Advertisement

100 ಕಥೆ ಕೇಳಿ ರಗಡ್‌ ಆದ್ರು

12:09 PM Dec 01, 2017 | |

“ನಾನು ನಿರ್ದೇಶಕರ ನಟನಾಗಿರೋಕೆ ಇಷ್ಟಪಡ್ತೀನಿ. ಹಾಗಾಗಿ, ಪಾತ್ರ ಬಯಸಿದ್ದನ್ನೇ ಕೊಡಬೇಕು, ಅದಕ್ಕೆ ತಕ್ಕ ತಯಾರಿಯೂ ಇರಬೇಕು ಎಂಬ ಪಾಲಿಸಿಯಲ್ಲೇ ಇದುವರೆಗೆ ಕೆಲಸ ಮಾಡುತ್ತಾ ಬಂದಿದ್ದೇನೆ. ಅಭಿಮಾನಿಗಳಿಗೆ ಇಷ್ಟವಾಗಿದ್ದು, ಜನ ಒಪ್ಪುವಂಥದ್ದನ್ನು ಕೊಡುವ ಉತ್ಸಾಹದಲ್ಲೇ ಸಿನಿಮಾ ಮಾಡ್ತೀನಿ…’

Advertisement

ಹೀಗೆ ಹೇಳಿ ಹಾಗೊಂದು ನಗೆ ಬೀರಿದರು ವಿನೋದ್‌ ಪ್ರಭಾಕರ್‌. ಅವರು ಹೀಗೆ ಮಾತಾಡಿದ ಸಂದರ್ಭ, “ರಗಡ್‌’ ಚಿತ್ರದ ಪತ್ರಿಕಾಗೋಷ್ಠಿ. ಇತ್ತೀಚೆಗೆ ಮುಹೂರ್ತ ನೆರವೇರಿತು. ಮೊದಲ ದೃಶ್ಯಕ್ಕೆ ದರ್ಶನ್‌ ಕ್ಲಾಪ್‌ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿ ಹೋಗುತ್ತಿದ್ದಂತೆಯೇ, ಅತ್ತ ಚಿತ್ರತಂಡ ಪತ್ರಕರ್ತರ ಮುಂದೆ ಕುಳಿತು ಮಾತಿಗೆ ಶುರುವಿಟ್ಟುಕೊಂಡಿತು. ವಿನೋದ್‌ ಪ್ರಭಾಕರ್‌
“ರಗಡ್‌’ ಕುರಿತು ಹೇಳುತ್ತಾ ಹೋದರು. 

“ನಾನಿಲ್ಲಿ ಒಬ್ಬ ಒರಟ. ತುಂಬಾ ರಫ್ ಅಂಡ್‌ ಟಫ್ ಆಗಿರುವಂತಹ ಪಾತ್ರವದು. ಹಾಗಂತ, ಇಲ್ಲಿ ಬರೀ ಹೊಡೆದಾಟವೇ ಇಲ್ಲ. ಇಲ್ಲೊಂದು ಮುದ್ದಾದ ಲವ್‌ ಸ್ಟೋರಿಯೂ ಇದೆ. ಪ್ರೀತಿ ಮತ್ತು ಆ್ಯಕ್ಷನ್‌ ನಡುವಿನ ಚಿತ್ರವಿದು. ಇಲ್ಲಿ ಮೊದಲ ಸಲ ನಾನು ಸಿಕ್ಸ್‌ಪ್ಯಾಕ್‌
ಮಾಡುತ್ತಿದ್ದೇನೆ. ಚಿತ್ರದ ಆರಂಭದಲ್ಲೇ ಅಂಡರ್‌ ವಾಟರ್‌ ದೃಶ್ಯ ಇರುವುದರಿಂದ, ನಾನಿಲ್ಲಿ ಈಜು ಕಲಿತು, ಸುಮಾರು 30 ಸೆಕೆಂಡ್‌ವರೆಗೆ ಅಂಡರ್‌ ವಾಟರ್‌ನಲ್ಲಿ ಇರುವುದನ್ನು ಅಭ್ಯಾಸ ಮಾಡುತ್ತಿದ್ದೇನೆ. ಚೆನ್ನೈನಲ್ಲಿ ಅದಕ್ಕಾಗಿಯೇ ತರಬೇತಿ ಪಡೆದಿದ್ದೇನೆ.
ನನ್ನ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ, ಈ ಕಥೆ, ಪಾತ್ರ ವಿಶೇಷವಾಗಿದೆ. ನನಗೆ ಅಭಿನಯಕ್ಕೆ ಒತ್ತು ಇರುವಂತಹ ಪಾತ್ರವೆಂದರೆ, ಇಷ್ಟ. ಇಲ್ಲಿ ಅದಕ್ಕೆ ಪೂರ್ಣಪ್ರಮಾಣದ ಜಾಗವಿದೆ’ ಅಂತ ಮಾತು ಮುಗಿಸಿದರು ವಿನೋದ್‌. 

