Advertisement

ಅತ್ತಿಂದಿತ್ತ, ಇತ್ತಿಂದತ್ತ..ಯಾರು, ಎಲ್ಲಿಗೆ? 

06:00 AM Feb 04, 2018 | Team Udayavani |

ವಿಧಾನಸಭಾ ಚುನಾವಣೆ ದಿನಗಣನೆ ಬೆನ್ನಲ್ಲೇ ಪಕ್ಷದಿಂದ ಪಕ್ಷಕ್ಕೆ ಹಾರುತ್ತಿರುವ ಪ್ರಮುಖ ನಾಯಕರು
ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಸೇರಿದಂತೆ ಹಲವು ಪಕ್ಷಗಳಲ್ಲಿ ವಿಧಾನಸಭಾ ಚುನಾವಣಾ ತಾಲೀಮು ಭರ್ಜರಿಯಾಗೇ ನಡೆಯುತ್ತಿರುವ ನಡುವೆಯೇ ಪ್ರಮುಖ ನಾಯಕರ ಪಕ್ಷಾಂತರ ಪರ್ವ ಶುರುವಾಗಿದೆ. ಬಿಜೆಪಿಯ ಪ್ರಮುಖ ನಾಯಕ ಎಂದೇ ಗುರುತಿಸಿಕೊಂಡಿದ್ದ ಆನಂದ್‌ ಸಿಂಗ್‌ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಬೆನ್ನಲ್ಲೇ, ಮಾಜಿ ಸಚಿವ ಎಸ್‌.ಎ.ರಾಮದಾಸ್‌ ಜೆಡಿಎಸ್‌ಗೆ ಸೇರಲಿದ್ದಾರೆ  ಎಂಬ ವದಂತಿ ಹರಡಿತ್ತಾದರೂ   ಖುದ್ದು ರಾಮದಾಸ್‌ ನಿರಾಕರಿಸಿದ್ದಾರೆ. ಈ ನಡುವೆ  ಕೂಡ್ಲಿಗಿ ಕ್ಷೇತ್ರದ ಪಕ್ಷೇತರ ಶಾಸಕ ಬಿ.ನಾಗೇಂದ್ರ ಕಾಂಗ್ರೆಸ್‌ ಸೇರಲು ಮುಂದಾಗಿದ್ದಾರೆ. ಮಾಜಿ ಸಚಿವ ಗೂಳಿಹಟ್ಟಿ ಶೇಖರ್‌ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈವರೆಗೆ ಜೆಡಿಎಸ್‌ಗೆ ನಿಷ್ಠರಾಗಿದ್ದ ದಿ.ಎಸ್‌.ಚಿಕ್ಕಮಾದು ಅವರ ಪುತ್ರ ಅನಿಲ್‌ ಕುಮಾರ್‌ ಜಿಪಂ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಫೆ.5ರಂದು ಬೆಂಗಳೂರಿನಲ್ಲಿ ಕಾಂಗ್ರೆಸ್‌  ಸೇರುವ ಮೂಲಕ ಮುಂಬರುವ ಚುನಾವಣೆಗೆ ಸನ್ನದ್ಧರಾಗಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೂ ಒಂದಷ್ಟು ಪ್ರಮುಖರು ಪಕ್ಷ ತೊರೆಯುವುದು ಖಚಿತವಾಗಿದೆ. ಇಡೀ ಬೆಳವಣಿಗೆ ಮೂರೂ ಪ್ರಮುಖ ಪಕ್ಷದ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ…

Advertisement

ಕೂಡ್ಲಿಗಿ ಶಾಸಕ ನಾಗೇಂದ್ರ ಕಾಂಗ್ರೆಸ್‌ಗೆ
ಬೆಂಗಳೂರು:
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಕ್ಷೇತ್ರದ ಪಕ್ಷೇತರ ಶಾಸಕ ಬಿ.ನಾಗೇಂದ್ರ ಅವರು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಮಾತುಕತೆ ನಡೆಸಿದರು.

ಫೆ.10 ರಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹೊಸಪೇಟೆಗೆ ಆಗಮಿಸಿದಾಗ ಅವರ ಸಮ್ಮುಖದಲ್ಲಿ ನಾಗೇಂದ್ರ ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ. ರಾಹುಲ್‌ ಗಾಂಧಿ ಹೊಸಪೇಟೆಗೆ ಆಗಮಿಸುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ನಾಗೇಂದ್ರಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಸಿದ್ದರಾಮಯ್ಯ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಾಗೇಂದ್ರ, ಕಾಂಗ್ರೆಸ್‌ ಪಕ್ಷ ಸೇರುವ ಕುರಿತು ಮುಖ್ಯಮಂತ್ರಿ ಜತೆ ಮಾತುಕತೆ ನಡೆಸಿದ್ದೇನೆ. ರಾಹುಲ್‌ ಗಾಂಧಿ ಹೊಸಪೇಟೆಗೆ ಬಂದಾಗ ಅಧಿಕೃತವಾಗಿ ಸೇರ್ಪಡೆಯಾಗುತ್ತೇನೆ ಎಂದರು.

