Advertisement

Asian ಕ್ವಾಲಿಫೈಯರ್ ಶೂಟಿಂಗ್‌: ವರುಣ್‌, ಇಶಾಗೆ ಒಲಿಂಪಿಕ್ಸ್‌  ಟಿಕೆಟ್‌

12:43 AM Jan 09, 2024 | Team Udayavani |

ಜಕಾರ್ತಾ: ಭಾರತದ ಯುವ ಶೂಟರ್‌ಗಳಾದ ವರುಣ್‌ ತೋಮರ್‌ ಮತ್ತು ಇಶಾ ಸಿಂಗ್‌ ಪ್ಯಾರಿಸ್‌ ಒಲಿಂಪಿಕ್ಸ್‌ ಅರ್ಹತೆ ಸಂಪಾದಿಸಿದ್ದಾರೆ.

Advertisement

ಇಲ್ಲಿ ನಡೆಯುತ್ತಿರುವ ಏಷ್ಯನ್‌ ಕ್ವಾಲಿಫೈಯರ್ ಶೂಟಿಂಗ್‌ ಸ್ಪರ್ಧೆಯಲ್ಲಿ ವರುಣ್‌ ತೋಮರ್‌ ಮತ್ತು ಇಶಾ ಸಿಂಗ್‌ ಕ್ರಮವಾಗಿ ಪುರುಷರ ಹಾಗೂ ವನಿತಾ ವಿಭಾಗದ 10 ಮೀ. ಏರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದರು. ಇದರೊಂದಿಗೆ ಈ ವರ್ಷದ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿರುವ ಭಾರತದ ಶೂಟರ್‌ಗಳ ಸಂಖ್ಯೆ 15ಕ್ಕೆ ಏರಿತು. ಟೋಕಿಯೊ ಒಲಿಂಪಿಕ್ಸ್‌ ದಾಖಲೆ ಸರಿದೂಗಿತು. ಇದನ್ನು ಮೀರುವ ಅವಕಾಶ ಭಾರತದ ಮುಂದಿದೆ.

6 ಪದಕ ಗೆದ್ದ ಭಾರತ
ಸೋಮವಾರದ ಸ್ಪರ್ಧೆಯಲ್ಲಿ ಭಾರತ ಒಟ್ಟು 6 ಪದಕಗಳನ್ನು ಗೆದ್ದಿತು. ಇದರಲ್ಲಿ ತಂಡ ಸ್ಪರ್ಧೆಯಲ್ಲಿ ಒಲಿದ 2 ಚಿನ್ನದ ಪದಕಗಳೂ ಸೇರಿವೆ.

20 ವರ್ಷದ ವರುಣ್‌ ತೋಮರ್‌ ಫೈನಲ್‌ನಲ್ಲಿ 239.6 ಅಂಕ ಸಂಪಾದಿಸಿ ಅಗ್ರಸ್ಥಾನಿಯಾದರು. ಭಾರತದವರೇ ಆದ ಅರ್ಜುನ್‌ ಚೀಮಾ ಬೆಳ್ಳಿ (237.3) ಮತ್ತು ಮಂಗೋಲಿಯಾದ ದವಾಖು ಎಂಕೆôವನ್‌ ಕಂಚು ಗೆದ್ದರು (217.2).
ಇದಕ್ಕೂ ಮೊದಲು ವರುಣ್‌ ತೋಮರ್‌, ಅರ್ಜುನ್‌ ಚೀಮಾ ಮತ್ತು ಉಜ್ವಲ್‌ ಮಲಿಕ್‌ ಅವರನ್ನೊಳಗೊಂಡ ಭಾರತ ತಂಡ 10 ಮೀ. ಏರ್‌ ಪಿಸ್ತೂಲ್‌ ತಂಡ ಸ್ಪರ್ಧೆಯಲ್ಲಿ ಬಂಗಾರಕ್ಕೆ ಗುರಿ ಇರಿಸಿತ್ತು (1,740 ಅಂಕ). ವರುಣ್‌ ತೋಮರ್‌ ಜೂನಿಯರ್‌ ವಿಶ್ವ ಚಾಂಪಿಯನ್‌ ಆಗಿದ್ದು, ಒಲಿಂಪಿಯನ್‌ ಸೌರಭ್‌ ಚೌಧರಿ ಅವರ ಸಂಬಂಧಿಯಾಗಿದ್ದಾರೆ.

Advertisement

18 ವರ್ಷದ ಇಶಾ ಸಿಂಗ್‌ 243.1 ಅಂಕ ಗಳಿಸಿ ಸ್ವರ್ಣಸಾಧನೆಗೈದರು. ಪಾಕಿಸ್ಥಾನದ ಕಿಶ್ಮಲಾ ತಲತ್‌ ಬೆಳ್ಳಿ (236.3), ಭಾರತದ ರಿದಂ ಸಂಗ್ವಾನ್‌ ಕಂಚು ಜಯಿಸಿದರು (214.5). ಇಶಾ ಕೂಡ ವಿಶ್ವ ಚಾಂಪಿಯನ್‌ ಆಗಿದ್ದಾರೆ.
ವನಿತಾ 10 ಮೀ. ಏರ್‌ ಪಿಸ್ತೂಲ್‌ ತಂಡ ವಿಭಾಗದಲ್ಲಿ ರಿದಂ ಸಂಗ್ವಾನ್‌, ಇಶಾ ಸಿಂಗ್‌ ಮತ್ತು ಸುರಭಿ ರಾವ್‌ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.

16 ಒಲಿಂಪಿಕ್ಸ್‌ ಕೋಟಾ
ಜಕಾರ್ತಾದಲ್ಲಿ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ ಪ್ಯಾರಿಸ್‌ ಒಲಿಂಪಿಕ್ಸ್‌ಗೆ 16 ಕೋಟಾಗಳಿವೆ. 26 ದೇಶಗಳ 385 ಶೂಟರ್ ಇಲ್ಲಿ ಪಾಲ್ಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next