Advertisement

ಹಾಲಿ ಶಾಸಕರಲ್ಲಿ ಗೆಲ್ಲೋರ್‍ಯಾರು? ಸೋಲೋರ್‍ಯಾರು? 40 ಶಾಸಕರ ಮರು ಆಯ್ಕೆ ಸುಲಭವಲ್ಲ

11:36 PM Oct 18, 2022 | Team Udayavani |

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಆಂತರಿಕ ಸಮೀಕ್ಷೆ ಮಾಡಿಸಿದ್ದ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳಿಗೆ ಹಾಲಿ ಶಾಸಕರ ಪೈಕಿ ಮತ್ತೆ ಗೆಲ್ಲೋರೆಷ್ಟು-ಸೋಲೋರೆಷ್ಟು ಎಂಬ ಆತಂಕ ಶುರುವಾಗಿದೆ.

Advertisement

ಮೂರೂ ಪಕ್ಷಗಳು ಆಂತರಿಕವಾಗಿ ನಡೆಸಿರುವ ಸಮೀಕ್ಷೆಯಲ್ಲಿ ಈಗಿರುವ ಹಾಲಿ ಶಾಸಕರ ಪೈಕಿ ಬಿಜೆಪಿ 20, ಕಾಂಗ್ರೆಸ್‌ 15 ಹಾಗೂ ಜೆಡಿಎಸ್‌ನ 5 ಶಾಸಕರ ಗೆಲುವು ಕಷ್ಟ ಎಂಬ ಮಾಹಿತಿ ಲಭಿಸಿದೆ. ಹೀಗಾಗಿ, ಆ ಕ್ಷೇತ್ರಗಳಲ್ಲಿ ಗೆಲುವಿಗೆ ಏನು ಮಾಡಬೇಕು ಎಂಬ ಬಗ್ಗೆ ನಾಯಕರ ಮಟ್ಟದಲ್ಲಿ ಚರ್ಚೆಗಳು ನಡೆದಿವೆ.

ಸತತ ಎರಡು ಬಾರಿ ಗೆದ್ದವರು, ಕ್ಷೇತ್ರದ ಅಭಿವೃದ್ಧಿ ನಿರ್ಲಕ್ಷ್ಯ ಮಾಡಿದವರು, ಸಮುದಾಯದ ವಿರೋಧ ಕಟ್ಟಿಕೊಂಡವರು ಹೀಗೆ ನಾನಾ ಕಾರಣಗಳಿಗೆ ಹಾಲಿ ಶಾಸಕರಿಗೆ 40 ಕ್ಷೇತ್ರಗಳಲ್ಲಿ ಕಷ್ಟ ಎಂಬುದು ಮೂರೂ ಪಕ್ಷಗಳು ನಡೆಸಿರುವ ಸಮೀಕ್ಷೆಯಲ್ಲಿ ಕಂಡು ಬಂದಿದೆ. ಇದು ಚಿಂತೆಗೆ ಕಾರಣವಾಗಿದೆ.

ಕಷ್ಟಕರ ವಾತಾವರಣ
ಬಿಜೆಪಿ 2018ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ 104 ಕ್ಷೇತ್ರಗಳ ಜತೆಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ರಾಜೀನಾಮೆ ನೀಡಿ ಬಂದ 14 ಮಂದಿ ಬಿಜೆಪಿ ಚಿಹ್ನೆಯಡಿ ಆಯ್ಕೆಯಾಗಿದ್ದರಿಂದ ಸಂಖ್ಯಾಬಲ 118ಕ್ಕೆ ಏರಿದೆ. ಈ ಪೈಕಿ 20 ಕ್ಷೇತ್ರಗಳಲ್ಲಿ ಕಷ್ಟಕರ ವಾತಾವರಣವಿದೆ ಎಂಬುದು ಆಂತರಿಕ ಸಮೀಕ್ಷೆಯಲ್ಲಿ ಗೊತ್ತಾಗಿದೆ.

ಸಮೀಕ್ಷೆ ಶಾಕ್‌!
ಕಾಂಗ್ರೆಸ್‌ ಮತ್ತು ಜೆಡಿಎಸ್‌ನಿಂದ ಶಾಸಕರ ಪಕ್ಷಾಂತರ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿ ಹಳೇ ಮೈಸೂರು ಭಾಗದ ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಬಲ ಹೆಚ್ಚಿಸಿಕೊಂಡು ಈ ಬಾರಿ ಹೆಚ್ಚುವರಿಯಾಗಿ 10 ರಿಂದ 15 ಸ್ಥಾನ ಗೆದ್ದರೆ ಸಾಕು ಎಂಬ ಗುಂಗಿನಲ್ಲಿದ್ದ ಬಿಜೆಪಿ ನಾಯಕರಿಗೆ ಆಂತರಿಕ ಸಮೀಕ್ಷೆ ಶಾಕ್‌ ನೀಡಿದೆ ಎಂದು ಮೂಲಗಳು ತಿಳಿಸಿವೆ.