ಜಿಪಂ ಸದಸ್ಯತ್ವಕ್ಕೆ ಅನಿಲ್‌ ಚಿಕ್ಕಮಾದು ರಾಜೀನಾಮೆ
ಮೈಸೂರು:
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಚ್‌.ಡಿ.ಕೋಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಾಕಾಂಕ್ಷಿಯಾಗಿರುವ ದಿ.ಎಸ್‌.ಚಿಕ್ಕಮಾದು ಅವರ ಪುತ್ರ ಅನಿಲ್‌ಕುಮಾರ್‌ ಜಿಲ್ಲಾ ಪಂಚಾಯತ್‌ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಾಳೆ ಅವರು ಕಾಂಗ್ರೆಸ್‌ ಸೇರಲಿದ್ದಾರೆ.

Advertisement

ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನ ಅವರಿಗೆ ಶನಿವಾರ ರಾಜೀನಾಮೆ ಪತ್ರ ಸಲ್ಲಿಸಿದ ಅನಿಲ್‌, “ಅನಿವಾರ್ಯ ಕಾರಣಗಳಿಂದಾಗಿ  ಸ್ವಇಚ್ಚೆಯಿಂದ ಜಿಪಂ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ತಿಳಿಸಿದ್ದಾರೆ.

ಎಚ್‌.ಡಿ.ಕೋಟೆ ಕ್ಷೇತ್ರದ ಶಾಸಕರಾಗಿದ್ದ ಎಸ್‌.ಚಿಕ್ಕಮಾದು ಅವರು ಅನಾರೋಗ್ಯದಿಂದ ನಿಧನರಾದ ಹಿನ್ನೆಲೆಯಲ್ಲಿ ಅವರ ಪುತ್ರ ಅನಿಲ್‌ಕುಮಾರ್‌, ಇದೇ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿಯವರು ಟಿಕೆಟ್‌ ನೀಡುವ ಭರವಸೆಯನ್ನೂ ನೀಡಿದ್ದರು. ಈ ಮಧ್ಯೆ, ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಅವರು ಜೆಡಿಎಸ್‌ಗೆ ಸೇರ್ಪಡೆಯಾಗಿದ್ದರಿಂದ ತಮಗೆ ಟಿಕೆಟ್‌ ತಪ್ಪಲಿದೆ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು. ಕಾಂಗ್ರೆಸ್‌ ಟಿಕೆಟ್‌ ಸಿಗುವ ಭರವಸೆಯೊಂದಿಗೆ ಸಿದ್ದರಾಮಯ್ಯ ಅವರ ಸೂಚನೆಯಂತೆ ಜಿಪಂ ಸದಸ್ಯತ್ವ ಹಾಗೂ ಜೆಡಿಎಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಫೆ.5ರಂದು ಬೆಂಗಳೂರಿನಲ್ಲಿ ಅವರು ಕಾಂಗ್ರೆಸ್‌  ಸೇರಲಿದ್ದಾರೆ.

ಆನಂದ ಸಿಂಗ್‌ ವಿರುದ್ಧ ಸ್ಪರ್ಧೆಗೆ ಸಿದ್ಧ : ಶ್ರೀರಾಮುಲು
ಹೊಸಪೇಟೆ
: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಒಪ್ಪಿದರೆ ಹೊಸಪೇಟೆ ವಿಜಯನಗರ ಕ್ಷೇತ್ರದ ಅಭ್ಯರ್ಥಿಯಾಗಿ ಆನಂದ ಸಿಂಗ್‌ ವಿರುದ್ಧ ಸ್ಪರ್ಧಿಸಲು ಸಿದ್ಧ ಎಂದು ಸಂಸದ ಶ್ರೀರಾಮುಲು ತಿಳಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಶಾಸಕ ಆನಂದ್‌ಸಿಂಗ್‌ ಅವರು ಬಿಜೆಪಿ ತೊರೆದ ಮೇಲೆ ಮುಂದಿನ ಚುನಾವಣೆಗೆ ಸ್ಪರ್ಧಿಸಲು ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಚಿಂತನೆ ನಡೆದಿದೆ. ಮಾಜಿ ಶಾಸಕ ಎಚ್‌.ಆರ್‌.ಗವಿಯಪ್ಪ ಪಕ್ಷಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದ್ದು, ಇನ್ನೂ ಯಾವುದೇ ನಿರ್ಧಾರವಾಗಿಲ್ಲ. ಪ್ರಬಲ ಅಭ್ಯರ್ಥಿಗಳು ಸಿಗದಿದ್ದರೆ ಸ್ಥಳೀಯ ಕಾರ್ಯಕರ್ತರ ಬೆಂಬಲದಿಂದ ಬಿಜೆಪಿ ಅಭ್ಯರ್ಥಿಯಾಗಿ ಆನಂದ್‌ಸಿಂಗ್‌ ವಿರುದ್ಧ ಸ್ಪರ್ಧೆ ಮಾಡುವುದು ಖಚಿತ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next