ಬೆಂಗಳೂರು: ಯಾವುದೇ ಗಳಿಗೆಯಲ್ಲಿ ಘೋಷಣೆಯಾಗಲಿರುವ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳ ಪೈಕಿ ಚನ್ನಪಟ್ಟಣ ಕ್ಷೇತ್ರ ಅತ್ಯಂತ ಮಹತ್ವ ಪಡೆದುಕೊಂಡಿದೆ. ಚುನಾವಣೆ ಘೋಷಣೆಗೂ ಮುನ್ನವೇ ರಾಜ್ಯದ ಗಮನ ಸೆಳೆಯುತ್ತಿದೆ.
ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಈ ಕ್ಷೇತ್ರದ ಟಿಕೆಟ್‌ನ ಪ್ರಬಲ ಆಕಾಂಕ್ಷಿ ಆಗಿರುವುದರಿಂದಲೇ ಈಗ ಎಲ್ಲರ ಗಮನ ಸೆಳೆದಿದೆ. ಸ್ವತಃ ಯೋಗೀಶ್ವರ್ ಅವರೇ “ನಾನು ಈ ಸಲ ಚುನಾವಣೆಗೆ ಸ್ಪರ್ಧಿಸುತ್ತೇನೆ’ ಎಂದು ಹಲವು ಸಲ ಬಹಿರಂಗವಾಗಿಯೇ ಹೇಳಿದ್ದಾರೆ. ಈ ಮಧ್ಯೆ ನಾನೇ ಕ್ಷೇತ್ರದ ಅಭ್ಯರ್ಥಿಯೆಂದು ಡಿಸಿಎಂ ಡಿ.ಕೆ.ಶಿವಕುಮಾರ್ ಘೋಷಿಸಿಕೊಂಡು ಕ್ಷೇತ್ರ ಪ್ರದಕ್ಷಿಣೆ ಮಾಡುತ್ತಿದ್ದಾರೆ.
ಈ ಬೆಳವಣಿಗೆ ಬಿಜೆಪಿ-ಜೆಡಿಎಸ್ ಮಿತ್ರ ಪಕ್ಷದೊಳಗೆ ಒಂದು ರೀತಿ ಮನಸ್ತಾಪಕ್ಕೆ ಕಾರಣವಾಗಿದೆ. ಜೆಡಿಎಸ್‌ನ ಯುವ ಘಟಕದ ಅಧ್ಯಕ್ಷ ಹಾಗೂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಲಿದ್ದಾರೆಂದು ಆರಂಭದಲ್ಲಿ ದಟ್ಟವಾದ ವದಂತಿಗಳಿದ್ದವು. ಆದರೆ ದಿನಗಳೆದಂತೆ ನಿಖಿಲ್ ಹಿಂದೆ ಸರಿದಂತೆ ಕಾಣುತ್ತಿದೆ. ಮಿತ್ರಪಕ್ಷಗಳಲ್ಲಿ ಯಾರಿಗೆ ಸೀಟು ಸಿಗಲಿದೆ ಎಂಬುದು ಇನ್ನೂ ನಿಗೂಢವಾಗಿಯೇ ಇದೆ.
ಜೆಡಿಎಸ್‌ನಿಂದ ಪಕ್ಷದ ಹಿರಿಯ ಕಾರ್ಯಕರ್ತ ಜಯಮುತ್ತು ಅವರು ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಗಳು ಸ್ಥಳೀಯವಾಗಿ ಹರಿದಾಡುತ್ತಿವೆ. ಈ ಮಧ್ಯೆ ನಾನು ಬಿಜೆಪಿಯಿಂದಲೇ ಸ್ಪರ್ಧಿಸಬೇಕೆಂಬ ಬಯಕೆ ಇದೆ, ಒಂದು ವೇಳೆ ಆಗದಿದ್ದರೆ ಪಕ್ಷೇತರನಾಗಿ ಕಣಕ್ಕಿಳಿಯಲಿದ್ದೇನೆ ಎಂಬ ಸಂದೇಶವನ್ನು ಯೋಗೀಶ್ವರ್ ಈಗಾಗಲೇ ಬಹಿರಂಗವಾಗಿ ರವಾನಿಸಿದ್ದಾರೆ.
ಶಿಗ್ಗಾವಿ: ಬೊಮ್ಮಾಯಿ ಪುತ್ರ ಕಣಕ್ಕೆ?
ಹಾವೇರಿ: ಶಿಗ್ಗಾವಿ- ಸವಣೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಕಣದಲ್ಲಿ ಬಿಜೆಪಿ ಟಿಕೆಟ್ ಗಾಗಿ ತೆರೆಮರೆಯಲ್ಲಿ ಕಸರತ್ತು ನಡೆಯುತ್ತಿದೆ. ಬಿಜೆಪಿಯಿಂದ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ, ಸ್ಥಳೀಯ ಬಿಜೆಪಿ ಮುಖಂಡರಾದ ಶ್ರೀಕಾಂತ ದುಂಡಿಗೌಡ್ರ, ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಶಶಿಧರ ಯಲಿಗಾರ, ಡಿ.ಎಸ್.ಮಾಳಗಿ ಟಿಕೆಟ್ ಬಯಸಿದ್ದಾರೆ. ಕಾಂಗ್ರೆಸ್ ಟಿಕೆಟ್‌ಗೆ ಬಹಿರಂಗವಾಗಿಯೇ ಪೈಪೋಟಿ ನಡೆಯುತ್ತಿದೆ.