ಎಂದು ಪದೇ ಪದೇ ಹೇಳುತ್ತಿದ್ದೀರಿ, ಅವರು ಸಿಎಂ ಆಗಿದ್ದಾಗ ನಾನು ವಿಧಾನಪರಿಷತ್ ಪ್ರತಿಪಕ್ಷ ನಾಯಕನಾಗಿದ್ದೆ. ಆಗ ಹಿಂದುಳಿದ ವರ್ಗಗಳ ಆಯೋಗದ ವರದಿ ಬಿಡುಗಡೆ ಮಾಡಿ ಎಂದು ಪರಿ ಪರಿಯಾಗಿ ಕೇಳಿಕೊಂಡೆ, ಇವತ್ತು, ನಾಳೆ ಎಂದು ಅವರು ಕಾಲ ಸಾಗ ಹಾಕಿದರು. ಹಾಗಾಗಿ, ಹಿಂದುಳಿದ ವರ್ಗದವರಿಗೆ ಮೋಸ ಮಾಡಿದ್ದು ಸಿದ್ದರಾಮಯ್ಯ ಎಂದು ಈಶ್ವರಪ್ಪ ತಿರುಗೇಟು ನೀಡಿದರು. ಮಾತೆತ್ತಿದರೆ ಸಿದ್ದರಾಮಯ್ಯ ಹೆಸರು ಹೇಳ್ತಿರಿ, ನಿಮ್ಮದು, ಸಿದ್ದರಾಮಯ್ಯನವರದ್ದು ಏನ್ ಮ್ಯಾಚ್ ಫಿಕ್ಸಿಂಗ್ ಅನ್ನೋದೆ ಗೊತ್ತಾಗಲ್ಲ ಎಂದು ಹರಿಪ್ರಸಾದ್ ಕಾಲೆಳೆದರು. “ನನ್ನ ಮತ್ತು ಸಿದ್ದರಾಮಯ್ಯ ನಡುವಿನ ಮ್ಯಾಚ್ ಫಿಕ್ಸಿಂಗ್ ಈ ಜನ್ಮದಲ್ಲಿ ನಿಮಗೆ ಗೊತ್ತಾಗಲ್ಲ ಬಿಡಿ’ ಎಂದು ಈಶ್ವರಪ್ಪ ಮಾರುತ್ತರ ನೀಡಿದರು. ಒಬಿಸಿಗಳಿಗೆ ಮೀಸಲಾತಿ ಬೇಡ ಎಂದು ರಾಮಾಜೋಯಿಸ್ ಅವರು ಸುಪ್ರೀಂಕೋರ್ಟ್‌ಗೆ ಹೋಗಿದ್ದರು, ಅದು ನಿಮಗೆ ತಿಳಿದಿರಲಿ ಎಂದು ಹರಿಪ್ರಸಾದ್ ಟಾಂಗ್ ಕೊಟ್ಟರು. ಒಬಿಸಿಗಳಿಗೆ ಸಿದ್ದರಾಮಯ್ಯ ಮೋಸ ಮಾಡಿದ್ದು ಎಂದು ಈಶ್ವರಪ್ಪ ಹೇಳಿರುವುದು ಸರಿಯಲ್ಲ ಎಂದು ಪ್ರಕಾಶ್ ರಾಥೋಡ್ ಆಕ್ಷೇಪಿಸಿದರು. ಅವರಿಬ್ಬರೂ ಒಂದೇ ನಿಮಗೆ ಗೊತ್ತಾಗಲ್ಲ ಸುಮ್ನೆ ಕೂರಿ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿ ಚರ್ಚೆಗೆ ತೆರೆ ಎಳೆದರು.