Advertisement

Asia Cup 2023; ಕಪ್ ಗೆದ್ದರೂ ಅಗ್ರ ಸ್ಥಾನಕ್ಕೇರದ ಭಾರತ; 2ನೇ ಸ್ಥಾನಕ್ಕಿಳಿದ ಆಸೀಸ್

10:54 AM Sep 18, 2023 | Team Udayavani |

ಮುಂಬೈ: ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ರವಿವಾರ ನಡೆದ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದೆ. ಶ್ರೀಲಂಕಾ ವಿರುದ್ದದ ಫೈನಲ್ ಮುಖಾಮುಖಿಯಲ್ಲಿ ಹತ್ತು ವಿಕೆಟ್ ಅಂತರದ ನಿರಾಯಾಸ ಗೆಲುವು ಸಾಧಿಸಿದೆ. ಈ ಮೂಲಕ ಭಾರತ ತಂಡವು ಎಂಟನೇ ಬಾರಿ ಏಷ್ಯಾ ಕಪ್ ಪ್ರಶಸ್ತಿ ಗೆದ್ದುಕೊಂಡಿದೆ.

Advertisement

ಈ ಬೃಹತ್ ಗೆಲುವಿನ ನಂತರವೂ ಐಸಿಸಿ ಏಕದಿನ ರ್ಯಾಂಕಿಂಗ್ ನಲ್ಲಿ ಟೀಂ ಇಂಡಿಯಾ ಅಗ್ರ ಸ್ಥಾನಕ್ಕೇರಲು ವಿಫಲವಾಗಿದೆ. ರವಿವಾರ ರಾತ್ರಿ ಐಸಿಸಿ ಶ್ರೇಯಾಂಕ ಪಟ್ಟಿ ಬಿಡುಗಡೆ ಮಾಡಿದ್ದು, ಭಾರತ ಎರಡನೇ ಸ್ಥಾನಕ್ಕೇರಿದೆ.

ಸೂಪರ್ ಫೋರ್ ಹಂತದ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಸೋಲನುಭವಿಸಿದ ಕಾರಣ ಭಾರತಕ್ಕೆ ರ್ಯಾಂಕಿಂಗ್ ನಲ್ಲಿ ಹಿನ್ನಡೆಯಾಗಿದೆ. ಮತ್ತೊಂದೆಡೆ ದಕ್ಷಿಣ ಆಫ್ರಿಕಾ ವಿರುದ್ಧ ಸತತ ಮೂರು ಪಂದ್ಯ ಸೋತು ಸರಣಿ ಕಳೆದುಕೊಂಡ ಆಸ್ಟ್ರೇಲಿಯಾವು ಅಗ್ರ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಜಾರಿದೆ.

ಏಷ್ಯಾ ಕಪ್ ಫೈನಲ್ ತಲುಪಲು ವಿಫಲವಾದರೂ ಪಾಕಿಸ್ತಾನವು ಅಗ್ರ ಸ್ಥಾನಕ್ಕೇರಿದೆ. ಭಾರತ ಮತ್ತು ಪಾಕಿಸ್ತಾನ ಎರಡೂ ಸದ್ಯ 115 ಅಂಕ ಹೊಂದಿದೆ. ಆದರೆ ಕಡಿಮೆ ಪಂದ್ಯ ಆಡಿದ ಆಧಾರದಲ್ಲಿ ಪಾಕ್ ಮೊದಲ ಸ್ಥಾನದಲ್ಲಿದೆ.

Advertisement

ಆಸ್ಟ್ರೇಲಿಯಾ ಮತ್ತೆ ಮೊದಲ ಸ್ಥಾನಕ್ಕೇರಬೇಕಾದರೆ ಮುಂದಿನ ಮೂರು ಪಂದ್ಯಗಳ ಸರಣಿಯಲ್ಲಿ ಅದು ಭಾರತವನ್ನು 3-0 ಅಂತರದಿಂದ ಸೋಲಿಸಬೇಕಿದೆ.

ಮುಂದಿನ ಆಸೀಸ್ ವಿರುದ್ದದ ಏಕದಿನ ಸರಣಿಯಲ್ಲಿ ಭಾರತ ಉತ್ತಮ ಪ್ರದರ್ಶನ ತೋರಿದರೆ ಮೊದಲ ಸ್ಥಾನಕ್ಕೆ ನೆಗೆಯಬಹುದು. ಮೊದಲ ಪಂದ್ಯ ಗೆದ್ದರೆ ಭಾರತ ಅಗ್ರ ಸ್ಥಾನಕ್ಕೇರಲಿದೆ. ಆದರೆ ಸರಣಿ ಗೆದ್ದರೆ ಅಗ್ರ ಸ್ಥಾನಿಯಾಗಿಯೇ ಭಾರತ ವಿಶ್ವಕಪ್ ಪ್ರವೇಶಿಸಲಿದೆ. ಭಾರತ ಏಕದಿನದಲ್ಲಿ ಮೊದಲ ರ್ಯಾಂಕ್ ಪಡೆದರೆ ಮೂರು ಮಾದರಿಯಲ್ಲಿ ಅಗ್ರ ಸ್ಥಾನದಲ್ಲಿರುವ ತಂಡವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next