Advertisement

ಗಾಳ ಹಾಕಲು ಸಿದ್ಧತೆ!
ಬಿಜೆಪಿಗೆ ಇದುವರೆಗೂ ಗೆಲ್ಲದಿರುವ 60 ಕ್ಷೇತ್ರಗಳ ಬಗ್ಗೆ ಹೆಚ್ಚು ಗಮನ ಹರಿಸುವುದರ ಜತೆಗೆ ಇದೀಗ ಸೋಲುವ ಸಾಧ್ಯತೆ ಇರುವ ಕ್ಷೇತ್ರಗಳ ಬಗ್ಗೆಯೂ ತಲೆಬಿಸಿ ಉಂಟಾಗಿದೆ. ಹೀಗಾಗಿಯೇ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಸ್ವ ಸಾಮರ್ಥ್ಯ, ಪ್ರಭಾವಿ ನಾಯಕರಿಗೆ ಗಾಳ ಹಾಕಿ ಪ್ರಾಥಮಿಕ ಮಾತುಕತೆ ಮುಗಿಸಿದೆ ಎಂದು ತಿಳಿದು ಬಂದಿದೆ.

ಮೊದಲಿಗೆ 10 ರಿಂದ 15 ಶಾಸಕರನ್ನು ಸೆಳೆಯಲು ಕಾರ್ಯತಂತ್ರ ರೂಪಿಸಲಾಗಿತ್ತಾದರೂ ಇದೀಗ 20 ರಿಂದ 25 ಮಂದಿಗೆ ಕರೆತರುವ ಪ್ರಯತ್ನಕ್ಕೆ ಕೈ ಹಾಕಲಾಗಿದೆ ಎಂದು ಹೇಳಲಾಗಿದೆ.

ಕಾಂಗ್ರೆಸ್‌ನಲ್ಲೂ ತಳಮಳ
ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ಅತೀವ ವಿಶ್ವಾಸದಲ್ಲಿರುವ ಕಾಂಗ್ರೆಸ್‌ನಲ್ಲೂ ಆಂತರಿಕ ಸಮೀಕ್ಷೆಯ ಅನಂತರ ತಳಮಳ ಪ್ರಾರಂಭವಾಗಿದೆ. ಬಣ ರಾಜಕೀಯ, ನಾಯಕರಲ್ಲಿನ ಸಮನ್ವಯ ಕೊರತೆ ದೊಡ್ಡ ಮಟ್ಟದ ಪೆಟ್ಟು ಕೊಡಲಿದೆ, ಹಾಲಿ ಶಾಸಕರ ಸೋಲಿಗೂ ಇದು ಕಾರಣವಾಗಲಿದೆ ಎಂದು ಸಮೀಕ್ಷೆಯಲ್ಲಿ ಕಂಡುಬಂದಿದೆ. ಜತೆಗೆ, ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋಗಿರುವವರ ಕ್ಷೇತ್ರಗಳಲ್ಲಿ ಇನ್ನೂ ಸಮರ್ಥ ಅಭ್ಯರ್ಥಿಗಳು ದೊರಕಿಲ್ಲ. ಇದು ಕಾಂಗ್ರೆಸ್‌ಗೆ ಸವಾಲಾಗಿದೆ. ಜೆಡಿಎಸ್‌ನಲ್ಲಿ ಹಾಲಿ ಶಾಸಕರ ಪೈಕಿ ಐವರು ಗೆಲ್ಲುವುದು ಕಷ್ಟ ಎಂದಿದ್ದು ಪೈಕಿ ಕಾಂಗ್ರೆಸ್‌ ಹಾಗೂ ಬಿಜೆಪಿಯತ್ತ ಚಿತ್ತ ಹರಿಸಿರುವವರೂ ಇದ್ದಾರೆ ಎಂದು ಹೇಳಲಾಗಿದೆ.

ಹೊಸ ಮುಖ ತಲಾಷೆ?
ಈ ಮಧ್ಯೆ, ಬಿಜೆಪಿಯ ಕೇಂದ್ರ ತಂಡ ಕರ್ನಾಟಕಕ್ಕೆ ಬಂದಿಳಿದಿದ್ದು, ಪ್ರತೀ ಕ್ಷೇತ್ರದ ಬಗ್ಗೆ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸುತ್ತಿದೆ. ಈ ವರದಿ ಆಧಾರದ ಮೇಲೆಯೇ ಟಿಕೆಟ್‌ ಕೊಡುವುದು ಬಿಡುವುದು, ಹೊಸ ಮುಖ ತಲಾಷೆ ಮಾಡುವುದು ನಿರ್ಧಾರವಾಗಲಿದೆ ಎಂದು ಹೇಳಲಾಗಿದೆ.

– ಎಸ್‌. ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next