ಪಲ್ಲೆಕೆಲೆ: ಏಷ್ಯಾಕಪ್ 2023 ಕೂಟ ಶ್ರೀಲಂಕಾ ಲೆಗ್ ನ ಮೊದಲ ಪಂದ್ಯವು ಇಂದು ಪಲ್ಲೆಕೆಲೆಯಲ್ಲಿ ನಡೆಯುತ್ತಿದೆ. ಆತಿಥೇಯ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ಬಿ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 164 ರನ್ ಗಳಿಗೆ ಸರ್ವಪತನ ಕಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಬಾಂಗ್ಲಾದೇಶ ಪರ ನಜಮುಲ್ ಹುಸೈನ್ ಶಾಂಟೋ ಹೊರತುಪಡಿಸಿ ಉಳಿದ್ಯಾವ ಬ್ಯಾಟರ್ ಗಳು ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದರು. ಒಂದೆಡೆ ವಿಕೆಟ್ ಉರುಳಿತ್ತಿದ್ದರೂ ಮತ್ತೊಂದೆಡೆ ಗಟ್ಟಿಯಾಗಿ ನಿಂತು ಆಡಿದ ಶಾಂಟೋ 122 ಎಸೆತಗಳಲ್ಲಿ 89 ರನ್ ಗಳಿಸಿ ಔಟಾದರು. ಶತಕ ತಪ್ಪಿಸಿಕೊಂಡರೂ ಬಾಂಗ್ಲಾದೇಶವು 150 ರನ್ ಗಡಿ ದಾಟುವಂತೆ ನೋಡಿಕೊಂಡರು.
ಇದನ್ನೂ ಓದಿ:Special Session; ಐದು ದಿನಗಳ ವಿಶೇಷ ಸಂಸತ್ ಅಧಿವೇಶನ ಕರೆದ ಕೇಂದ್ರ; ಕಾರಣ ಇನ್ನೂ ನಿಗೂಢ
ಶಾಂಟೋ ಹೊರತುಪಡಿಸಿ 20 ರನ್ ಗಳಿಸಿದ ತೌಹಿದ್ ಹೃದೊಯ್ ಅವರದ್ದೆ ಹೆಚ್ಚಿನ ಗಳಿಕೆ. ಅನುಭವಿಗಳಾದ ಮುಷ್ಫಿಕರ್ ರಹೀಂ 13 ರನ್ ಮಾಡಿದರೆ, ನಾಯಕ ಶಕೀಬ್ ಕೇವಲ 5 ರನ್ ಗಳಿಸಿದರು.
ಲಂಕಾ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಯುವ ವೇಗಿ ಮತೀಶ ಪತಿರಣ ನಾಲ್ಕು ವಿಕೆಟ್ ಪಡೆದರೆ, ಮಹೀಶಾ ತೀಕ್ಷಣ ಎರಡು ವಿಕೆಟ್ ಕಿತ್ತರು. ಧನಂಜಯ ಡಿಸಿಲ್ವ, ದುನಿತ್ ವೆಲ್ಲಲಗೆ ಮತ್ತು ನಾಯಕ ದಾಸುನ್ ಶನಕ ತಲಾ ಒಂದು ವಿಕೆಟ್ ಪಡೆದರು.