ಹುಬ್ಬಳ್ಳಿ: ನಗರದ ರೇಸಿಂಗ್ ಪಟು ಅನೀಶ್ ಶೆಟ್ಟಿ ಅವರ ಸಾಧನೆ ಸರಣಿ ಮುಂದುವರಿದಿದೆ. ಆಸ್ಟ್ರೇಲಿಯಾದಲ್ಲಿ ನಡೆದ ಏಷ್ಯಾ ರೋಡ್ ರೇಸಿಂಗ್ ಚಾಂಪಿಯನ್ ಷಿಪ್-2018ರಲ್ಲಿ ಅಂಕಸಾಧನೆ ಮಾಡಿದ ಮೊದಲ ಭಾರತೀಯ ರೇಸರ್ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಅಗ್ರ 15ರ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ಅರ್ಹತೆ ಪಡೆದುಕೊಂಡಿದ್ದಾರೆ.
ಇದರ ಮುಂದಿನ ಚರಣ ಆಗಸ್ಟ್ 3ರಿಂದ ಆಗಸ್ಟ್ 5ರವರೆಗೆ ಚೆನ್ನೈನ ಮದ್ರಾಸ್ ಮೋಟರ್ ರೇಸ್ ಟ್ರ್ಯಾಕ್ ನಡೆಯಲಿದ್ದು ಅದಕ್ಕಾಗಿ ಸಿದ್ಧತೆ ನಡೆಸುತ್ತಿದ್ದಾರೆ. ಅಲ್ಲದೇ ಜೂನ್ 5ರಿಂದ ಜೂನ್ 7ರವರೆಗೆ ನಡೆದ ಇಂಡಿಯನ್ ನ್ಯಾಷನಲ್ ಮೋಟರ್‌ಸೈಕಲ್ ರೇಸಿಂಗ್ ಚಾಂಪಿಯನ್ ಷಿಪ್‌ನ ರೌಂಡ್-1ರಲ್ಲಿ 2 ರೇಸ್‌ಗಳಲ್ಲಿ ಗೆಲುವು ಸಾಧಿಸಿದ್ದರೆ, 2 ರೇಸ್‌ಗಳಲ್ಲಿ ಮೊದಲ ರನ್ನರ್‌ಅಪ್ ಸಾಧನೆ ಮಾಡಿದ್ದಾರೆ. ದ್ವಿತೀಯ ಸುತ್ತಿನಲ್ಲಿ 3ರೇಸ್ ಗೆಲುವು ಸಾಧಿಸಿದರೆ, 1ರಲ್ಲಿ ರನ್ನರ್‌ಅಪ್ ಸಾಧನೆ ಮೆರೆದಿರುವುದು ಅನೀಶ್ ಹೆಗ್ಗಳಿಕೆ.
ಸಾಫ್ಟ್ವೇರ್ ವೃತ್ತಿಯೊಂದಿಗೆ ಬೈಕ್ ರೇಸ್ ಪ್ರವೃತ್ತಿಗೂ ಆದ್ಯತೆ ನೀಡುತ್ತಿರುವ ಅನೀಶ್, ಎರಡರಲ್ಲೂ ಸಮತೋಲನ ಮಾಡಿಕೊಂಡು ಸಾಧನೆ ಮಾಡುತ್ತಿದ್ದಾರೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ರೇಸ್‌ಗಳಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಅನೀಶ್, ಚೆನ್ನೈನಲ್ಲಿ ನಡೆಯುವ ಏಷ್ಯಾ ರೋಡ್ ರೇಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದರೆ ವಿಶ್ವ ಚಾಂಪಿಯನ್ ಷಿಪ್‌ನಲ್ಲಿ ಸ್ಪರ್ಧಿಸುವ ಅವಕಾಶ ಪಡೆಯಲಿದ್ದಾರೆ. ಈ ರೇಸ್‌ನಲ್ಲಿ ಪಾಲ್ಗೊಳ್ಳಲಿರುವ ಕರ್ನಾಟಕದ ಏಕೈಕ ರೇಸರ್ ಎಂಬ ಶ್ರೇಯ ಅನೀಶ್ ಅವರದು.
ಚೆನ್ನೈನಲ್ಲಿ ನಡೆಯುವ ರೇಸ್ ಗಾಗಿ ಆಫ್ ರೋಡ್ ಪ್ರಾಕ್ಟೀಸ್ ಮಾಡುತ್ತಿದ್ದೇನೆ. ಗೋ ಕಾರ್ಟ್ ಟ್ರ್ಯಾಕ್ ನಲ್ಲಿ ಕೂಡ ಅಭ್ಯಾಸ ಮಾಡುತ್ತಿದ್ದು, ಪ್ರತಿ ದಿನ ಎರಡು ಗಂಟೆ ಫಿಟ್‌ನೆಸ್ ಗಾಗಿ ವ್ಯಯಿಸುತ್ತಿದ್ದೇನೆ. ಮೆಡಿಟೇಶನ್ ಮೂಲಕ ಏಕಾಗ್ರತೆ ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿದ್ದೇನೆ.
ಅನೀಶ್ ಶೆಟ್ಟಿ