ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಭಿರುಸಿನ ಸಿದ್ಧತೆ ನಡೆಸುತ್ತಿರುವ ಬಿಜೆಪಿ, ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಸಮೀಕ್ಷೆಯನ್ನೂ ನಡೆಸುತ್ತಿದೆ. ಇದರೊಂದಿಗೆ ನವೆಂಬರ್ 1ರಿಂದ ಕೈಗೊಳ್ಳುತ್ತಿರುವ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ರಥಯಾತ್ರೆಯ ಯಶಸ್ಸೂ ಕೂಡ ಅಭ್ಯರ್ಥಿಗಳ ಆಯ್ಕೆಗೆ ಮಾನದಂಡವಾಗುವ ಸಾಧ್ಯತೆ ಇದೆ.
ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್, ಸಹ ಚುನಾವಣಾ ಉಸ್ತುವಾರಿ ಪಿಯೂಷ್ ಗೋಯೆಲ್, ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರರಾವ್ ಮತ್ತು ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಶನಿವಾರ ನಡೆದ ಹಾಲಿ ಮತ್ತು ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರ ಸಭೆಯಲ್ಲಿ ಇಂತಹ ಒಂದು ಮುನ್ಸೂಚನೆ ಸಿಕ್ಕಿದೆ ಎನ್ನಲಾಗಿದೆ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿ ಯಾರು ಎಂಬುದಕ್ಕಿಂತ ಪಕ್ಷ ಗೆಲ್ಲುವುದು ಮುಖ್ಯ. ಅಭ್ಯರ್ಥಿ ಆಕಾಂಕ್ಷಿಗಳ ಅರ್ಹತೆ ಆಧರಿಸಿ ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ವರಿಷ್ಠರು ನಿರ್ಧರಿಸುತ್ತಾರೆ. ಅದಕ್ಕೆ ಮೊದಲು ನವ ಕರ್ನಾಟಕ ನಿರ್ಮಾಣ ಪರಿವರ್ತನಾ ರಥಯಾತ್ರೆಯ ಯಶಸ್ಸಿಗೆ ಕೆಲಸ ಮಾಡಿ. ಇದಾದ ಬಳಿಕ ಟಿಕೆಟ್ ನೀಡುವ ಬಗ್ಗೆ ವರಿಷ್ಠರು ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳುವ ಮೂಲಕ ಪ್ರಕಾಶ್ ಜಾವಡೇಕರ್ ಅವರು ರಥಯಾತ್ರೆಯ ಯಶಸ್ಸೂ ಕೂಡ ಅಭ್ಯರ್ಥಿಗಳ ಆಯ್ಕೆಗೆ ಮಾನದಂಡವಾಗಲಿದೆ ಎಂಬ ಸೂಚನೆಯನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕರ್ನಾಟಕದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ಎಲ್ಲರ ಗುರಿಯಾಗಬೇಕು. ಆ ನಿಟ್ಟನಲ್ಲಿ ಪ್ರತಿಯೊಬ್ಬರೂ ಸಾಮಾನ್ಯ ಕಾರ್ಯಕರ್ತರಂತೆ ಕೆಲಸ ಮಾಡಬೇಕು. ಅಭ್ಯರ್ಥಿ ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಎಲ್ಲರೂ ಒಟ್ಟಾಗಿಯೇ ಕೆಲಸ ಮಾಡಬೇಕು. ಯಾರಿಗೆ ಟಿಕೆಟ್ ಸಿಕ್ಕಿದರೂ ಉಳಿದವರು ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಶ್ರಮಿಸಬೇಕು ಎಂದು ಅವರು ಎಲ್ಲಾ ಹಾಲಿ ಮತ್ತು ಮಾಜಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ವೇಳೆ ಪ್ರತಿಯೊಬ್ಬ ಸಂಸದ ಎರಡು ಕ್ಷೇತ್ರ, ಹಾಲಿ ಶಾಸಕ ತನ್ನ ಕ್ಷೇತ್ರವಲ್ಲದೆ ಇನ್ನೆರಡು ಕ್ಷೇತ್ರ ಹಾಗೂ ವಿಧಾನ ಪರಿಷತ್ ಸದಸ್ಯ ಒಂದು ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಅದೇರೀತಿ ಆಯಾ ಕ್ಷೇತ್ರದ ಜತೆಗೆ ಅಕ್ಕಪಕ್ಕದ ಕ್ಷೇತ್ರಗಳಲ್ಲೂ ಪ್ರಭಾವ ಹೊಂದಿರುವವರಿಗೆ ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಆದ್ಯತೆ ನೀಡಲಾಗುವುದು ಎಂಬ ಸೂಚನೆ ನೀಡಿ ಹೋಗಿದ್ದರು. ಇದೀಗ ರಥಯಾತ್ರೆ ಯಶಸ್ಸಿನಲ್ಲಿ ಅಮಿತ್ ಶಾ ನೀಡಿದ್ದ ಕಾರ್ಯಸೂಚಿಯನ್ನು ಅಳೆಯಲು ಬಿಜೆಪಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.