Advertisement
ಹರ್ಮನ್‌ಪ್ರೀತ್ 2ನೇ, 4ನೇ ಹಾಗೂ 32ನೇ ನಿಮಿಷದಲ್ಲಿ, ಮನ್‌ದೀಪ್ ಸಿಂಗ್ 18ನೇ, 24ನೇ ಹಾಗೂ 46ನೇ ನಿಮಿಷದಲ್ಲಿ ಗೋಲು ಸಿಡಿಸಿ ಬಾಂಗ್ಲಾಕ್ಕೆ ಆಘಾತವಿಕ್ಕಿದರು. ಉಳಿದ ಗೋಲುವೀರರೆಂದರೆ ಅಭಿಷೇಕ್ (41ನೇ, 57ನೇ ನಿಮಿಷ), ಲಲಿತ್ ಕುಮಾರ್ ಉಪಾಧ್ಯಾಯ (23ನೇ ನಿಮಿಷ), ಅಮಿತ್ ರೋಹಿದಾಸ್ (28ನೇ ನಿಮಿಷ), ನೀಲಕಂಠ ಶರ್ಮ (47ನೇ ನಿಮಿಷ) ಮತ್ತು ಗುರ್ಜಂತ್ ಸಿಂಗ್ (56ನೇ ನಿಮಿಷ). ಬುಧವಾರ ನಡೆಯುವ ಸೆಮಿಫೈನಲ್‌ನಲ್ಲಿ ಭಾರತ “ಬಿ’ ವಿಭಾಗದ ದ್ವಿತೀಯ ಸ್ಥಾನಿ ತಂಡವನ್ನು ಎದುರಿಸಲಿದೆ.
ವನಿತಾ ಡಬಲ್ಸ್ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ನಿರೀಕ್ಷೆಗೂ ಮೀರಿದ ಸಾಧನೆಗೈದ ಸುತೀರ್ಥ ಮುಖರ್ಜಿ-ಐಹಿಕಾ ಮುಖರ್ಜಿ ಕಂಚಿನ ಪದಕ ಗೆದ್ದರು. ಸೋಮವಾರ ನಡೆದ ಜಿದ್ದಾಜಿದ್ದಿ ಸೆಮಿಫೈನಲ್ ಪಂದ್ಯದಲ್ಲಿ ಇವರು ಕೊರಿಯಾ ಸ್ಪರ್ಧಿಗಳ ಕೈಯಲ್ಲಿ 3-4 ಅಂತರದ ಸೋಲನುಭವಿಸಿದರು. 2-3ರ ಹಿನ್ನಡೆ ಬಳಿಕ ಸುತೀರ್ಥ-ಐಹಿಕಾ ದಿಟ್ಟ ಹೋರಾಟ ನೀಡಿದರು. ಆದರೆ ಕೊರಿಯಾದ ಸುಗ್ಯೊಂಗ್ ಪಾಕ್ ಮತ್ತು ಸುಯೊಂಗ್ ಚಾ ಪಟ್ಟು ಸಡಿಲಿಸಲಿಲ್ಲ. ಅಂತಿಮವಾಗಿ 7-11, 11-8, 7-11, 11-8, 11-9, 5-11, 11-2 ಅಂತರದ ಗೆಲುವು ಸಾಧಿಸಿದರು. ಇವರ ಹೋರಾಟ ಭರ್ತಿ ಒಂದು ಗಂಟೆ ಕಾಲ ಸಾಗಿತು.
Related Articles
Advertisement
ರೋಲರ್ ಸ್ಕೇಟಿಂಗ್ 3,000 ಮೀ. ರಿಲೇ: ಅವಳಿ ಕಂಚುರೋಲರ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಭಾರತ ಅವಳಿ ಕಂಚಿನ ಸಾಧನೆಗೈದಿತು. ಈ ಎರಡೂ ಪದಕಗಳು ಪುರುಷರ ಹಾಗೂ ವನಿತಾ ವಿಭಾಗದ 3,000 ಮೀ. ರೀಲೇ ರೇಸ್ ಜಿ1ನಲ್ಲಿ ಒಲಿದವು.
ಮೊದಲು ವನಿತಾ ತಂಡ ಪದಕದಿಂದ ಸಿಂಗಾರಗೊಂಡಿತು. ಸಂಜನಾ ಬಥುಲ, ಕಾರ್ತಿಕಾ ಜಗದೀಶ್ವರನ್, ಹೀರಾಲ್ ಸಂಧು ಮತ್ತು ಆರತಿ ಕಸ್ತೂರಿ ರಾಜ್ 4:34.861 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದರು. ಚೈನೀಸ್ ತೈಪೆ ಚಿನ್ನ (4:19.47 ಸೆ.) ಮತ್ತು ದಕ್ಷಿಣ ಕೊರಿಯಾ ಬೆಳ್ಳಿ ಗೆದ್ದಿತು (4:21.146 ಸೆ.).
ಅನಂತರ ಪುರುಷರ ತಂಡ ಕೂಡ ಕಂಚಿನ ಸಾಧನೆಗೈದಿತು. ಆರ್ಯನ್‌ಪಾಲ್ ಸಿಂಗ್, ಆನಂದಕುಮಾರ್ ವೇಲ್ಕುಮಾರ್, ಸಿದ್ಧಾಂತ್ ಕಾಂಬ್ಳೆ ಮತ್ತು ವಿಕ್ರಮ್ ಇಂಗಾಲೆ 4:10.128 ಸೆಕೆಂಡ್‌ಗಳಲ್ಲಿ ದೂರವನ್ನು ಕ್ರಮಿಸಿದರು. ಇಲ್ಲಿಯೂ ಚೈನೀಸ್ ತೈಪೆ ಚಿನ್ನ (4:05.692 ಸೆ.) ಮತ್ತು ದಕ್ಷಿಣ ಕೊರಿಯಾ ಕಂಚು ಜಯಿಸಿತು (4:05.702).
ಇದರೊಂದಿಗೆ 2010ರ ಏಷ್ಯಾಡ್ ಸ್ಕೇಟಿಂಗ್ ದಾಖಲೆಯನ್ನು ಭಾರತ ಸರಿದೂಗಿಸಿತು. ಅಂದು ಪುರುಷರ ಫ್ರೀ ಸ್ಕೇಟಿಂಗ್ ಹಾಗೂ ಪೇರ್ ಸ್ಕೇಟಿಂಗ್‌ನಲ್ಲೂ 2 ಕಂಚಿನ ಪದಕ ಲಭಿಸಿತ್ತು.