Advertisement

Assembly session ಬಿಜೆಪಿ ಹೋರಾಟ ಲೆಕ್ಕಕ್ಕಿಲ್ಲ; ಕಲಾಪ ಸುಸೂತ್ರ

09:48 PM Dec 11, 2023 | Team Udayavani |

ಸುವರ್ಣ ವಿಧಾನಸೌಧ: ಗೊಂದಲಗಳನ್ನು ಬದಿಗಿಟ್ಟು ಸಚಿವ ಜಮೀರ್‌ ಅಹ್ಮದ್‌ ರಾಜೀನಾಮೆಗೆ ಆಗ್ರಹಿಸಿ ಅಬ್ಬರದ ಹೋರಾಟಕ್ಕೆ ಮುಂದಾದ ಬಿಜೆಪಿಯ ಉತ್ಸಾಹವನ್ನು ಆಡಳಿತ ಪಕ್ಷ ಕಾಂಗ್ರೆಸ್‌ ಠುಸ್‌ ಎನ್ನಿಸಿದೆ. ಸ್ಪೀಕರ್‌ ಪೀಠದ ಎದುರು ಬಿಜೆಪಿ ನಡೆಸುತ್ತಿದ್ದ ಧರಣಿಯನ್ನು ಲೆಕ್ಕಕ್ಕೂ ತೆಗೆದುಕೊಳ್ಳದ ಸರ್ಕಾರ ಪ್ರಶ್ನೋತ್ತರವೂ ಸೇರಿ ಎಲ್ಲ ಕಲಾಪ ನಡೆಸಿದ್ದು, ಬರದ ಮೇಲಿನ ಚರ್ಚೆಗೆ ಉತ್ತರವನ್ನೂ ನೀಡಿದೆ. ಕೊನೆಗೆ ಸತತ ಏಳೆಂಟು ತಾಸುಗಳ ಬಿಜೆಪಿ ಧರಣಿಯು ಕಲಾಪ ಮುಂದೂಡಿಕೆಯಲ್ಲಿ ಅಂತ್ಯಗೊಂಡಿತು.

Advertisement

ಮೊದಲವಾರ ಆದ ಮುಖಭಂಗ ತಪ್ಪಿಸಿಕೊಳ್ಳಲು ಸದನ ಆರಂಭವಾಗುವುದಕ್ಕೆ ಮುನ್ನ ಸಭೆ ನಡೆಸಿ ತೆಲಂಗಾಣ ಚುನಾವಣೆ ಸಂದರ್ಭದಲ್ಲಿ “”ಬಿಜೆಪಿಯವರು ಮುಸ್ಲಿಂ ಸ್ಪೀಕರ್‌ಗೆ ನಮಸ್ಕಾರ ನೀಡುವಂತೆ ಕಾಂಗ್ರೆಸ್‌ ಮಾಡಿದೆ” ಎಂದು ಜಮೀರ್‌ ಹೇಳಿಕೆ ಹಿನ್ನೆಲೆಯಲ್ಲಿ ಅವರ ರಾಜೀನಾಮೆಗೆ ಆಗ್ರಹಿಸಿ ಹೋರಾಟ ನಡೆಸಲು ಬಿಜೆಪಿ ನಿರ್ಧರಿಸಿತು.

ಹೀಗಾಗಿ ಜಮೀರ್‌ ಅವರಿಂದ ಉತ್ತರ ಪಡೆಯುವುದಿಲ್ಲ ಎಂದು ಪ್ರಶ್ನೋತ್ತರ ಕಲಾಪ ಆರಂಭವಾಗುತ್ತಿದ್ದಂತೆ ಧರಣಿ ಪ್ರಾರಂಭಿಸಿತು. ಇದಕ್ಕೆ ಜೆಡಿಎಸ್‌ ಕೂಡಾ ಕೈ ಜೋಡಿಸಿತು. ಆದರೆ ಪ್ರತಿಪಕ್ಷ ಧರಣಿ ನಡೆಸುವಾಗಲೇ ಸರ್ಕಾರ ಎಲ್ಲ ಕಲಾಪ ನಡೆಸಿದೆ. ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಮಾರ್ಗ ಕಾಣದೇ ಬಿಜೆಪಿ ಇಕ್ಕಟ್ಟಿಗೆ ಸಿಲುಕಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡರಂತೂ ಬರದ ಚರ್ಚೆಗೆ ಉತ್ತರ ನೀಡುವಾಗ ಬಿಜೆಪಿಯನ್ನು ಹಿಗ್ಗಾಮುಗ್ಗ ಟೀಕಿಸಿದ್ದು, ಧರಣಿ ನಿರತ ಬಿಜೆಪಿ-ಜೆಡಿಎಸ್‌ ಮೈತ್ರಿಕೂಟಕ್ಕೆ ಉತ್ತರ ಕೊಡುವುದಕ್ಕೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.

