ಹ್ಯಾಂಗ್ ಝೂ: ಇಲ್ಲಿ ನಡೆಯುತ್ತಿರುವ 19ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಪುರುಷರ ಕ್ರಿಕೆಟ್ ತಂಡ ಫೈನಲ್ ಪ್ರವೇಶ ಪಡೆದಿದೆ. ಶುಕ್ರವಾರ ಬೆಳಗ್ಗೆ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ಬಳಗವು ಬಾಂಗ್ಲಾದೇಶ ವಿರುದ್ಧ 9 ವಿಕೆಟ್ ಅಂತರದ ಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶವು 9 ವಿಕೆಟ್ ಕಳೆದುಕೊಂಡು 96 ರನ್ ಮಾತ್ರ ಗಳಿಸಿತು. ಗುರಿ ಬೆನ್ನತ್ತಿದ ಭಾರತ ಕೇವಲ 9.2 ಓವರ್ ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 97 ರನ್ ಮಾಡಿ ಜಯ ಸಾಧಿಸಿತು.
ಟಾಸ್ ಸೋತು ಬ್ಯಾಟಿಂಗ್ ಅವಕಾಶ ಪಡೆದ ಬಾಂಗ್ಲಾಗೆ ಭಾರತೀಯ ಸ್ಪಿನ್ನರ್ ಗಳು ಕಾಡಿದರು. ಸಾಯಿ ಕಿಶೋರ್ 12 ರನ್ ನೀಡಿ 3 ವಿಕೆಟ್ ಕಿತ್ತರೆ, ವಾಷಿಂಗ್ಟನ್ ಸುಂದರ್ ಅವರು 15 ರನ್ ನೀಡಿ 2 ವಿಕೆಟ್ ಪಡೆದರು. ಬಾಂಗ್ಲಾ ಪರ ಜಾಖರ್ ಅಲಿ 24 ರನ್, ಪರ್ವೇಜ್ ಹುಸೈನ್ 23 ರನ್ ಮಾಡಿದರು.
ಬ್ಯಾಟಿಂಗ್ ಆರಂಭಿಸಿದ ಭಾರತ ಮೊದಲ ಓವರ್ ನಲ್ಲಿಯೇ ಕಳೆದ ಪಂದ್ಯದ ಶತಕವೀರ ಯಶಸ್ವಿ ಜೈಸ್ವಾಲ್ ವಿಕೆಟ್ ಕಳೆದುಕೊಂಡಿತು. ಬಳಿಕ ಜೊತೆಯಾದ ರುತುರಾಜ್ ಗಾಯಕ್ವಾಡ್ ಮತ್ತು ತಿಲಕ್ ವರ್ಮಾ ಅಜೇಯ ಬ್ಯಾಟಿಂಗ್ ಮಾಡಿ ತಂಡಕ್ಕೆ ಜಯ ತಂದಿತ್ತರು. ತಿಲಕ್ ವರ್ಮಾ 26 ಎಸೆತಗಳಲ್ಲಿ ಆರು ಸಿಕ್ಸರ್ ನೆರವಿನಿಂದ 55 ರನ್ ಗಳಿಸಿದರೆ, ರುತುರಾಜ್ 40 ರನ್ ಮಾಡಿದರು.
ಪಾಕಿಸ್ತಾನ ಮತ್ತು ಅಫ್ಘಾನಿಸ್ಥಾನ ನಡುವಿನ ಎರಡನೇ ಸೆಮಿ ಫೈನಲ್ ನಲ್ಲಿ ಗೆದ್ದ ತಂಡವನ್ನು ಭಾರತ ಫೈನಲ್ ನಲ್ಲಿ ಎದುರಿಸಲಿದೆ. ಇದು ಅ.8ರಂದು ನಡೆಯಲಿದೆ.