Advertisement

ಅಸ್ಸಾಂ ತೈಲ ಬಾವಿಗೆ ಬೆಂಕಿ ; ಎರಡು ಕಿಲೋ ಮೀಟರ್ ದೂರಕ್ಕೆ ಬೆಂಕಿ ಗೋಚರ

05:26 PM Jun 09, 2020 | Hari Prasad |

ಗೌಹಾತಿ: ಇಲ್ಲಿನ ತೀನ್ ಸುಖಿಯಾ ಜಿಲ್ಲೆಯಲ್ಲಿರುವ ತೈಲ ಬಾವಿಯೊಂದರಲ್ಲಿ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ.

Advertisement

ಸುಮಾರು 14 ದಿನಗಳಿಂದ ಈ ತೈಲ ಬಾವಿಯಲ್ಲಿ ಅನಿಲ ಸೋರಿಕೆ ಉಂಟಾಗುತ್ತಿತ್ತು ಮತ್ತು ಇಂದು ಈ ಪ್ರದೇಶದಲ್ಲಿ ಭಾರೀ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿಕೊಂಡಿದೆ.

ಈ ಬೆಂಕಿಯ ತೀವ್ರತೆ ಸುಮಾರು ಎರಡು ಕಿಲೋಮೀಟರ್ ಗಳಷ್ಟು ದೂರಕ್ಕೆ ಕಾಣಿಸುವಷ್ಟು ತೀವ್ರ ಸ್ವರೂಪದ್ದಾಗಿದೆ ಎಂದು ಸ್ಥಳೀಯ ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೇ ವರದಿ ಮಾಡಿದೆ.

ಆಯಿಲ್ ಇಂಡಿಯಾ ಲಿಮಿಟೆಡ್ ನ ತಜ್ಞರು ಹಾಗೂ ಎಂಜಿನಿಯರ್ ಗಳು ಕಳೆದ ಮೇ 27ರಿಂದ ಉಂಟಾಗುತ್ತಿದ್ದ ಅನಿಲ ಹಾಗೂ ತೈಲ ಸೋರಿಕೆ ಸಮಸ್ಯೆಯನ್ನು ಪರಿಶೀಲಿಸಿ ದುರಸ್ತಿಗೊಳಿಸುತ್ತಿದ್ದ ಸಂದರ್ಭದಲ್ಲೇ ಈ ದುರ್ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.

Advertisement

ಘಟನಾ ಪ್ರದೇಶದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ, ಅಗ್ನಿಶಾಮಕ ದಳ ಹಾಗೂ ತುರ್ತು ಪರಿಸ್ಥಿತಿ ನಿಭಾವಣಾ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಘಟನೆಯಲ್ಲಿ ಇದುವರೆಗೂ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ ಎಂದು ತೈಲ ಕಂಪೆನಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಆದರೆ ಇಲ್ಲಿ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣವೇನೆಂದು ಮಾತ್ರ ಇನ್ನೂ ತಿಳಿದುಬಂದಿಲ್ಲ.

ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸರಬಾನಂದ ಸೋನೋವಾಲ್ ಅವರು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ಸೋರಿಕೆ ಪರಿಸ್ಥಿತಿಯನ್ನು ನಿಯಂತ್ರಿಸಲು ಸಿಂಗಾಪುರದಿಂದ ಮೂವರು ತಜ್ಞರ ತಂಡವೂ ಸೋಮವಾರ ಈ ಪ್ರದೇಶಕ್ಕೆ ಆಗಮಿಸಿತ್ತು. ಮತ್ತು ಈ ತಂಡ ಆಯಿಲ್ ಇಂಡಿಯಾ ಹಾಗೂ ಒ.ಎನ್.ಜಿ.ಸಿ. ತಂಡದೊಂದಿಗೆ ಪರಿಸ್ಥಿತಿಯ ಕುರಿತು ಮಾಹಿತಿ ವಿನಿಮಯ ಮಾಡಿಕೊಂಡಿತ್ತು.

ಈ ಪ್ರದೇಶದಲ್ಲಿ ವಾಸವಾಗಿದ್ದ ಸುಮಾರು 1,610 ಕುಟುಂಬಗಳನ್ನು ಈಗಾಗಲೇ ಸಮೀಪದ ನಿರಾಶ್ರಿತ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿತ್ತು. ನೈಸರ್ಗಿಕ ಅನಿಲ ಹಾಗೂ ತೈಲ ಸೋರುವಿಕೆಯ ಕಾರಣದಿಂದ ಈ ಭಾಗದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾವಿರಾರು ಮೀನುಗಳು, ನದಿ ಡಾಲ್ಫಿನ್ ಗಳು ಮತ್ತು ಹಕ್ಕಿಗಳು ಈಗಾಗಲೇ ಸಾವನ್ನಪ್ಪಿವೆ

Advertisement

Udayavani is now on Telegram. Click here to join our channel and stay updated with the latest news.

Next