ನಡೆದಿದ್ದೇನು ? : ಪ್ರಶ್ನೋತ್ತರ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಶಾಸಕ ಕೃಷ್ಣ ನಾಯಕ ಅವರ ಪ್ರಶ್ನೆಗೆ ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಉತ್ತರಿಸಲು ಮುಂದಾಗುತ್ತಿದ್ದಂತೆ ವಿಪಕ್ಷ ನಾಯಕ ಆರ್‌.ಅಶೋಕ ನೇತೃತ್ವದಲ್ಲಿ ಬಿಜೆಪಿ ವಿರೋಧ ವ್ಯಕ್ತಪಡಿಸಿತು. ಗದ್ದಲ ತೀವ್ರವಾಗಿದ್ದರಿಂದ ಸ್ಪೀಕರ್‌ ಖಾದರ್‌ ಹತ್ತು ನಿಮಿಷ ಕಲಾಪ ಮುಂದೂಡಿದರು. ಪರಿಸ್ಥಿತಿ ತಿಳಿಗೊಳಿಸಲು ಸ್ಪೀಕರ್‌ ಕಚೇರಿಯಲ್ಲಿ ನಡೆದ ಸಭೆಯಲ್ಲೂ ಬಿಜೆಪಿ-ಕಾಂಗ್ರೆಸ್‌ ಮುಖಂಡರ ಮಧ್ಯೆ ವಾಗ್ವಾದ ನಡೆಯಿತು.

ಸಭೆಯಲ್ಲಿ ಉಪಸ್ಥಿತರಿದ್ದ ಸಚಿವ ಜಮೀರ್‌ ಅಹ್ಮದ್‌ ಹಾಗೂ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮಧ್ಯೆ ಭಾರೀ ವಾಗ್ವಾದ ನಡೆಯಿತು ಎನ್ನಲಾಗಿದೆ. ಜಮೀರ್‌ ಅವರನ್ನು ವಜಾಗೊಳಿಸಬೇಕೆಂದು ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದರಿಂದ ಸಂಧಾನ ಸಭೆ ವಿಫ‌ಲವಾಗಿ ಬಿಜೆಪಿ ಧರಣಿ ಮುಂದುವರಿಸಿತು.

Advertisement

ಜಗ್ಗದ ಖಾದರ್‌: ಆದರೆ ಸ್ಪೀಕರ್‌ ಖಾದರ್‌ ಬಿಜೆಪಿ ಹೋರಾಟಕ್ಕೆ ಜಗ್ಗದೇ ಗದ್ದಲದ ಮಧ್ಯೆಯೇ ಪ್ರಶ್ನೋತ್ತರ ಕಲಾಪ ನಡೆಸಿದರು. ಇದರ ಮಧ್ಯೆ ಐದು ವಿಧೇಯಕಗಳಿಗೆ ಚರ್ಚೆ ಇಲ್ಲದೇ ವಿಧಾನಸಭೆ ಒಪ್ಪಿಗೆ ನೀಡಿತು. ಮಾತ್ರವಲ್ಲ, ಬರದ ಚರ್ಚೆಯನ್ನು ಮುಂದುವರಿಸುವಂತೆ ಖಾದರ್‌ ಸೂಚನೆ ನೀಡಿದರು. ಹಿರಿಯ ಶಾಸಕರ ಮನವಿ ಮೇರೆಗೆ ಮಧ್ಯಾಹ್ನ 3.15ರವರೆಗೆ ಭೋಜನ ವಿರಾಮ ಘೋಷಿಸಿದರು.

