ಇಸ್ಲಾಮಾಬಾದ್: ಉಗ್ರರಿಗೆ ಹಣಕಾಸು ನೆರವು ನೀಡುವುದನ್ನು ನಿಲ್ಲಿಸುವ ಸಂಬಂಧ ಪಾಕಿಸ್ಥಾನದಲ್ಲಿ ಪ್ರಗತಿ ಪರಿಶೀಲನೆಗೆ ಆಗಮಿಸಿರುವ ಹಣಕಾಸು ವಿಚಕ್ಷಣೆ ಕಾರ್ಯಪಡೆಯ (ಎಫ್ಎಟಿಎಫ್) ಏಷ್ಯಾ ಪೆಸಿಫಿಕ್ ಗ್ರೂಪ್ (ಎಪಿಜಿ) ಪಾಕಿಸ್ಥಾನದ ವಿರುದ್ಧ ವರದಿ ನೀಡುವ ಸಾಧ್ಯತೆಯಿದೆ.
ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಕಿಸ್ಥಾನಕ್ಕೆ ಮಾಡಲಾಗಿದ್ದ 40 ಶಿಫಾರಸುಗಳ ಪೈಕಿ ಕೆಲವು ಶಿಫಾರಸುಗಳಿಗೆ ಸಂಬಂಧಿಸಿ ಮಾತ್ರ ಪಾಕ್ ಸರಕಾರ ಕ್ರಮ ಕೈಗೊಂಡಿದೆ. ಉಳಿದ 28ಕ್ಕೂ ಹೆಚ್ಚು ಶಿಫಾರಸುಗಳನ್ನು ನಿರ್ಲಕ್ಷಿಸಿದೆ. ಹೀಗಾಗಿ ಮುಂದಿನ ಅಕ್ಟೋಬರ್‌ನಲ್ಲಿ ನಡೆಯಲಿರುವ ಎಜಿಪಿ ಸಭೆಯಲ್ಲಿ ಪಾಕಿಸ್ಥಾನ ಗ್ರೇ ಲಿಸ್ಟ್‌ನಲ್ಲೇ ಮುಂದುವರಿಯುವ ಅಥವಾ ಕಪ್ಪು ಪಟ್ಟಿಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಈಗಾಗಲೇ ಎಪಿಜಿ ಸಮಿತಿ ಈ ಸಂಬಂಧ ವಿಶ್ಲೇಷಣೆ ನಡೆಸಿದ್ದು, ಮುಂದಿನ ತಿಂಗಳಿನಲ್ಲಿ
ವರದಿಯನ್ನು ಸಲ್ಲಿಸಲಿದೆ.
ಪ್ಯಾರಿಸ್ ಮೂಲದ ಎಫ್ಎಟಿಎಫ್ ಈಗಾಗಲೇ ಪಾಕಿಸ್ಥಾನವನ್ನು ಗ್ರೇ ಗ್ರೂಪ್‌ಗೆ ಹಾಕಿದ್ದು, 2018ರ ಜೂನ್‌ನಿಂದ ಅದೇ ಗುಂಪಿನಲ್ಲಿದೆ. ಈ ನಡುವೆ ಏಷ್ಯಾ ಪೆಸಿಫಿಕ್ ಗ್ರೂಪ್ ಕೂಡ ಗ್ರೇ ಗುಂಪಿಗೆ ಹಾಕಿದಲ್ಲಿ ಪಾಕಿಸ್ಥಾನದ ಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ. ಭಾರತದಲ್ಲಿ ಉಗ್ರಗಾಮಿ ಚಟುವಟಿಕೆ ನಡೆಸುತ್ತಿರುವ ಜೈಶ್-ಎ-ಮೊಹಮ್ಮದ್ ಸಹಿತ ವಿವಿಧ ಉಗ್ರಗಾಮಿ ಸಂಘಟನೆಗಳ ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಪಿಜಿ ತಿಳಿಸಿದ್ದರೂ ಪಾಕಿಸ್ಥಾನ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ.
ಕಳೆದ ಸಭೆಯಲ್ಲಿ ಎಫ್ಎಟಿಎಫ್ ಕೂಡ ಪಾಕಿಸ್ಥಾನಕ್ಕೆ ಎಚ್ಚರಿಕೆ ನೀಡಿದ್ದು, ಮುಂದಿನ ಸಭೆಯ ಒಳಗೆ ಪೂರಕ ಕ್ರಮ ಕೈಗೊಳ್ಳದಿದ್ದಲ್ಲಿ ಕಪ್ಪು ಪಟ್ಟಿಗೆ ಸೇರಿಸುವ ಎಚ್ಚರಿಕೆಯನ್ನು ನೀಡಿತ್ತು.