ನಿರ್ದೇಶಕ ಮಹೇಶ್‌ಗೆ ಇದು ಮೊದಲ ಚಿತ್ರ. ಸಿನಿಮಾ ಬಗ್ಗೆ ಹೇಳಿಕೊಂಡರೆ ಕಥೆಯ ಗುಟ್ಟು ಗೊತ್ತಾಗುತ್ತೆ ಅಂತ ರಟ್ಟು ಮಾಡಲಿಲ್ಲ. “60 ದಿನಗಳ ಕಾಲ ಬೆಂಗಳೂರು, ಹಾಸನ, ಚಿಕ್ಕಮಗಳೂರು, ಮಡಿಕೇರಿ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಹಾಡುಗಳನ್ನು
ಎಲ್ಲೆಲ್ಲಿ ಚಿತ್ರೀಕರಿಸಬೇಕೋ ಗೊತ್ತಿಲ್ಲ. ಇಲ್ಲಿ ವಿನೋದ್‌ ಪ್ರಭಾಕರ್‌ ರಗಡ್‌ ಲುಕ್‌ ನಲ್ಲಿರುತ್ತಾರೆ ಹೊರತು, ಬೇರೇನೂ ಕೇಳಬೇಡಿ. ಎಲ್ಲವೂ ಸಸ್ಪೆನ್ಸ್‌, ಸಸ್ಪೆನ್ಸ್‌, ಸಸ್ಪೆನ್ಸ್‌’ ಅಂತ ಹೇಳಿ ಸುಮ್ಮನಾದರು ಮಹೇಶ್‌.

ನಿರ್ಮಾಪಕ ಅರುಣ್‌ಕುಮಾರ್‌ಗೆ ಇದು ಮೊದಲ ಚಿತ್ರವಂತೆ. ಅವರು ಕಳೆದ ಮೂರು ವರ್ಷಗಳಿಂದಲೂ ಒಳ್ಳೆಯ ಚಿತ್ರ ಮಾಡಬೇಕು ಅಂತ ಕಾದಿದ್ದರಂತೆ. ಅಷ್ಟೇ ಅಲ್ಲ, ಸುಮಾರು ನೂರು ಕಥೆ ಕೇಳಿದ್ದುಂಟಂತೆ! ಆದರೆ, ಆ ಪೈಕಿ ಒಂದೂ ಇಷ್ಟವಾಗಲಿಲ್ಲವಂತೆ. ಕೊನೆಗೆ “ರಗಡ್‌’ ಕಥೆ ಕೇಳಿ ಇಷ್ಟವಾಗಿ ಹಣ ಹಾಕಿ ಸಿನಿಮಾ ಮಾಡುವ ಧೈರ್ಯ ಮಾಡಿದ್ದಾರೆ. ಅಂದಹಾಗೆ, ನಿರ್ಮಾಪಕರು ಟ್ರಾವೆಲ್‌ ಏಜೆನ್ಸಿ ಇಟ್ಟುಕೊಂಡಿದ್ದಾರೆ. “ರಗಡ್‌’ ಇಷ್ಟವಾಗೋಕೆ ಕಾರಣ, ಇಲ್ಲಿ ತಾಯಿ ಸೆಂಟಿಮೆಂಟ್‌ ಅಂತೆ. ನಾಯಕಿ ಚೈತ್ರಾ ರೆಡ್ಡಿ ಇಲ್ಲಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಹುಬ್ಬಳ್ಳಿ ಭಾಷೆಯಲ್ಲಿ ಸಂಭಾಷಣೆಗಳಿವೆಯಂತೆ. ಸಂಗೀತ ನಿರ್ದೇಶಕ ಅಭಿಮನ್‌ರಾಯ್‌
ಮತ್ತೆ ಕಾಣಿಸಿಕೊಂಡಿದ್ದಾರೆ. “ರಗಡ್‌’ ಕಥೆ ಇಷ್ಟವಾಗಿದ್ದರಿಂದ ಇಲ್ಲಿ ನಾಲ್ಕು ಹಾಡುಗಳನ್ನು ಕೊಟ್ಟಿದ್ದಾರಂತೆ. ಜೈ ಆನಂದ್‌ ಚಿತ್ರಕ್ಕೆ ಕ್ಯಾಮೆರಾ ಹಿಡಿಯುತ್ತಿದ್ದಾರೆ.

Advertisement

ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next