ಬಳಿಕ ಕಲಾಪ ಸಮಾವೇಶಗೊಂಡರೂ ಸರ್ಕಾರ ಬಿಜೆಪಿಯ ಹೋರಾಟವನ್ನು ಲೆಕ್ಕಿಸದೇ ಬರದ ಚರ್ಚೆಗೆ ಕಂದಾಯ ಸಚಿವ ಕೃಷ್ಣಭೈರೇಗೌಡ ಉತ್ತರ ನೀಡಿದರು. ಈ ಸಂದರ್ಭದಲ್ಲಿ ಸದನದ ಬಾವಿಯಲ್ಲಿ ಧರಣಿ ನಡೆಸುತ್ತಿದ್ದ ಬಿಜೆಪಿ ಸದಸ್ಯರು ಘೋಷಣೆ ಹಾಕುವ ಉತ್ಸಾಹವನ್ನೂ ಕಳೆದುಕೊಂಡಿದ್ದರು. ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರೂ ಬಿಜೆಪಿ ಧರಣಿ ಕೈ ಬಿಡಲಿಲ್ಲ. ಇದರೊಂದಿಗೆ ಕೆಲ ವಿಧೇಯಕವನ್ನು ಸರ್ಕಾರ ಮಂಡಿಸಿತು.

ಯಾರ್ಯಾರು ಏನೆಂದರು ?
ಜಮೀರ್‌ ಅಹ್ಮದ್‌ ಅವರನ್ನು ತಕ್ಷಣ ವಜಾಗೊಳಿಸಬೇಕು. ಕೋಮುವಾದಿಗಳು ಯಾರೆಂಬುದು ಈಗ ಸಾಬೀತಾಗಿದೆ. ನಿಮಗೇನು ಹಿಂದೂಳ ಮತ ಬೇಕಿಲ್ಲವೇ? ಸಿದ್ದರಾಮಯ್ಯ, ಶಿವಕುಮಾರ್‌ ಎಂದು ಹೆಸರಿಟ್ಟುಕೊಂಡು ಇಂಥ ಹಿಂದೂ ವಿರೋಧಿ ಹೇಳಿಕೆಯನ್ನು ಹೇಗೆ ಸಹಿಸುತ್ತೀರಿ ? ಸಿದ್ದರಾಮಯ್ಯ ಅವರಿಗೆ ನಿಜವಾಗಿಯೂ ಧಮ್‌, ತಾಕತ್ತಿದ್ದರೆ ಜಮೀರ್‌ ಅವರನ್ನು ಸಂಪುಟದಿಂದ ವಜಾಗೊಳಿಸಲಿ.
-ಆರ್‌.ಅಶೋಕ, ವಿಪಕ್ಷ ನಾಯಕ

ನನ್ನನ್ನು ನಿಮ್ಮ ಸ್ನೇಹಿತ ಎಂದು ಭಾವಿಸಿ ಧರಣಿ ನಿಲ್ಲಿಸಿ. ಸದನ ಹಾಗೂ ರಾಜ್ಯದ ಹೊರಗೆ ಆದ ಘಟನೆಯನ್ನು ಇಲ್ಲಿ ಪ್ರಸ್ತಾಪಿಸಿದರೆ ಹೇಗೆ ? ನಾನು ಈಗಾಗಲೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ. ದಯವಿಟ್ಟು ನೋಟಿಸ್‌ ನೀಡಿ, ಬೇರೆ ರೂಪದಲ್ಲಿ ಚರ್ಚೆ ನಡೆಸೋಣ. 20ರಿಂದ 25 ಕೋಟಿ ಖರ್ಚು ಮಾಡಿ ನಡೆಸುವ ಅಧಿವೇಶನದಲ್ಲಿ ಜನರಿಗೆ ಬೇಕಾದ ವಿಚಾರಗಳ ಬಗ್ಗೆ ಚರ್ಚೆ ನಡೆಸದಿದ್ದರೆ ಹೇಗೆ ? ನನ್ನ ಜಾಗದಲ್ಲಿ ನೀವಿದ್ದರೆ ಏನು ಮಾಡುತ್ತಿದ್ದಿರಿ?
-ಯು.ಟಿ.ಖಾದರ್‌, ವಿಧಾನಸಭಾಧ್ಯಕ್ಷ

ಕರ್ನಾಟಕ ಮಹ್ಮದ್‌ ಅಲಿ ಜಿನ್ಹಾ ಅವರಿಗೆ (ಜಮೀರ್‌) ಧಿಕ್ಕಾರ. ನೀವು ಕೂಡಾ ಅವರ ಪರ ನಿಲುವು ತಳೆಯುತ್ತೀರಾ ? ಸುವರ್ಣ ವಿಧಾನಸೌಧದಲ್ಲಿ ಜಿನ್ಹಾ ಹಾಗೂ ಓವೈಸಿ ಫೋಟೋ ಹಾಕಿಸಿಬಿಡಿ.
– ಬಸನಗೌಡ ಪಾಟೀಲ್‌ ಯತ್ನಾಳ್‌, ಬಿಜೆಪಿ ಸದಸ್ಯ

ಜಮೀರ್‌ ಪೀಠಕ್ಕೆ ಅಗೌರವ ಸೂಚಿಸಿಲ್ಲ. ಪೀಠಕ್ಕೆ ಗೌರವ ಸೂಚಿಸಬೇಕೆಂದು ಹೇಳಿದ್ದಾರೆ. ಅಂಥ ಶಬ್ದವನ್ನು ಅವರು ಬಳಸಿಲ್ಲ. ನಿಮ್ಮ ರಾಜಕಾರಣಕ್ಕೆ ಸದನದ ಸಮಯ ಹಾಳು ಮಾಡಬೇಡಿ.
– ಕೃಷ್ಣಬೈರೇಗೌಡ, ಕಂದಾಯ ಸಚಿವ

ಗಮನ ಸೆಳೆದ ಘೋಷಣೆಗಳು
– ಜಮೀರ್‌ ಅಹ್ಮದ್‌ ವಜಾ ಮಾಡಿ, ಖಾದರ್‌ ಅವರನ್ನು ಮಂತ್ರಿ ಮಾಡಿ
– ಜನಾಬ್‌ ಹಮಾರಾ ಬಾತ್‌ ಸುನೋ
– ಸಲಾಂ ಸ್ಪೀಕರ್‌ ಸಲಾಂ ಸ್ಪೀಕರ್‌

ಅಗತ್ಯ ಬಿದ್ದವರು ಊಟಕ್ಕೆ ಹೋಗಬಹುದು, ಭೋಜನ ವಿರಾಮಕ್ಕೆ ಇಂದು ಅವಕಾಶವಿಲ್ಲ ಎಂದು ಬಿಜೆಪಿ ಶಾಸಕರನ್ನು ಇಕ್ಕಟ್ಟಿಗೆ ಸಿಲುಕಿಸಿದರು. ಕಳೆದ ಬಾರಿ ಭೋಜನ ವಿರಾಮ ಸಂದರ್ಭದಲ್ಲಿ ತಾವು ಎದ್ದು ಹೋಗಿದ್ದರಿಂದ ಹೋರಾಟ ವಿಷಮ ಸ್ಥಿತಿಗೆ ಹೋಗಿದ್ದನ್ನು ಮರೆಯದ ಖಾದರ್‌ ತಾವೂ ಕೂಡ ಊಟಕ್ಕೆ ತೆರಳಲಿಲ್ಲ. ಕೊನೆಗೆ ಆ ಬಳಿಕ ಕಲಾಪ ಸಮಾವೇಶಗೊಂಡರೂ ಸರ್ಕಾರ ಬಿಜೆಪಿಯ ಹೋರಾಟವನ್ನು ಲೆಕ್ಕಿಸದೇ ಬರದ ಚರ್ಚೆಗೆ ಕಂದಾಯ ಸಚಿವ ಕೃಷ್ಣಭೈರೇಗೌಡ ಉತ್ತರ ನೀಡಿದರು. ಈ ಸಂದರ್ಭದಲ್ಲಿ ಸದನದ ಬಾವಿಯಲ್ಲಿ ಧರಣಿ ನಡೆಸುತ್ತಿದ್ದ ಬಿಜೆಪಿ ಸದಸ್ಯರು ಘೋಷಣೆ ಹಾಕುವ ಉತ್ಸಾಹವನ್ನೂ ಕಳೆದುಕೊಂಡಿದ್ದರು. ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರೂ ಬಿಜೆಪಿ ಧರಣಿ ಕೈ ಬಿಡಲಿಲ್ಲ. ಇದರೊಂದಿಗೆ ಕೆಲ ವಿಧೇಯಕವನ್ನು ಸರ್ಕಾರ ಮಂಡಿಸಿತು. ನಂತರ ಗಮನ ಸೆಳೆಯುವ ಸೂಚನೆಯನ್ನು ಸ್ವೀಕರಿಸಲಾಯಿತು. ಈ ರೀತಿ ಎಷ್ಟು ಹೊತ್ತು ಸದನ ನಡೆಸುತ್ತೀರಿ? ಎಂದು ವಿಪಕ್ಷ ನಾಯಕ ಆರ್‌.ಅಶೋಕ ಸ್ಪೀಕರ್‌ಗೆ ಪದೇ ಪದೇ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next